ಒಳ್ಳೆಯದನ್ನು ಕೇಳಿ ಒಳ್ಳೆಯವರಾಗಿ: ಮುರುಘಾ ಶ್ರೀ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 6
ಎಲ್ಲಿ ಕಡಿದರೂ ಪೂರ್ಣ ಸವಿವುಳ್ಳ ಬೆಲ್ಲ ಕಡಿದಂಗ ಇರಬೇಕು. ಮನುಷ್ಯನಾದ ಬಳಿಕ ಒಳ್ಳೆಯದನ್ನು ಕೇಳಿ ಒಳ್ಳೆಯದಾಗಿ ಬದುಕಬೇಕು ಎಂದು ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ನಾಗಶೆಟ್ಟಿಕೊಪ್ಪದ ಶ್ರೀ ಮಾರುತಿ ದೇವಸ್ಥಾನದ ಪ್ರಾಂಗಣದಲ್ಲಿ ನಡೆದ ಪ್ರಭುಲಿಂಗ ಲೀಲೆ 2ನೇ ದಿನದ ಪ್ರವಚನದಲ್ಲಿ ಪಾಲ್ಗೊಂಡು ಅಲ್ಲಮ ಪ್ರಭುವಿನ ಜನನ ಪ್ರಸಂಗವನ್ನು ಮನಮುಟ್ಟುವಂತೆ ವಿವರಿಸಿದರು.
ಪ್ರಪಂಚವನ್ನೇ ಗೆಲ್ಲಬೇಕೆಂಬ ಮಹತ್ವಾಕಾಂಕ್ಷೆಯುಳ್ಳ 36 ವರ್ಷದ ವೀರ ಪುರುಷ ಅಲೆಗ್ಸಾಂಡರ್ ರಾಜನಿಗೆ ಆದ ಅಪಮಾನದ ಪ್ರಸಂಗವು ಜನರನ್ನು ಜಾಗ್ರತಗೊಳಿಸಿತು. ದಾರಿಯಲ್ಲಿ ಸಿಕ್ಕ ಸಂತನು ಕೇಳಿದ ನೀನು ಅಥವಾ ಭೂಮಿಗೆ ಬಂದ ಮಗು ಎಲ್ಲಿಂದ ಬಂತು? ಸತ್ತವ ಎಲ್ಲಿಗೆ ಹೋಗ್ತಾನೆ ಎಂಬ ಎರಡು ಪ್ರಶ್ನೆಗಳಿಗೆ ಉತ್ತರ ಕಾಣದ ರಾಜನಿಗೆ ಸುಬದ್ಧಿ ಬಂದಂತಾಯಿತು ಎಂದು ಶ್ರೀಗಳು ಹೇಳಿದರು. ಮನುಷ್ಯನಾಗಿ ಹುಟ್ಟಿದ ಬಳಿಕ ಕೃತಘ್ನನಾಗಿರದೆ ಕೃತಜ್ಞನಾಗಿರಬೇಕು. ಶಿವಶರಣ ಮಡಿವಾಳ ಮಾಚಯ್ಯನವರು ಹೇಳಿದಂತೆ ವಾಯುಗುಣ ಸರ್ಪಬಲ್ಲದು, ಮಧುರ ಗುಣ ಇರುವೆ ಬಲ್ಲದು ಗೋತ್ರದ ಗುಣ ಕಾಗೆ ಬಲ್ಲದು, ಸಮಯದ ಗುಣ ಕೋಳಿ ಬಲ್ಲದು. ಇದನ್ನರಿಯದ ಮಾನವ ಕಾಗೆ ಕೋಳಿಗಳಿಗಿಂತಲೂ ಕಡೆ. ಇದೆಲ್ಲವನ್ನು ಅರಿತ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಳ್ಳೆಗಾವಿಯ ನಿರಹಂಕಾರ ಮತ್ತು ಸುಜ್ಞಾನಿ ಎಂಬ ಭಕ್ತಿವಂತ ದಂಪತಿಗಳಿಗೆ ಮಕ್ಕಳಿಲ್ಲದಾದಾಗ ಚಿಂತೆಗೊಳಗಾಗಿದ್ದರು.
ನಂತರ, ಶಿವನ ಕೃಪೆಯಿಂದ ಜನಿಸಿದ ಮಗನೇ ಅಲ್ಲಮನು. ಜನಿಸಿದ ಅಲ್ಲಮನನ್ನು ಕವಿ ಚಾಮರಸರು ವೈರಾಗ್ಯದ ಮೂರ್ತಿ ಭೂಮಿಗೆ ಇಳಿದು ಬಂದ, ಚಿಪ್ಪಿನೊಳಗೆ ಮುತ್ತಿನಂತೆ ಬಂದ, ಕೆಸರಿನಲ್ಲಿ ಕಮಲ ಹುಟ್ಟಿದಂತೆ ಬಂದ, ಬೆಟ್ಟಾರಣ್ಯದಲ್ಲಿ ಸುಗಂಧದ ಮರ ಬೆಳೆದಂತೆ ಬಂದ, ಮುಳ್ಳಿನ ಕೇದಿಗೆಯಲ್ಲಿ ಕೇಸರಿಯ ಸುಗಂಧ ಇದ್ದಂತೆ ಬಂದ, ಸುಜ್ಞಾನಿಯಾಗಿ ಹುಟ್ಟಿದ ಮಗು ನಮ್ಮ ಅಲ್ಲಮನು ಎಂದು ಪ್ರಭುವಿನ ಜನನ ಪ್ರಸಂಗವನ್ನು ಶ್ರೀಗಳು ವಿವರಿಸಿದರು.