ಹೊಸ ವರ್ಷದಾರಂಭ ಯುಗಾದಿ
ಧಾರವಾಡ: ಹಿಂದುಗಳಿಗೆ ಯುಗಾದಿ ಹೊಸ ವರ್ಷ. ಯುಗಾದಿಯು ಚೈತ್ರ ಮಾಸದ ಮೊದಲ ದಿನವೂ ಹೌದು. ಇದೀಗ ಯುಗಾದಿ ಮರಳಿ ಬಂದಿದ್ದು, ಜಿಲ್ಲೆಯ ಜನತೆ ಬೇವು-ಬೆಲ್ಲದ ಹಬ್ಬಕ್ಕೆ ಸಿದ್ಧರಾಗಿದ್ದಾರೆ.
ಮಾರುಕಟ್ಟೆಯಲ್ಲಿ ಬೇವು-ಬೆಲ್ಲದ, ಹೂವಿನ ಮಾರಾಟ ಭರದಿಂದ ಸಾಗಿದೆ. ಭಾನುವಾರ ಅಮವಾಸ್ಯೆ ಹಾಗೂ ಸೋಮವಾರ ಯುಗಾದಿ ಇರುವ ಕಾರಣ ಹಣ್ಣು, ಹೂವಿನ ಬೆಲೆ ಗಗನಕ್ಕೆ ಏರಿದೆ. ಚುನಾವಣೆ, ಬಿರು ಬಿಸಿಲು ಹಾಗೂ ಬೆಲೆ ಏರಿಕೆ ಮಧ್ಯೆಯೂ ಯುಗಾದಿ ಆಚರಣೆಗೆ ಮಾತ್ರ ಜನರಲ್ಲಿ ಉತ್ಸಾಹ ಕುಂದಿಲ್ಲ.
ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ ಹಾಗೂ ಸರ್ವೇ-ಸಾಮಾನ್ಯವಾಗಿ ಬೇವು-ಬೆಲ್ಲ ತಿಂದು ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ. ಸಾಮಾನ್ಯವಾಗಿ ಈ ಹಬ್ಬದಲ್ಲಿ ಜನರು ತಳಿರು ತೋರಣವನ್ನು ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ತಳಿರು ತೋರಣವಾಗಿ ಕಟ್ಟುವರು. ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನಿಡುವರು. ಮುಂಜಾನೆ ಬೇಗನೆ ಎದ್ದು ಅಭ್ಯಂಜನ ಸ್ನಾನ ಮಾಡಿ ಪೂಜೆಯ ಬಳಿಕ ಹೊಸ ಬಟ್ಟೆ ಧರಿಸಿ ಪಂಚಾಂಗವನ್ನು ಮನೆಯ ಹಿರಿಯರು ಓದುವರು.
ಧಾರವಾಡ: ಪೊಲೀಸರಿಂದ ಬಾಲ್ಯ ವಿವಾಹಕ್ಕೆ ತಡೆ
ಧಾರವಾಡ: ತಾಲೂಕಿನ ಕೋಟೂರು ಗ್ರಾಮದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ವಿವಿಧ ಸಂಘಟನೆಗಳು ಹಾಗೂ ಗ್ರಾಮೀಣ ಠಾಣೆ ಪೊಲೀಸರು ಭಾನುವಾರ ನಿಲ್ಲಿಸಿದ್ದಾರೆ.ಗ್ರಾಮದಲ್ಲಿ ಮುಸ್ಲಿಂ ಜನಾಂಗದ 16 ವಯಸ್ಸಿನ ಅಪ್ರಾಪ್ತ ಬಾಲಕಿ ಮದುವೆ ಮಾಡಲು ಎಲ್ಲ ಸಿದ್ಧತೆಗಳು ನಡೆದಿದ್ದವು. ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಮಕ್ಕಳ ಸಹಾಯವಾಣಿ ಹಾಗೂ ಪೊಲೀಸರು ಮದುವೆಯನ್ನು ನಿಲ್ಲಿಸಿದ್ದಾರೆ. ಅಲ್ಲದೇ, ಬಾಲಕಿಗೆ 18 ವರ್ಷ ಆಗುವವರೆಗೂ ಮದುವೆ ಮಾಡುವುದಿಲ್ಲ ಎಂದು ಪಾಲಕರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಮದುವೆ ನಿಲ್ಲಿಸಿ ಬಾಲ್ಯ ವಿವಾಹ ಮಾಡುವಂತಿಲ್ಲ. ಇದು ಅಪರಾಧ ಎಂದು ಹೇಳಿದಾಗ ಪಾಲಕರಿಂದ ತೀವ್ರ ವಿರೋಧ ವ್ಯಕ್ತವಾಯಿತು. ನಂತರ ಪೊಲೀಸರನ್ನು ಕರೆಸಿ ಮದುವೆ ನಿಲ್ಲಿಸಬೇಕಾಯಿತು ಎಂದು ಮಕ್ಕಳ ರಕ್ಷಣಾ ಘಟಕದ ನಿಂಗಪ್ಪ ಮಡಿವಾಳ ಪತ್ರಿಕೆಗೆ ತಿಳಿಸಿದರು. ಈ ಸಂದರ್ಭ ದಲ್ಲಿ ಕಿಡ್ಸ್ ಸಂಸ್ಥೆಯ ರಮೇಶ ಕಿತ್ತೂರ, ಮಕ್ಕಳ ಸಹಾಯವಾಣಿಯ ರವಿ ಭಂಡಾರಿ ಹಾಗೂ ಪಿಎಸ್ಐ ರವಿ ಚೆನ್ನಣ್ಣವರ ಇದ್ದರು.
