ಚಿಣ್ಣರನ್ನು ಕೀಳಾಗಿ ಕಾಣದಿರಿ
ಕನ್ನಡಪ್ರಭ ವಾರ್ತೆ, ಧಾರವಾಡ, ಏ. 12
ಜನ ನಾಯಕರೇ ಹುಷಾರ್ ನಾವು ನಿಮ್ಮ ಪ್ರತಿ ನಡೆ, ಪ್ರತಿ ಹೆಜ್ಜೆ ಗಮನಿಸುತ್ತಿದ್ದೇವೆ. ಚಿಕ್ಕ ಮಕ್ಕಳೆಂದು ನಮ್ಮನ್ನು ಕೀಳಾಗಿ ಕಾಣದಿರಿ...
ಇದು ರಂಗಾಯಣದಲ್ಲಿ ಕಿಡ್ಸ್ ಸಂಸ್ಥೆ, ಬಾಲನಂದನ ಟ್ರಸ್ಟ್, ಗುಬ್ಬಚ್ಚಿ ಮಕ್ಕಳ ಮಹಾಸಂಘ ಹಾಗೂ ಮೀಡಿಯಾ ಕ್ಲಬ್ ಜಂಟಿಯಾಗಿ ಏರ್ಪಡಿಸಿದ್ದ ಲೋಕಸಭೆ ಅಭ್ಯರ್ಥಿಗಳೊಂದಿಗೆ ಮಕ್ಕಳ ಸಂವಾದ ಕಾರ್ಯಕ್ರಮದಲ್ಲಿ ಚಿಣ್ಣರ ಬಾಯಿಯಿಂದ ಬಂದ ಎಚ್ಚರಿಕೆಯ ಮಾತುಗಳಿವು.
ಮಕ್ಕಳ ಕೇಳುವ ಪ್ರಶ್ನೆಗಳಲ್ಲಿ ಅಸಹಾಯಕತೆ, ನೋವಿನ ಮಾತೆ ಇತ್ತು. ಆದರೆ ಮಕ್ಕಳ ಪ್ರಶ್ನೆಗಳಿಗೆ ಸಭಿಕರೆಲ್ಲ ಚಪ್ಪಾಳೆ ತಟ್ಟುತ್ತಿದ್ದರೆ, ಅಭ್ಯರ್ಥಿಗಳು ಮಾತ್ರ ಕಕ್ಕಾಬಿಕ್ಕಿಯಾಗುತ್ತಿದ್ದರು. ಜ್ಯೋತಿ ತಂಬಾಕದ ಎಂಬ ಮಗು ಎಲ್ಲ ರಂಗದಲ್ಲಿಯೂ ನೀವು ಪ್ರತ್ಯೇಕ ಬಜೆಟ್ ಮಂಡಿಸುವ ವಿಚಾರ ಮಾಡುತ್ತಿದ್ದೀರಿ, ಆದರೆ ದೇಶದ ಭವಿಷ್ಯವಾಗಿರುವ ಮಕ್ಕಳ ಬಗ್ಗೆ ಮಾತ್ರ ನಿಮ್ಮಲ್ಲಿ ಬಜೆಟ್ ಏಕಿಲ್ಲ ಎಂದು ಪ್ರಶ್ನಿಸಿದರು.
ಗಲಿಬಿಲಿಗೆ: ಮಕ್ಕಳ ಹಕ್ಕು, ಮಕ್ಕಳ ಭವಿಷ್ಯದ ಬಗ್ಗೆ ಯಾರಾದರೂ ಸಂಸತ್ನಲ್ಲಿ ಮಾತನಾಡಿದ್ದಾರಾ, ಮಕ್ಕಳ ಬಗೆಗೆ ಒಂದಾದರೂ ಪ್ರಶ್ನೆ ಸಂಸತ್ತಿನಲ್ಲಿ ಪ್ರತಿ ಧ್ವನಿಸಿಯೇ ಇಲ್ಲ, ಏಕೆಂದರೆ ನಮಗೆ ಮತ ಹಾಕುವ ಹಕ್ಕಿಲ್ಲವಲ್ಲ, ಅದಕ್ಕೆ ನಿಮಗೆ ನಾವು ಅವಶ್ಯವಿಲ್ಲ ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನೆಗೆ ನಾಯಕರನ್ನು ಗಲಿಬಿಲಿಗೊಳಿಸಿತು.
ಮಕ್ಕಳ ಅಭಿವೃದ್ಧಿಯ ಬಗ್ಗೆ ಭರವಸೆ ಕೊಟ್ಟಿದ್ದೀರಾ, ಅಥವಾ ಮಕ್ಕಳ ಬಗ್ಗೆ ನೀವು ಮಾಡಿರುವ ಸಾಧನೆಗಳನ್ನು ಒಂದಾದರೂ ಹೇಳಿಕೊಂಡಿದಿರಾ ಎಂಬ ಅಭಿಷೇಕ ಎಂಬ ಮಗುವಿನ ಪ್ರಶ್ನೆಗೆ ನಾಯಕರು ನಾಚಿಕೆಯಿಂದ ತಲೆತಗ್ಗಿಸುವಂತಾಯಿತು. ಧಾರವಾಡ ಲೋಕಸಭೆ ಆಪ್ ಪಕ್ಷ ಹೇಮಂತಕುಮಾರ ಪಾಂಚಾಳ, ಶೈಲೇಂದ್ರ ಕುಮಾರ ಪಾಟೀಲ, ವಿಕಾಸ ಸೊಪ್ಪಿನ, ಇಮಾಮ್ ತೋರಗಲ್, ಶ್ರೀಕಾಂತ ಕಬಾಡಿ ಹಾಗೂ ಉಳಿದ ಅಭ್ಯರ್ಥಿಗಳ ಪರವಾಗಿ ಗಂಗಾಧರ ಬಡಿಗೇರ, ಲಕ್ಷ್ಮಣ ಬಕ್ಕಾಯಿ, ಮಿಡಿಯಾ ಕ್ಲಬ್ ಅಧ್ಯಕ್ಷ ಪುಂಡಲೀಕ ಹಡಪದ, ಉಪಾಧ್ಯಕ್ಷ ಬಸವರಾಜ ಅಳಗವಾಡಿ, ಕಿಡ್ಸ್ ಅಧ್ಯಕ್ಷೆ ಪಂಕಜ ಕಲ್ಮಠ, ಬಾಲನಂದನ ಟ್ರಸ್ಟ್ ಅಧ್ಯಕ್ಷೆ ಪ್ರೀತಿ ಎನ್.ಕೆ, ಅಶೋಕ ಯರಗಟ್ಟಿ ಇದ್ದರು.