ಹಳ್ಳಿಕೇರಿ ರೈತನಿಗೆ ಒಲಿದ ಟ್ರ್ಯಾಕ್ಟರ್ ಅದೃಷ್ಟ
ಅಣ್ಣಿಗೇರಿ: ಟ್ರ್ಯಾಕ್ಟರ್ ತಯಾರಿಕಾ ಕಂಪನಿ ಟಾಫೆ ಘೋಷಿಸಿದ್ದ ಲಾಟರಿ ಯೋಜನೆಯಲ್ಲಿ ಹಳ್ಳಿಕೇರಿ ಗ್ರಾಮದ ರೈತರೊಬ್ಬರಿಗೆ ಟ್ರ್ಯಾಕ್ಟರ್ ರೂಪದಲ್ಲಿ ಲಾಟರಿ ಹೊಡೆದಿದೆ.
ಕಳೆದ ವರ್ಷ ಮ್ಯಾಸ್ಸೆ ಫರ್ಗ್ಯೂಸನ್ ಟ್ರ್ಯಾಕ್ಟರ್ ತಯಾರಿಸುವ ಟಾಫೆ ಕಂಪನಿ ಧಾರವಾಡ, ಗದಗ, ಹಾವೇರಿ, ಜಿಲ್ಲಾ ವ್ಯಾಪ್ತಿಯಲ್ಲಿ ಮ್ಯಾಸ್ಸಿ ಫರ್ಗ್ಯೂಸನ್ ಕಂಪನಿ ಟ್ರ್ಯಾಕ್ಟರ್ ಖರೀದಿಸುವ ರೈತರಿಗೆ ಲಾಟರಿ ಯೋಜನೆಯನ್ನು ಪರಿಚಯಿಸಿ ಲಾಟರಿಯಲ್ಲಿ ವಿಜೇತರಾದ ರೈತರಿಗೆ ಈಗಾಗಲೇ ಖರೀದಿಸಿದಂತಹ ಇನ್ನೊಂದು ಟ್ರ್ಯಾಕ್ಟರ್ನ್ನು ಉಚಿತವಾಗಿ ನೀಡಲಾಗುವುದು ಎಂದು ಘೋಷಿಸಿತ್ತು.
ಲಾಟರಿ ಯೋಜನೆ ಪ್ರಕಾರ ಹಳ್ಳಿಕೇರಿ ಗ್ರಾಮದ ರೈತ ಎಸ್.ಟಿ. ಗಿರಡ್ಡಿ ಅವರನ್ನು ಟಾಫೆ ಕಂಪನಿ ಲಾಟರಿ ಎತ್ತುವುದಕ್ಕೆ ಆಹ್ವಾನಿಸಿತ್ತು. ಕಂಪನಿಯ ಆಹ್ವಾನ ಸ್ವೀಕರಿಸಿದ ಗಿರಡ್ಡಿ ಅವರು ಎತ್ತಿದ ಲಾಟರಿಯೊಂದರಲ್ಲಿ ಅವರದ್ದೇ ಗ್ರಾಮದ ಇನ್ನೊಬ್ಬ ರೈತಶಿವಣ್ಣ ಮಾಡಳ್ಳಿ ಅವರಿಗೆ ಲಾಟರಿ ರೂಪದಲ್ಲಿ ಇನ್ನೊಂದು ಟ್ರ್ಯಾಕ್ಟರ್ ಲಭಿಸಿದೆ. ಇತ್ತೀಚೆಗೆ ಟಾಫೆ ಕಂಪನಿಯಿಂದ ಹಳ್ಳಿಕೇರಿ ಗ್ರಾಮದಲ್ಲಿ ಸಮಾರಂಭ ಏರ್ಪಡಿಸಿ ರು. 7 ಲಕ್ಷ ಮೌಲ್ಯದ ಟ್ರ್ಯಾಕ್ಟರ್ನ್ನು ಅಣ್ಣಿಗೇರಿ ಹುಟ್ಟುವಳಿ ಸಹಕಾರಿ ಮಾರಾಟ ಹಾಗೂ ಸಂಸ್ಕರಣ ಸಂಘದ ಅಧ್ಯಕ್ಷ ಶಿವಣ್ಣ ಮಾಡಳ್ಳಿ ಅವರಿಗೆ ಹಸ್ತಾಂತರಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಂಪನಿಯ ಪ್ರಾದೇಶಿಕ ವ್ಯವಸ್ಥಾಪಕ ಚಿದಾನಂದ ಮೂರ್ತಿ, ವಚನ ಪರಿಪಾಲನೆ, ನಂಬಿಕೆ, ಪಾರದರ್ಶಕತೆ, ಗುಣಮಟ್ಟ, ಸೇವೆ ಕಂಪನಿಯ ಬದ್ಧತೆಯಾಗಿದ್ದು ಹಲವಾರು ದಶಕಗಳಿಂದ ರೈತರ ಮನದಲ್ಲಿ ನಮ್ಮ ಟ್ರ್ಯಾಕ್ಟರ್ಗಳು ಮನೆ ಮಾಡಿವೆ ಎಂದರು.
ಶಿವಣ್ಣ ಮಾಡಳ್ಳಿ ಸಹೋದರ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಚ್.ವಿ. ಮಾಡಳ್ಳಿ ಮಾತನಾಡಿ ಎಲ್ಲ ಕ್ಷೇತ್ರಗಳಂತೆ ಕೃಷಿ ಕ್ಷೇತ್ರವು ಮಾನವ ಸಂಪನ್ಮೂಲದ ಅಭಾವ ಎದುರಿಸುತ್ತಿದ್ದು, ಈ ಕ್ಷೇತ್ರಕ್ಕೆ ಯಾಂತ್ರೀಕರಣ ಅನಿವಾರ್ಯ. ಆಧುನಿಕ ತಂತ್ರಜ್ಞಾನದೊಂದಿಗೆ ಒಕ್ಕಲತನ ಉಪಕರಣಗಳನ್ನು ತಯಾರಿಸುವ ನಿಟ್ಟಿನಲ್ಲಿ ಟಾಫೆ ಕಂಪನಿ ಮುಂದಾಗಲಿ ಎಂದು ಹೇಳಿದರು. ಕೊಟ್ರೇಶ ಶಿರೂರು, ಪ್ರಕಾಶ ಅಂಗಡಿ ಮಾತನಾಡಿದರು.
ಹುಬ್ಬಳ್ಳಿ ಟಾಫೆ ಡೀಲರ್ ದೇಸಾಯಿ ಅಂಡ್ ಕಂಪನಿ ಮಾಲೀಕ ಧ್ರುವ ದೇಸಾಯಿ, ಅಧಿಕಾರಿಗಳಾದ ಎಸ್. ರಮೇಶ, ಜಿ.ವಿಶ್ವನಾಥನ್, ರಾಘವೇಂದ್ರ, ಶ್ರೀರಾಮ ಇದ್ದರು.