ಇಂದು ಕಲ್ಮೇಶ್ವರ ಜಾತ್ರೆ
ಧಾರವಾಡ: ಶಹರದ ಸೈದಾಪುರ ಓಣಿಯ ಕಲ್ಮೇಶ್ವರ ದೇವರ ರಥೋತ್ಸವ ಏ. 8ರ ಸಂಜೆ 4.30ಕ್ಕೆ ಜರುಗಲಿದೆ. ಸಂಜೆ ಜರುಗುವ ರಥೋತ್ಸವಕ್ಕೆ ಮಲ್ಲಿಕಾರ್ಜುನ ಸ್ವಾಮಿಗಳು ಚಾಲನೆ ನೀಡಲಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.
ವಾರ್ಷಿಕ ಸ್ನೇಹ ಸಮ್ಮೇಳನ
ಧಾರವಾಡ: ಜೆಎಸ್ಎಸ್ ಬನಶಂಕರಿ ಕಲಾ, ವಾಣಿಜ್ಯ ಮತ್ತು ಎಸ್.ಕೆ. ಗುಬ್ಬಿ ವಿಜ್ಞಾನ ಕಾಲೇಜ್ ವಾರ್ಷಿಕ ಸ್ನೇಹ ಸಮ್ಮೇಳನ ಏ. 9ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ. ನಟ ನೀರ್ನಳ್ಳಿ ರಾಮಕೃಷ್ಣ ಆಗಮಿಸಲಿದ್ದಾರೆ. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ. ನ.ವಜ್ರಕುಮಾರ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಲೇಜ್ನ ವಿತ್ತಾಧಿಕಾರಿ ಡಾ. ಅಜಿತಪ್ರಸಾದ ಹಾಗೂ ಪ್ರಾಚಾರ್ಯ ಡಾ. ಎಸ್.ಎನ್. ಹೆಗಡೆ ಭಾಗವಹಿಸುತ್ತಾರೆ.
ಉಚಿತ ಬೇಸಿಗೆ ಶಿಬಿರ
ಧಾರವಾಡ: ಇಲ್ಲಿಯ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಸಿದ್ಧರಾಮೇಶ್ವರ ಪ್ರೌಢ ಶಾಲೆಗಳ ಆಶ್ರಯದಲ್ಲಿ ಕವಿವಿಯ ರೇಲ್ವೆ ಗೇಟ್ ಹತ್ತಿರದ ಪ್ರೊ. ಕಮಲಾ ಬಾಳೆಕುಂದ್ರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಏ.9 ರಿಂದ 30 ರವರೆಗೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಆಸಕ್ತರು ಮೊ. 87226 92303, 9986741265ಗೆ ಸಂಪರ್ಕಿಸಿ.
ಅತ್ಯಾಚಾರ ಆರೋಪಿ ಬಂಧನ
ಧಾರವಾಡ: ನವಲಗುಂದ ತಾಲೂಕಿನ ಹಳ್ಳಿಕೇರಿ ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಗೈದ ಆರೋಪದ ಮೇರೆಗೆ ಯುವಕನೊಬ್ಬನನ್ನು ಅಣ್ಣಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಳ್ಳಿಕೇರಿ ಗ್ರಾಮದ ಯುವಕ ಫಕ್ಕೀರಪ್ಪ ಅದೇ ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಮಾ. 31ರಂದು ಅಪಹರಿಸಿ ಅತ್ಯಾಚಾರ ಎಸಗಿದ್ದ ಎಂದು ಆಕೆಯ ತಂದೆ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೊಂಡ ಪಿಎಸ್ಐ ಪ್ರವೀಣ ನೀಲಮ್ಮ್ಮನವರ ಭಾನುವಾರ ರಾತ್ರಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಶಂಕ್ರಣ್ಣ ಅವರಾಧಿ ನಿಧನ
ನವಲಗುಂದ: ತಾಲೂಕಿನ ಬಳ್ಳೂರ ಗ್ರಾಮದ ರೈತಪರ ಹೋರಾಟಗಾರ, ಕಳಸಾ-ಬಂಡೂರಿ ನಾಲಾ ಜೋಡಣೆ ಹೋರಾಟಗಾರ ಹಾಗೂ ಬಿಜೆಪಿ ತಾಲೂಕು ಘಟಕ ಮಾಜಿ ಅಧ್ಯಕ್ಷ ಶಂಕ್ರಣ್ಣ ಮಾಗುಡಪ್ಪ ಅವರಾಧಿ (52) ಸೋಮವಾರ ನಿಧನ ಹೊಂದಿದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಹಾಗೂ ಅಪಾರ ಬಂದು ಬಳಗ ಇದ್ದಾರೆ. ಶಂಕ್ರಣ್ಣ ಅವರಾಧಿ ಅವರ ನಿಧನಕ್ಕೆ ಸಂಸದ ಪ್ರಹ್ಲಾದ ಜೋಶಿ, ಶಾಸಕ ಎನ್.ಎಚ್. ಕೋನರಡ್ಡಿ, ವಿನಯ ಕುಲಕರ್ಣಿ, ಕೆ.ಎನ್. ಗಡ್ಡಿ, ಶಂಕರ ಪಾಟೀಲ ಮುನೇನಕೊಪ್ಪ, ಆರ್.ಬಿ. ಶಿರಿಯಣ್ಣವರ. ಫಕ್ಕೀರಪ್ಪ ಜಕ್ಕಪ್ಪನವರ, ಆನಂದ ಹೊಸಗೌಡರ, ಸಿದ್ದನಗೌಡ ಪಾಟೀಲ (ಅಡ್ನೂರ), ಷಣ್ಮುಖ ಗುರಿಕಾರ, ಮಂಜು ಬೋಂಗಾಳೆ, ಕೊಟ್ರೇಶ ಶಿರೂರ, ಸಿದ್ದಣ್ಣ ಕೆಟಗೇರಿ, ಬಸಣ್ಣ ಬೆಳವಣಕಿ, ಎಸ್.ಬಿ. ದಾನಪ್ಪಗೌಡರ, ನಾಗನಗೌಡ ಪಾಟೀಲ ಶೋಕ ವ್ಯಕ್ತಪಡಿಸಿದ್ದಾರೆ.