ಅಕ್ರಮ ಹಣ ಸಾಗಾಟ: ಬಂಧನ
ಹುಬ್ಬಳ್ಳಿ: ಚುನಾವಣೆಯಲ್ಲಿ ಮತದಾರರಿಗೆ ಹಂಚುವ ಉದ್ದೇಶದಿಂದ ರೈಲು ಮೂಲಕ ಸಾಗಿಸುತ್ತಿದ್ದ ರು. 1.54 ಲಕ್ಷಗಳನ್ನು ಪತ್ತೆ ಹಚ್ಚಿರುವ ರೇಲ್ವೆ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಿದ್ದಾರೆ.
ಆಂಧ್ರಪ್ರದೇಶ ರಾಜ್ಯದ ಚಿತ್ತೂರ ಜಿಲ್ಲೆಯ ನಗರಿ ಗ್ರಾಮದ ನಿವಾಸಿ ವೆಂಕಟೇಶ ಕೊಂಡಯ್ಯ (45) ಎಂಬುವನೇ ಬಂಧಿತ. ಆರೋಪಿ ಹುಬ್ಬಳ್ಳಿಯಿಂದ ಹರಿಪ್ರಿಯಾ ರೈಲು ಮೂಲಕ ವಿಐಪಿ ಸೂಟ್ಕೇಸ್ನಲ್ಲಿ ಹಣ ಸಾಗಾಟ ಮಾಡಲು ಯತ್ನಿಸಿದಾಗ ರೇಲ್ವೆ ಠಾಣೆ ಇನ್ಸ್ಪೆಕ್ಟರ್ ಕೆ.ಡಿ. ಪುಟ್ಟಯ್ಯ ನೇತೃತ್ವದಲ್ಲಿ ಸಿಬ್ಬಂದಿ ತಪಾಸಣೆ ನಡೆಸಿದಾಗ ಆರೋಪಿ ಸಿಕ್ಕಿ ಹಾಕಿಕೊಂಡಿದ್ದಾನೆ. ಪ್ರಾಥಮಿಕ ವಿಚಾರಣೆ ಸಂದರ್ಭದಲ್ಲಿ ಆರೋಪಿ, ಜಪ್ತಿ ಮಾಡಲಾಗಿರುವ ಹಣವನ್ನು ರಾಜಕೀಯ ಪಕ್ಷವೊಂದರ ನಾಯಕರೊಬ್ಬರು ಚುನಾವಣೆಯಲ್ಲಿ ಮತದಾರರಿಗೆ ಹಂಚುವ ಉದ್ದೇಶದಿಂದ ನೀಡಿದ್ದರು ಎಂಬುದನ್ನು ಬಾಯಿಬಿಟ್ಟಿದ್ದಾನೆ. ಆದರೆ, ಯಾವ ಪಕ್ಷದವರು ಈ ಹಣ ನೀಡಿದ್ದರು ಎಂಬುದರ ಬಗ್ಗೆ ಯಾವುದೇ ರೀತಿಯ ಸುಳಿವು ಬಿಟ್ಟುಕೊಟ್ಟಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಕುರಿತಂತೆ ರೇಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿದ್ದಾರೆ.