ಇಂದು ಶಾಖೆ ಉದ್ಘಾಟನೆ
ಹುಬ್ಬಳ್ಳಿ: ನಗರದ ಕುಸುಗಲ್ಲ ರಸ್ತೆಯ ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕಿನ 1315ನೇ ಶಾಖೆಯನ್ನು ಬ್ಯಾಂಕಿನ್ ಚೆನೈ ವಲಯಾಧಿಕಾರಿ ಎಂ. ಎಸ್. ಪರಮಾರ ಮಾ. 31ರಂದು ಉದ್ಘಾಟಿಸಲಿದ್ದಾರೆ.
ಪಂಚಾಂಗ ಶ್ರವಣ
ಧಾರವಾಡ: ಶ್ರೀ ಚಿದಂಬರ ಸೇವಾ ಸಮಿತಿ ಮದಿಹಾಳ, ಯುಗಾದಿ ಹಬ್ಬದಂದು ಮಾ. 31ರಂದು ಸಂಜೆ 5ಕ್ಕೆ ಪಂಚಾಂಗ ಶ್ರವಣ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಅಧ್ಯಕ್ಷ ಅಶೋಕ ಪಾಶ್ಚಾಪುರ ಉಪಾಧ್ಯಕ್ಷ ಗೋಪಾಲ ಕುಲಕರ್ಣಿ ತಿಳಿಸಿದ್ದಾರೆ.
ನಾಳೆಯಿಂದ ಸಂಧ್ಯಾವಂದನೆ
ಧಾರವಾಡ: ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯ ವತಿಯಿಂದ ಸಾಧನಕೇರಿ 3ನೇ ಕ್ರಾಸ್ನಲ್ಲಿ ಶ್ರೀ ಗೋವಿಂದಾಶ್ರಮದಲ್ಲಿ ಏ. 1ರಿಂದ 10ರ ವರೆಗೆ ಸಂಧ್ಯಾವಂದನೆ ಹಾಗೂ ಸಂಸ್ಕಾರ ಶಿಬಿರವನ್ನು ಬೆಳಗ್ಗೆ 8ರಿಂದ 10 ಹಾಗೂ ಸಂಜೆ 5ರಿಂದ 6 ಗಂಟೆಯವರೆಗೆ ಸಿ.ಎಲ್.ವೈ. ಕಾಲೇಜಿನ ಪ್ರಾಚಾರ್ಯ ವಿ.ಶ್ರೀಧರ ಶಾಸ್ತ್ರೀ ಇನಾಂದಾರ ಬೆಳಿಗ್ಗೆ ಹಾಗೂ ಸಂಜೆ ವಸುಧಾ ಇನಾಂದಾರ ನಡೆಯಿಸಿಕೊಡುತ್ತಾರೆ. ಇದಲ್ಲದೆ ಗೋವಿಂದಾಶ್ರಮದಲ್ಲಿ ವೈಯಕ್ತಿಕ ಹವ್ಯಕವ್ಯ ನೆರವೇರಿಸಲಾಗುವುದು. ಮಾಹಿತಿಗೆ ದೂ. 2443747 ಸಂಪರ್ಕಿಸಿ.
