ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕೇಂದ್ರದಲ್ಲೂ ಪ್ರತ್ಯೇಕ ಕೃಷಿ ಬಜೆಟ್

Vishwanath S
Updated On : 2 Apr 2014, 11:16 am

ಧಾರವಾಡ: ನಮ್ಮ ತಪ್ಪಿನಿಂದಲೇ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ಸಿನ ಪಾಲಾಗಿದ್ದು, ಅದನ್ನು ಸರಿಪಡಿಸಿಕೊಂಡು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವಂತೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ತಾಲೂಕಿನ ಉಪ್ಪಿನ ಬೆಟಗೇರಿಯಲ್ಲಿ ಮಂಗಳವಾರ ಅಭ್ಯರ್ಥಿ ಪ್ರಹ್ಲಾದ ಜೋಶಿ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಸಿದ್ದರಾಮಯ್ಯ ಸರ್ಕಾರ ಶೂನ್ಯ ಸಾಧನೆ ಮಾಡಿದೆ. ಬಿಜೆಪಿ ಆಡಳಿತವಿದ್ದಾಗ ದೇಶದಲ್ಲೇ 2ನೇ ಸ್ಥಾನದಲ್ಲಿ ಕರ್ನಾಟಕ, ಈಗ 12ನೇ ಸ್ಥಾನಕ್ಕೆ ಜಾರಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾದರೆ, ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಲು ಪ್ರಯತ್ನಿಸಲಾಗುವುದು ಎಂದರು.
ಸ್ವಾತಂತ್ರ್ಯಾನಂತರ ಜನಾಭಿಪ್ರಾಯದ ಮೂಲಕ ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿದೆ. ಮೋದಿ ಅವರ ಕೈ ಬಲಪಡಿಸಲು ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಿದೆ. ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಸಾಲ ಮನ್ನಾ, ಬಡ್ಡಿ ರಹಿತ ಸಾಲ ವಿತರಣೆ, ಹಳ್ಳಿಗಳಿಗೆ ಕುಡಿಯುವ ನೀರು, ಉಚಿತ ವಿದ್ಯುತ್, ಹೈನುಗಾರಿಕೆ ಪ್ರೋತ್ಸಾಹಧನ, ಸುವರ್ಣ ಗ್ರಾಮ ಯೋಜನೆ ಅನುಷ್ಠಾನಗೊಳಿಸಿದ್ದೆವು ಎಂದು ತಿಳಿಸಿದರು.
ಆಡಳಿತದಲ್ಲಿ ಆಗುತ್ತಿದ್ದ ಸೋರಿಕೆ ತಡೆದು ರು. 35 ಸಾವಿರ ಕೋಟಿಯಿಂದ ರು. 1.15 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದೇನೆ. ಬಿಜೆಪಿ ಅವಧಿಯಲ್ಲಿ ರಾಜ್ಯದುದ್ದಗಲಕ್ಕೂ ಆಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ನೋಡಿ ಬಿಜೆಪಿಗೆ ಮತ ನೀಡಿ ಎಂದು ವಿನಂತಿಸಿದರು.
ಮೋದಿ ಅಲೆ: ಕಾಂಗ್ರೆಸ್ ನಾಯಕರು ಯುದ್ಧಭೂಮಿಯಿಂದ ಓಡಿ ಹೋಗುತ್ತಿದ್ದು, ಪಕ್ಷದಲ್ಲಿ ನಾಯಕರೇ ಇಲ್ಲದಂತಾಗಿದೆ. ದೇಶದಲ್ಲಿ ಬಿಜೆಪಿ ಹಾಗೂ ಮೋದಿ ಗಾಳಿ ಬೀಸುತ್ತಿದೆ. ಪ್ರಹ್ಲಾದ ಜೋಶಿ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಆಯ್ಕೆ ಮಾಡುವಂತೆ ಯಡಿಯೂರಪ್ಪ ಕೋರಿದರು.
ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ಗ್ರಾಮೀಣಾಭಿವೃದ್ಧಿಗೆ ವಿಶೇಷ ಒತ್ತು ನೀಡುವ ಮೂಲಕ  ಶುದ್ಧ ಕುಡಿಯುವ ನೀರು ಸೇರಿದಂತೆ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕಾಂಗ್ರೆಸ್‌ನ ಭಾರತ್ ನಿರ್ಮಾಣ ಕ್ಯಾಂಪಿಯನ್ ಕೇವಲ ಬೋಗಸ್. ಯುಪಿಎ ಅಧಿಕಾರಾವಧಿಯಲ್ಲಿ ನಡೆದ ಭ್ರಷ್ಟಾಚಾರ, ಬೆಲೆ ಏರಿಕೆ, ಕಲ್ಲಿದ್ದಲು ಹಗರಣಗಳು ಎಲ್ಲರಿಗೂ ಗೊತ್ತು. ಇದರಿಂದ ಜನತೆ ರೋಸಿ ಹೋಗಿದ್ದು, ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿವೆ. ಜನ ಜೀವನ ದುಸ್ತರವಾಗಿದೆ. ಆದ್ದರಿಂದ ದೇಶದ ಸುರಕ್ಷತೆ, ಕೃಷಿ ರಂಗದ ಬಲವರ್ಧನೆಗಾಗಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿಯವರನ್ನು ಬೆಂಬಲಿಸಿ ಎಂದರು.
ಮಾಜಿ ಸಚಿವರಾದ ಬಸವರಾಜ ಬೊಮ್ಮಾಯಿ, ಮುರುಗೇಶ ನಿರಾಣಿ, ಮಾಜಿ ಶಾಸಕರಾದ ಸೀಮಾ ಮಸೂತಿ, ಎಸ್.ಐ. ಚಿಕ್ಕನಗೌಡರ, ಮೋಹನ ಲಿಂಬಿಕಾಯಿ, ಶಶಿ ಕುಲಕರ್ಣಿ ಹಾಗೂ ಗ್ರಾಮದ ಎಂ.ಸಿ. ಕಡಗದ, ವೀರಣ್ಣಾ ಪರಾಂಡೆ, ಚನ್ನಬಸಪ್ಪ ಮಸೂತಿ ಇದ್ದರು.
ವಿಶ್ವನಾಥ ಜಯಲಿಂಗಪ್ಪ ವಿಜಾಪುರ ಮತ್ತು ಕಲ್ಲಪ್ಪ ಹಟ್ಟಿ ಬಿಜೆಪಿ ಸೇರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement