ಮತ್ತೆ ಅಕ್ರಮ ಮರಳು ಮಾಫಿಯಾ
ಕನ್ನಡಪ್ರಭ ವಾರ್ತೆ, ಕಾರಟಗಿ, ಏ. 3
ಗಂಗಾವತಿ ತಾಲೂಕಿನ ತುಂಗಭದ್ರಾ ನದಿ ಪಾತ್ರದ ನಂದಿಹಳ್ಳಿ ಸೀಮೆಯಲ್ಲಿ ಅಕ್ರಮ ರಸ್ತೆ ನಿರ್ಮಿಸಿ ನದಿ ಮೂಲಕ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಗುರುವಾರ ರಾತ್ರಿ ದಾಳಿ ನಡೆಸಿ ಅಕ್ರಮ ದಾರಿ ನಾಶಪಡಿಸಿ, ಜೆಸಿಬಿ ಸೇರಿದಂತೆ ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಾರ್ಚ್ 16ರಂದು ನದಿ ಮೂಲಕ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ಕುರಿತು ಅಧಿಕಾರಿಗಳು ಖಚಿತ ಮಾಹಿತಿ ಪಡೆದು ದಾಳಿ ನಡೆಸಿ ದಾರಿ ನಾಶಪಡಿಸಿದ್ದರು. ಜತೆಗೆ ಲೋಕಸಭೆ ಚುನಾವಣೆ ಮುಗಿಯುವವರೆಗೆ ನದಿ ಮೂಲಕ ಮರಳು ಗಣಿಗಾರಿಕೆ ಮಾಡುವುದಕ್ಕೆ ನಿರ್ಬಂಧ ಹೇರಿದ್ದರು. ಆದರೆ ಕೆಲ ಪ್ರಭಾವಿಗಳು ವಾರದಿಂದ ಮತ್ತೆ ಅದೇ ದಂಧೆ ನಡೆಸಿದ್ದರು. 'ಕನ್ನಡಪ್ರಭ'ಕ್ಕೆ ಲಭ್ಯವಾದ ಮಾಹಿತಿ ಪ್ರಕಾರ ನಂದಿಹಳ್ಳಿ ಸೀಮೆಯ ತುಂಗಭದ್ರಾ ನದಿ ಪಾತ್ರದಲ್ಲಿ ಸರ್ವೇ ನಂ. 3,4,5 ಮತ್ತು, 14,15 ಹಾಗೂ 16ರಲ್ಲಿ ಮರಳು ಪಡೆಯಲು ಅನುಮತಿ ನೀಡಲಾಗಿತ್ತು. 18 ಎಕರೆ ಪೈಕಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೇವಲ 9 ಎಕರೆಯಲ್ಲಿ ಮಾತ್ರ ಮರಳು ಪಡೆಯುವಂತೆ ಅನುಮತಿ ನೀಡಿತ್ತು. ಆದರೆ ಮರಳು ಮಾಫಿಯಾ ಎಲ್ಲ ಪ್ರದೇಶದಲ್ಲಿ ಮರಳು ಪಡೆದು ಅಕ್ರಮವಾಗಿ ಸಾಗಿಸುತ್ತಿತ್ತು.
ವಿಚಿತ್ರ ಎಂದರೆ ಸರ್ಕಾರಕ್ಕೆ ಮರಳು ಶುಲ್ಕ ತುಂಬಿ ಟ್ರ್ಯಾಕ್ಟರ್ನಿಂದ ಮರಳು ಪಡೆಯಬೇಕು. ಆದರೆ ನಂದಿಹಳ್ಳಿ ಹಾಗೂ ಕಾರಟಗಿಯ ಕೆಲ ರಾಜಕಾರಣಿ ಹಿಂಬಾಲಕರು ನಂದಿಹಳ್ಳಿಯಲ್ಲಿ ಎರಡು ದಾರಿಗಳನ್ನು ನಿರ್ಮಿಸಿ ಮರಳು ಸಾಗಾಟ ನಡೆಸಿದ್ದರು. ವಾರದಿಂದ ಇದೇ ದಂಧೆ ಮತ್ತೇ ತಲೆ ಎತ್ತಿತ್ತು. ಖಚಿತ ಮಾಹಿತಿ ಪಡೆದ ಕೊಪ್ಪಳ ಎಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ ಕಾರಣ ಗುರುವಾರ ಸಂಜೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ದಿನೇಶ್, ನವೀನ್, ಲೋಕೋಪಯೋಗಿ ಇಲಾಖೆ ಎಇಇ ಶಿವಾನಂದ್ ನಾಯಕ್, ಉಪ ತಹಸೀಲ್ದಾರ್ ವಿಶ್ವನಾಥ ಮತ್ತು ಕಾರಟಗಿ ಪಿಎಸ್ಐ ಉದಯರವಿ ನೇತೃತ್ವದ ತಂಡ ದಾಳಿ ನಡೆಸಿತು.
ಪರಾರಿಗೆ ಯತ್ನ: ಗುರುವಾರ ಸಂಜೆ 6.30ರ ಸುಮಾರಿಗೆ ಅಧಿಕಾರಿಗಳ ವಾಹನ ನೋಡಿದ ಮರಳು ಎತ್ತುವ ಜೆಸಿಬಿ ಅಲ್ಲಿಂದ ಮಾರ್ಗ ಬದಲಾಯಿಸಿ ಪರಾರಿಗೆ ಯತ್ನಿಸಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಜೆಸಿಬಿ ತಡೆದು ವಶಕ್ಕೆ ಪಡೆದರು. ಮಾರ್ಚ್ 16ರಂದು ಅಧಿಕಾರಿಗಳು ನದಿಯಲ್ಲಿನ ಬ್ಲಾಕ್ ಬಂದ್ ಮಾಡಿದ್ದರು. ಆದರೆ ಮರಳು ಮಾಫಿಯಾ ಆ ಬ್ಲಾಕ್ನ್ನು ನಾಶಪಡಿಸಿ ಅಕ್ರಮ ದಂಧೆಗೆ ಇಳಿದಿದ್ದು ಪತ್ತೆಯಾಗಿದೆ.
ಬೆದರಿಕೆ: ಈ ನಡುವೆ ಅಧಿಕಾರಿಗಳು ನದಿಪಾತ್ರದ ಅಕ್ರಮ ರಸ್ತೆಗೆ ದಾಳಿ ಮಾಡಿ ಬ್ಲಾಕ್ ಪರಿಶೀಲನೆ ಮಾಡುತ್ತಿದ್ದ ವೇಳೆ ಮುಖಂಡರೊಬ್ಬರು ಅಧಿಕಾರಿಯೊಬ್ಬರಿಗೆ ದೂರವಾಣಿ ಮೂಲಕ ಬೆದರಿಕೆ ಹಾಕಿದ್ದು ಪೊಲೀಸರ ಗಮನಕ್ಕೆ ಬಂದಿದೆ. ಇಷ್ಟು ದಿನ ಇಲ್ಲದ ದಾಳಿ ಈಗ ಯಾಕೆ? ನಮಗೆ ಸಂಬಂಧಿಸಿದ ಟ್ರ್ಯಾಕ್ಟರ್ಗಳನ್ನು ವಶಪಡಿಸಿಕೊಂಡು ಠಾಣೆಗೆ ತೆಗೆದುಕೊಂಡು ಹೋದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಅಕ್ರಮ ದಾರಿ ಮಾಡಿದ್ದ ಮತ್ತೊಂದು ಗುಂಪಿನ ಸುಮಾರು 15ರಿಂದ 20 ಜನ ಅಧಿಕಾರಿಗಳೊಂದಿಗೆ 7.30ರ ಸುಮಾರಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಯಾವುದೇ ಕಾರಣಕ್ಕೂ ದಾರಿ, ಬ್ಲಾಕ್ ಬಂದ್ ಮಾಡಬೇಡಿ, ಜೆಸಿಬಿ, ಟ್ರ್ಯಾಕ್ಟರ್ಗಳನ್ನು ವಶಕ್ಕೆ ತೆಗೆದುಕೊಳ್ಳಬೇಡಿ ಎಂದು ಪಟ್ಟುಹಿಡಿದಿದೆ. ಆದರೆ ಅಧಿಕಾರಿಗಳು ಮೇಲಾಧಿಕಾರಿಗಳ ಸೂಚನೆ ಮೇರೆಗೆ ಈ ಕ್ರಮ ಎಂದಷ್ಟೇ ಉತ್ತರಿಸಿದ್ದಾರೆ.
ರಾತ್ರಿ 8ಕ್ಕೆ ಅಧಿಕಾರಿಗಳು ಎಲ್ಲ ವ್ಯವಸ್ಥೆ ಮಾಡಿಕೊಂಡು ಮರಳು ಮಾಫಿಯಾ ನಿರ್ಮಿಸಿದ್ದ ಅಕ್ರಮ ದಾರಿ ನಾಶಕ್ಕೆ ಮುಂದಾದರು. ಒಂದು ಮೂಲಗಳ ಪ್ರಕಾರ 1 ಜೆಸಿಬಿ, ನಂದಿಹಳ್ಳಿ ಗ್ರಾಮದಲ್ಲಿನ 2 ಮತ್ತು ದಾರಿಯಲ್ಲಿನ 3 ಮರಳು ಹೊತ್ತಿದ್ದ ಟ್ರ್ಯಾಕ್ಟರ್ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆಂದು ತಿಳಿದು ಬಂದಿದೆ.