ಬೀಜ ನಿಷೇಧ: ಸ್ವಾಗತ
ಅಣ್ಣಿಗೇರಿ: ಮಹಿಕೋ ಕಂಪನಿಯ ಹೈಬ್ರಿಡ್ ಬಿಟಿ ಹತ್ತಿ ಬೀಜಗಳನ್ನು ಮಾರಾಟ ನಿಷೇಧ ಆದೇಶವನ್ನು ಧಾರವಾಡ ಜಿಲ್ಲಾ ರೈತ ಜಾಗೃತಿ ಸಮಿತಿ ಸ್ವಾಗತಿಸಿದೆ ಎಂದು ಅಣ್ಣಿಗೇರಿ ಎಪಿಎಂಸಿ ಸದಸ್ಯ ಅಧ್ಯಕ್ಷ ಪ್ರಕಾಶ ಅಂಗಡಿ ತಿಳಿಸಿದ್ದಾರೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾದ್ಯಂತ ರೈತರು ಮಹಿಕೋ ಕಂಪನಿಯ ಕನಕ ಜಾಕ್ ಪಾಟ್ ಕಳಪೆ ಹತ್ತಿ ಬೀಜ ಬಿತ್ತನೆ ಮಾಡಿ ನಷ್ಟ ಅನುಭವಿಸಿದ ರೈತರ ಪರವಾಗಿ ಕಂಪನಿಯ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಸಮಿತಿ ವತಿಯಿಂದ ಕಳೆದ ವಾರ ಕಂಪನಿಗೆ ರೈತರ ಪರವಾಗಿ ಎಚ್ಚರಿಕೆ ಸಹ ನೀಡಿ ಪರಿಹಾರ ವಿತರಿಸಲು 15 ದಿನ ಗಡವು ನೀಡಲಾಗಿತ್ತು. ರೈತರಿಗೆ ಮೋಸ ಮಾಡಿರುವ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿರುವುದು ಯೋಗ್ಯ ತೀರ್ಮಾನ. ಸರ್ಕಾರ ವಾರದೊಳಗೆ ಅರ್ಜಿಸಲ್ಲಿಸಿದ ಎಲ್ಲ ರೈತರಿಗೆ ಪರಹಾರ ಧನ ಬಿಡುಗಡೆಗೊಳಿಸಬೇಕು. ಹೆಚ್ಚಿನ ರೈತರು ಗೇಣಿದಾರರ ಆಗಿರುವುದರಿಂದ ಅವರ ಬಳಿ ಬೀಜ ಖರೀದಿಸಿರುವ ರಸೀದಿಗಳಿವೆ. ಆದರೆ, ಅವರ ಹೆಸರಿನಲ್ಲಿ ಪಹಣಿ ಪತ್ರಿಕೆ ಇರದಿರುವ ಕಾರಣ ಅರ್ಜಿ ಸಲ್ಲಿಸಿಲ್ಲ. ಅಂತಹ ರೈತರನ್ನು ಪರಿಹಾರ ನೀಡಿಕೆ ವ್ಯಾಪ್ತಿಗೆ ಒಳಪಡಿಸಬೇಕೆಂದು ಒತ್ತಾಯಿಸಿದರು. ಸುಹಾಸ ನವಲಗುಂದ ಚಂಬಣ್ಣ ಸುರಕೋಡ, ಮಂಜುನಾಥ ಮಾಯಣ್ಣವರ, ರಜೇಸಾಬ ಪಾಪಣ್ಣನವರ, ಬಸವರಾಜ ತೋಟಕಾರ, ಬಸವರಾಜ ಅಂಗಡಿ ಇದ್ದರು.
ಪುನರ್ ಪ್ರತಿಷ್ಠಾಪನೆ
ಕಲಘಟಗಿ: ಪಟ್ಟಣದ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ಮಾ. 31ರಂದು ಗ್ರಾಮದೇವಿಯರ ಪುನರ್ ಪ್ರತಿಷ್ಠಾಪನೆ ಜರುಗಲಿದೆ. ಮಾ. 20ರಂದು ಮುಕ್ತಾಯಗೊಂಡಿದ್ದ ಹೊರ ಆಚರಣೆ ನಂತರ, 9 ದಿನಗಳ ಕಾಲ ಗ್ರಾಮದೇವಿಯ ಜಾ ತ್ರೆ ನೆರವೇರಿತು. 31ರಂದು ಬೆಳಗ್ಗೆ ಯುಗಾದಿ ಪಾಡ್ಯದಂದು ಹೋಮ, ಹವನ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗ್ರಾಮದೇವಿಯರನ್ನು ಪುನರ್ ಪ್ರತಿಷ್ಠಾಪಿಸಲಾಗುವುದು.
ಕುಲಕರ್ಣಿ ಗೆಲವುನಿಶ್ಚಿತ: ಸಿದ್ದನಗೌಡ್ರ
ಕಲಘಟಗಿ: ಬಿಜೆಪಿಯಲ್ಲಿನ ಒಳ ಜಗಳಗಳಿಂದಾಗಿ ಈ ಬಾರಿ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿಯವರಿಗೆ ಗೆಲವು ಅಸಾಧ್ಯ ಎಂದು ಮಾಜಿ ಸಚಿವ ಪಿ.ಸಿ. ಸಿದ್ದನಗೌಡ್ರ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿಗೆ ಗೆಲುವು ಖಚಿತ ಎಂದರು. ಈ ಮತಕ್ಷೇತ್ರದಲ್ಲಿ ಹಿಂದಿನ ಮೂರು ಅವಧಿಯಲ್ಲಿ ಶಾಸಕನಾಗಿ, ಸಚಿವರಾಗಿ ಪಟ್ಟಣ, ಗ್ರಾಮಿಣ ಪ್ರದೇಶಗಳೆರಡರಲ್ಲೂ ಶಿಕ್ಷಣ, ಕೃಷಿ, ಕುಡಿಯುವ ನೀರಿನ ಯೋಜನೆಗಳಿಗೆ ತಾವು ಆದ್ಯತೆ ನೀಡಿದ್ದಾಗಿ ಹೇಳಿದರು. ತಾವು ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದು ಜನಸೇವೆಗಾಗಿಯೋ ಹೊರತು ಯಾವುದೇ ಅಧಿಕಾರದ ಉದ್ದೇಶದಿಂದ ಅಲ್ಲ ಎಂದು ಸ್ಪಷ್ಟಪಡಿಸಿದರು. ಜಿಪಂ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಕೃಷಿ ಚಟುವಟಿಯಿಂದ ರಾಜಕೀಯಕ್ಕೆ ಬಂದ ಯವಕ ವಿನಯ ಕುಲಕರ್ಣಿಯವರಿಗೆ ಸಿದ್ದನಗೌಡ್ರ ಅವರಿಂದಾಗಿ ಹೆಚ್ಚಿನ ಬೆಂಬಲ ಸಿಕ್ಕಿದೆ ಎಂದರು. ಕೆಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥ ಮುರಳ್ಳಿ, ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಎಂ. ಚಿಕ್ಕಣ್ಣವರ, ಚನ್ನಯ್ಯ ಹಿರೇಮಠ, ಸುಧೀರ ಬೋಳಾರ, ಶಂಕರಗಿರಿ ಭಾವನವರ, ವೃಷಭೇಂದ್ರ ಪಟ್ಟಣಶೆಟ್ಟಿ, ದಶರಥ ಗಾಮನಗಟ್ಟಿ, ಶಂಕರಗೌಡ ಭರಮಗೌಡ್ರ, ಎಸ್.ಎನ್. ರಾಯನಾಳ ಹಾಜರಿದ್ದರು.
8ರಂದು ರಾಜ್ಯಕ್ಕೆ ನರೇಂದ್ರ ಮೋದಿ
ಹುಬ್ಬಳ್ಳಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಏ. 8ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಧಾರವಾಡ ಲೋಕಸಭೆ ಅಭ್ಯರ್ಥಿ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. ಬಿಜೆಪಿ ಧಾರವಾಡ ಲೋಕಸಭೆ ಕ್ಷೇತ್ರ ಎಸ್ಟಿ ಮೋರ್ಚಾ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಏ. 8ರಂದು ರಾಜ್ಯಕ್ಕೆ ಆಗಮಿಸಲು ಮೋದಿ ಒಪ್ಪಿಗೆ ಸೂಚಿಸಿದ್ದಾರೆ. ರಾಜ್ಯಕ್ಕೆ ಏಳು ಬಾರಿ ಭೇಟಿ ನೀಡಿರುವ ಮೋದಿ, ಏ. 8ರಂದು ರಾಜ್ಯದ ಯಾವ್ಯಾವ ಕ್ಷೇತ್ರಗಳಲ್ಲಿ ಭೇಟಿ ನೀಡಿ ಪ್ರಚಾರ ಕೈಗೊಳ್ಳಲಿದ್ದಾರೆ ಎಂಬುದರ ಬಗ್ಗೆ ಶೀಫ್ರ ಕಾರ್ಯ ಪಟ್ಟಿ ತಯಾರಿಸಿ ಪಕ್ಷದ ವರಿಷ್ಠರಿಗೆ ಸಲ್ಲಿಸಲಾಗುವುದು ಎಂದರು.
