ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಜೋಶಿಗೆ ದೇಸಾಯಿ ಅಮೃತ

Mainashree
Updated On : 12 Apr 2014, 10:11 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 11
ಲೋಕಸಭಾ ಚುನಾವಣೆಗೆ ಇನ್ನು ಬೆರಳೆಣಿಕೆ ದಿನಗಳು ಬಾಕಿ ಇರುವಂತೆಯೇ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರಿಗೆ ಗಣನೀಯ ಬೆಂಬಲ ವ್ಯಕ್ತವಾಗಿದೆ. ಧಾರವಾಡ ಕ್ಷೇತ್ರದ ಪ್ರಬಲ ಜೆಡಿಎಸ್ ಮುಖಂಡ ಅಮೃತ ದೇಸಾಯಿ ಬಿಜೆಪಿ ಸೇರುತ್ತಿರುವುದು, ಜೋಶಿಗೆ ಪ್ಲಸ್ ಆಗಲಿದೆ ಎಂದೇ ಲೆಕ್ಕ ಹಾಕಲಾಗಿದೆ.
ಧಾರವಾಡ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಜೆಡಿಎಸ್ ವರ್ಚಸ್ಸಿಗಿಂತ ಹೆಚ್ಚು ಪ್ರಭಾವ ಹಾಗೂ ಸಾಮರ್ಥ್ಯ ಹೊಂದಿರುವ ಅಮೃತ ದೇಸಾಯಿ ಬಿಜೆಪಿ ಸೇರುತ್ತಿರುವುದು ಕಮಲ ಪಡೆಗೆ ಲಾಭ ತಂದುಕೊಡಲಿದ್ದರೆ, ಬಿಜೆಪಿ ಎದುರಾಳಿ ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಸಿಗದ ವೇದಿಕೆ: ಈ ಹಿಂದೆಯೇ ಅಮೃತ ದೇಸಾಯಿ ಜೆಡಿಎಸ್‌ನಿಂದ ಹೊರ ಹೋಗುತ್ತಾರೆಂಬ ಸುದ್ದಿಯಿತ್ತು. ಆದರೂ ನಿರ್ಣಯಕ್ಕೆ ಬಂದಿರಲಿಲ್ಲ. ಈಗ ಲೋಕಸಭೆ ಚುನಾವಣೆಯ ಕಾಲಕ್ಕೆ ಬಿಜೆಪಿ ಸೇರಲು ನಿರ್ಧರಿಸಿ, ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಜೆಡಿಎಸ್‌ನಲ್ಲಿ ಅಮೃತ ದೇಸಾಯಿಗೆ ಸೂಕ್ತ ಅವಕಾಶ ಸಿಗದಿರುವುದೂ ಈ ನಿರ್ಧಾರಕ್ಕೆ ಪ್ರಮುಖ ಕಾರಣ. ಯುವ ನಾಯಕ ಅಮೃತ್‌ಗೆ ರಾಜಕೀಯ ಭವಿಷ್ಯವಿದೆ. ಉತ್ತರ ಕರ್ನಾಟಕದಲ್ಲಿ ಸರಿಯಾಗಿ ನೆಲೆ ಕಾಣದಿರುವ ಜೆಡಿಎಸ್‌ನಲ್ಲೇ ಉಳಿದುಕೊಂಡರೆ ರಾಜಕೀಯ ಭವಿಷ್ಯ ಮಂಕಾಗಬಹುದು ಎನ್ನುವ ಹಿತೈಷಿಗಳ ಸಲಹೆಯ ಮೇರೆಗೆ ಬಿಜೆಪಿ ಸೇರುತ್ತಿದ್ದಾರೆ.
ರಾಜಕೀಯ ಕುಟುಂಬ: ಅಮೃತ ದೇಸಾಯಿ ಅವರದ್ದು ರಾಜಕೀಯ ಹಿನ್ನಲೆಯುಳ್ಳ ಕುಟುಂಬ. ಅವರ ತಂದೆ ಎ.ಬಿ. ದೇಸಾಯಿ ಧಾರವಾಡ ಗ್ರಾಮೀಣ ವಿಧಾನಸಭೆ ಕ್ಷೇತ್ರದಲ್ಲಿ ಹಿಡಿತ ಹೊಂದಿದವರು. 1985ರಲ್ಲಿ ಜನತಾ ಪಕ್ಷದ ಶಾಸಕರಾಗಿದ್ದರು. ಆಮೇಲೂ ಕ್ಷೇತ್ರದ ಜನತೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಜಿಪಂ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಅಮೃತ ದೇಸಾಯಿ 2008ರ ವಿಧಾನಸಭೆ ಚುನಾವಣೆಯಲ್ಲಿ ಸೋತರೂ 21 ಸಾವಿರ ಮತ ಪಡೆಯುವಲ್ಲಿ ಸಫಲವಾದರು. 20013ರ ಚುನಾವಣೆಯಲ್ಲಿ ಮತ ಗಳಿಕೆಯನ್ನು 35 ಸಾವಿರಕ್ಕೆ ಹೆಚ್ಚಿಸಿಕೊಂಡರು. ಜೆಡಿಎಸ್‌ನಿಂದ ಸ್ಪರ್ಧಿಸಿ ಈ ಪ್ರಮಾಣದಲ್ಲಿ ಮತ ಗಳಿಸಿದ್ದು, ವೈಯಕ್ತಿಕ ವರ್ಚಸ್ಸಿನಿಂದಲೇ ಎಂದು ವಿಶ್ಲೇಷಿಸಲಾಗಿತ್ತು.
