ಜೋಶಿಯಿಂದ ಅಭಿವೃದ್ಧಿಯಿಲ್ಲ
ನವಲಗುಂದ: ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಹ್ಲಾದ ಜೋಶಿ, ತಮ್ಮ ಅಧಿಕಾರಾವಧಿಯಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಹಣ ಒದಗಿಸಿದ್ದು ಬಿಟ್ಟರೆ ಜನಸಾಮಾನ್ಯರಿಗೆ ಅನುಕೂಲವಾಗುವ ಯಾವುದೇ ಯೋಜನೆಗಳನ್ನು ಕೇಂದ್ರ ಸರ್ಕಾರದಿಂದ ತಂದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಆರೋಪಿಸಿದರು. ಭಾನುವಾರ ಅಳಗವಾಡಿಯಲ್ಲಿ ಏರ್ಪಡಿಸಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ ಕಡಿಮೆ ಇರುವುದನ್ನು ಕಂಡು ರಾಜ್ಯ ಹಾಗೂ ಕೇಂದ್ರ ಸರ್ಕಾರ ರಾಜ್ಯದ ಪ್ರತಿ ಮೂಲೆಯಲ್ಲಿ ಶಾಲೆಗಳನ್ನು ತೆರೆದು ಬಡವರ, ದೀನದಲಿತರ ಮಕ್ಕಳಿಗೆ ವಿದ್ಯಾರ್ಜನೆಗೆ ಅವಕಾಶ ಮಾಡಿಕೊಟ್ಟಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುತ್ತಿದಂತೆಯೇ, ರು. 1ಗೆ ಕೆಜಿ ಅಕ್ಕಿ ವಿತರಣೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು. ಮೊರಬ ಗ್ರಾಮದಲ್ಲಿ ಪಾದಯಾತ್ರೆಯ ಮೂಲಕ ಮತಯಾಚಿಸಿದರು. ನಂತರ ಶಲವಡಿಗೆ ತೆರಳಿದ ಅವರು ತೆರೆದ ವಾಹನದಲ್ಲಿ ಗ್ರಾಮದ ಬೀದಿ ಬೀದಿಗಳಲ್ಲಿ ಪ್ರಚಾರ ಕೈಗೊಂಡರು. ವಿಧಾನಪರಿಷತ್ತ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸಚಿವ ಕೆ.ಎನ್.ಗಡ್ಡಿ, ಮಾಜಿ ಶಾಸಕ ಡಾ.ಆರ್.ಬಿ.ಶಿರಿಯಣ್ಣವರ, ಜಿಲ್ಲಾಧ್ಯಕ್ಷ ಎಚ್.ವಿ.ಮಾಡಳ್ಳಿ, ಉಪಾಧ್ಯಕ್ಷ ಎಸ್.ಸಿ.ರೇಣುಕಮಠ, ತಾಲ್ಲೂಕಾಧ್ಯಕ್ಷ ಆರ್.ಎಚ್.ಕೋನರಡ್ಡಿ, ಅಶೋಕ ಕುಸುಗಲ್ಲ, ಸುಭಾಸ ದ್ಯಾಮಕ್ಕನವರ ಇದ್ದರು.