ದಲಿತರ ಪ್ರಗತಿಗೆ ಬಿಜೆಪಿ ಗೆಲ್ಲಿಸಿ
ಕನ್ನಡಪ್ರಭ ವಾರ್ತೆ, ಧಾರವಾಡ, ಏ. 7
ದಲಿತರ ಬಗ್ಗೆ ಮೊಸಳೆ ಕಣ್ಣೀರು ಹಾಕುವ ಕಾಂಗ್ರೆಸ್ ಆ ಸಮುದಾಯದ ಬಗ್ಗೆ ಬರೀ ಮಾತನಾಡುವುದನ್ನು ಬಿಟ್ಟು ಅಭಿವೃದ್ಧಿಯಲ್ಲಿ ನೈಜತೆ ಅಳವಡಿಸಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಲಹೆ ನೀಡಿದರು.
ಇಲ್ಲಿಯ ದೈವಜ್ಞ ಕಲ್ಯಾಣಮಂಟಪದಲ್ಲಿ ಸೋಮವಾರ ಬಿಜೆಪಿ ಎಸ್ಸಿ-ಎಸ್ಟಿ ಘಟಕದಿಂದ ಹಮ್ಮಿಕೊಂಡಿದ್ದ ದಲಿತ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಈವರೆಗೂ ದಲಿತ ಸಮುದಾಯವನ್ನು ಬರಿ ಮತಬ್ಯಾಂಕ್ ಆಗಿ ಬಳಸಿಕೊಂಡಿದೆ ಎಂದು ದೂರಿದರು.
ಈ ಸಮುದಾಯದ ಅಭಿವೃದ್ಧಿಗೆ ಕಿಂಚಿತ್ತೂ ಪ್ರಯತ್ನ ನಡೆಸಿಲ್ಲ. ಹೀಗಾಗಿ ಆ ಸಮುದಾಯ ಕಾಂಗ್ರೆಸ್ ವಿರುದ್ಧ ಬಿದ್ದಿದೆ ಎಂದು ಶೆಟ್ಟರ್ ಹೇಳಿದರು. ಕಾಂಗ್ರೆಸ್ ಪಕ್ಷಕ್ಕೆ ದಲಿತರ ಮತಗಳು ಮಾತ್ರ ಬೇಕಿದ್ದು, ಸಮುದಾಯ ಸಮಸ್ಯೆಗಳ ಪರಿಹಾರ ಮಾಡುವ ಇಚ್ಛಾಶಕ್ತಿ ಹೊಂದಿಲ್ಲ. ದಲಿತ ವಿರೋಧಿ ನೀತಿ ಅಳವಡಿಸಿಕೊಂಡಿರುವ ಕಾಂಗ್ರೆಸ್ಗೆ ಈ ಬಾರಿ ಪಾಠ ಕಲಿಸಬೇಕು. ಹಿಂದುಳಿದ ವರ್ಗದ ನಾಯಕ ನರೇಂದ್ರ ಮೋದಿ ಪ್ರಧಾನಿಯಾಗಲು ಬಿಜೆಪಿ ಬೆಂಬಲಿಸುವಂತೆ ಮತದಾರರಲ್ಲಿ ಶೆಟ್ಟರ್ ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ, ಕಾಂಗ್ರೆಸ್ನ ದುರಾಡಳಿತ-ಭ್ರಷ್ಟಾಚಾರದಿಂದ ಆರ್ಥಿಕ ಮುಗ್ಗಟ್ಟು ನಿರ್ಮಾಣಗೊಂಡು ಬೆಲೆ ಏರಿಕೆ ಆಗಿ ಶ್ರೀಸಾಮಾನ್ಯನಿಗೆ ಬಿಸಿ ತಟ್ಟಿದೆ. ರಾಷ್ಟ್ರದ ಆಂತರಿಕ, ಬಾಹ್ಯ, ಆರ್ಥಿಕ, ಶೈಕ್ಷಣಿಕ ಭದ್ರತೆ ಜೊತೆಗೆ ರಾಷ್ಟ್ರದ ಉದ್ದಕ್ಕೂ ಅಭಿವೃದ್ಧಿಯ ಪರ್ವ ಆರಂಭಿಸಲು ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಪಿ.ಶರಣಪ್ಪ, ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕರಾದ ವೀರಭದ್ರಪ್ಪ ಹಾಲಹರವಿ, ಸೀಮಾ ಮಸೂತಿ, ಮೇಯರ್ ಶಿವು ಹಿರೇಮಠ, ಲಂಡನ್ ಮಾಜಿ ಮೇಯರ್ ನೀರಜ ಪಾಟೀಲ, ಬಸವರಾಜ ಮುತ್ತಳ್ಳಿ, ರಾಜು ಕೋಟ್ಟಣ್ಣನವರ, ರಾಮಚಂದ್ರ ಪೋಗಾಟಿ, ಭೀಮಸಿ ನೇಮಿಕಲ್, ಲಕ್ಷ್ಮಣ ಬೀಳಗಿ ಮತ್ತಿತರರು ಉಪಸ್ಥಿತರಿದ್ದರು.