ಮತಕ್ಕಾಗಿ ಭಯೋತ್ಪಾದನೆ ಬೆಂಬಲಿಸುತ್ತಿರುವ ಕಾಂಗ್ರೆಸ್
ಕನ್ನಡಪ್ರಭ ವಾರ್ತೆ, ಧಾರವಾಡ, ಏ. 1
ಕಾಂಗ್ರೆಸ್ ಪಕ್ಷ ದೇಶದಲ್ಲಿ ಮತಕ್ಕಾಗಿ ಭಯೋತ್ಪಾದನೆಗೆ ಬಾಹ್ಯ ಬೆಂಬಲ ನೀಡುತ್ತಿದೆ. ದೇಶದಲ್ಲಿ ಹಿಂದುತ್ವ ನಾಶವಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ಭದ್ರತೆಗಾಗಿ, ಆರ್ಥಿಕತೆಗಾಗಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಬೇಕೆಂದು ಪಕ್ಷೇತರ ಅಭ್ಯರ್ಥಿ ಪ್ರಮೋದ ಮುತಾಲಿಕ ಹೇಳಿದ್ದಾರೆ.
ಇಲ್ಲಿನ ಸಾಂಸ್ಕೃತಿಕ ಸಮುಚ್ಚಯದಲ್ಲಿ ಪ್ರೆಸ್ ಕ್ಲಬ್ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ನಮ್ಮ ನಾಯಕರು ಅಧಿಕಾರದ ಸ್ವಾರ್ಥಕ್ಕಾಗಿ ಅನ್ಯಾಯದಲ್ಲಿ ಭಾಗಿಯಾಗುವುದರೊಂದಿಗೆ ಹೀನ ಕೃತ್ಯಗಳಿಗೆ ಬೆಂಬಲ ನೀಡುತ್ತಿದ್ದಾರೆ. ಇಂತಹ ನಾಯಕರು ದೇಶಕ್ಕೆ ಬೇಕಾಗಿಲ್ಲ ಎಂದರು.
ಹಿಂದುತ್ವ ಉಳಿಯಲು ದೇಶದಲ್ಲಿ ಜಾತಿ, ಮತ, ಪಂಥಗಳ ಭೇದ ಭಾವವಿಲ್ಲದೇ ದೇಶ ಶಾಂತಿ ಹಾಗೂ ಸಮೃದ್ಧಿಯಿಂದ ಇರಬೇಕಾದರೆ ನರೇಂದ್ರ ಮೋದಿಯೇ ಇದಕ್ಕೆ ಉತ್ತರ ಎಂದು ತಿಳಿಸಿದರು.
ತಾವು ಯಾವುದೇ ಒಂದು ಜನಾಂಗದ ವಿರೋಧಿಯಲ್ಲ. ದೇಶದ ಅನ್ನ ತಿಂದು ದೇಶಕ್ಕೆ ದ್ರೋಹ ಬಗೆಯುವಂಥವರ ವಿರೋಧಿ ತಾವು. ದೇಶ ದ್ರೋಹ ಕೆಲಸದಲ್ಲಿ ಯಾವ ಜಾತಿಯ ಜನರಿದ್ದರೂ ಅವರನ್ನು ವಿರೋಧಿಸುವುದಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ವಕೀಲ ಬಸವಪ್ರಭು ಹೊಸಕೇರಿ ಮಾತನಾಡಿ, ದೇಶದ ಹಿತಕ್ಕಾಗಿ ಉತ್ತಮರನ್ನು ಆಯ್ಕೆಮಾಡುವ ಮನೋಭಾವ ತಾಳಬೇಕು ಎಂದು ಸಲಹೆ ನೀಡಿದರು.