ಕಾಂಗ್ರೆಸ್ ಮಹಿಳಾ ವಿರೋಧಿ
ಹುಬ್ಬಳ್ಳಿ: ಜಾತ್ಯತೀತರು ಎಂದು ಹೇಳುವ ಕಾಂಗ್ರೆಸ್ ಕೇವಲ ಒಂದು ಸಮುದಾಯಕ್ಕೆ ಮಾತ್ರ ಶಾದಿ ಭಾಗ್ಯ ಯೋಜನೆ ರೂಪಿಸಿದೆ. ಆದರೆ ಅಂದಿನ ಬಿಜೆಪಿ ಸರ್ಕಾರ ಜಾತಿಗಳ ಅಂತರವಿಲ್ಲದೇ ಎಲ್ಲ ಹೆಣ್ಣುಮಕ್ಕಳ ಕಲ್ಯಾಣಕ್ಕೆ ಭಾಗ್ಯ ಲಕ್ಷ್ಮಿ ಯೋಜನೆ ಜಾರಿಗೆ ತಂದಿತ್ತು ಎಂದು ರಾಜ್ಯ ಬಿಜೆಪಿ ಸಹ ವಕ್ತಾರೆ ಮಾಳವಿಕಾ ಅವಿನಾಶ ಹೇಳಿದರು. ಮಂಗಳವಾರ ನವನಗರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಪರ ಆಯೋಜಿಸಿದ್ದ ಮಹಿಳೆಯರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಎಲ್ಲ ಜಾತಿಗಳ ಹೆಣ್ಣುಮಕ್ಕಳಿಗಾಗಿ ಅಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆಯನ್ನು ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿದೆ. ಈ ಯೋಜನೆ ಜೊತೆಗೆ ವಿಧವಾ ವೇತನ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿ ದುರ್ಬಲರಿಗೆ ಸರ್ಕಾರ ನೀಡಿದ್ದ ಆರ್ಥಿಕ ನೆರವನ್ನು ತೆಗೆದು ಹಾಕಿದೆ ಎಂದು ಹೇಳಿದರು. ಹತ್ತು ವರ್ಷಗಳ ಅವಧಿಯಲ್ಲಿ ಯುಪಿಎ ಸರ್ಕಾರ ಸಿಲಿಂಡರ್ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ವಿಪರೀತ ಹೆಚ್ಚಿಸಿ ಮಹಿಳೆಯರ ಕುಟುಂಬ ನಿರ್ವಹಣೆಯನ್ನು ದುಸ್ತರವಾಗಿಸಿದೆ.