ಬಿಜೆಪಿಗೆ ಲಾಭ: ಅಮೃತ ದೇಸಾಯಿ ಸೇರ್ಪಡೆಯಿಂದ ಬಿಜೆಪಿಗೆ ಭರಪೂರ ಲಾಭವಾಗಲಿದೆ. ವೈಯಕ್ತಿಕ ವರ್ಚಸ್ಸು ಹಾಗೂ ಧಾರವಾಡ ಗ್ರಾಮೀಣ-ನಗರ ಭಾಗದಲ್ಲಿ ಉತ್ತಮ ಹಿಡಿತವಿರುವ ಕಾರಣಕ್ಕೆ, ಅಮೃತ್ ಪರವಾದ ಮತಗಳೆಲ್ಲ ಜೋಶಿಗೆ ಬೀಳಲಿವೆ ಎಂದು ಲೆಕ್ಕ ಹಾಕಲಾಗಿದೆ. ಹೀಗಾಗಿ, ಬಿಜೆಪಿಗೆ ಆನೆ ಬಲ ಬಂದಂತಾಗಿದೆ.
ಕಾಂಗ್ರೆಸ್‌ಗೆ ಶಾಕ್: ಅಮೃತ ದೇಸಾಯಿ ಅವರನ್ನು ಸೆಳೆಯಲು ಕಾಂಗ್ರೆಸ್ ಕೂಡ ಯತ್ನಿಸಿತ್ತು. ಒಂದು ಹಂತದಲ್ಲಿ ಅಮೃತ್ ಕಾಂಗ್ರೆಸ್ ಸೇರುತ್ತಾರೆ ಎಂದೇ ಹೇಳಲಾಗಿತ್ತು. ಈಗ ಅವರು ಬಿಜೆಪಿ ಬಾಗಿಲು ಬಡಿದಿದ್ದು, ಕಾಂಗ್ರೆಸ್‌ಗೆ ಪೆಟ್ಟು ನೀಡಲಿದೆ. ಒಂದೊಮ್ಮೆ ಪ್ರಸಕ್ತ ಚುನಾವಣೆಯಲ್ಲಿ ಅಮೃತ್ ತಟಸ್ಥವಾಗಿದ್ದರೂ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿಗೆ ಲಾಭವಾಗುತ್ತಿತ್ತು. ಏಕೆಂದರೆ ಧಾರವಾಡ ಭಾಗದಲ್ಲಿ ಅಮೃತ್‌ರಂತೆ ವಿನಯ್ ಕೂಡ ಪ್ರಭಾವಿ ಯುವ ನಾಯಕ. ಅಮೃತ್ ದೇಸಾಯಿ ತಟಸ್ಥರಾಗಿದ್ದರೆ, ಬೆಂಬಲಿಗರು ಅನಿವಾರ್ಯವಾಗಿ ಪರ್ಯಾಯ ಆಯ್ಕೆಗೆ ಮುಂದಾಗುತ್ತಿದ್ದರು. ಈಗ ಚುನಾವಣೆಯಲ್ಲಿ ಆಸಕ್ತಿ ತೋರದೇ ಹೋದಲ್ಲಿ ಜನ ಅನಿವಾರ್ಯವಾಗಿ ಪರ್ಯಾಯ ಆಯ್ಕೆಗೆ ಮುಂದಾಗುತ್ತಿದ್ದರು. ಆದರೀಗ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅಮೃತ ಬಿಜೆಪಿಗೆ ಸೇರುತ್ತಿರುವುದು ಆ ಮತಗಳು ಬಿಜೆಪಿ ಪಾಲಾಗಲಿವೆ ಎಂದು ಹೇಳಲಾಗುತ್ತಿದೆ.

ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement