ಜೆಡಿಎಸ್ ಮುಖಂಡ ಅಮೃತ ದೇಸಾಯಿ ಬಿಜೆಪಿಗೆ
ಧಾರವಾಡ: ಸತತ ಎರಡು ಬಾರಿ ಗೆದ್ದಿರುವ ಪ್ರಹ್ಲಾದ ಜೋಶಿ ಅವರ ಹ್ಯಾಟ್ರಿಕ್ ಗೆಲುವಿಗೆ ಅಮೃತ ದೇಸಾಯಿ ಸೇರ್ಪಡೆ ಇಂಬು ನೀಡಿದೆ ಎಂದು ಮನಗುಂಡಿಯ ಬಸವಾನಂದ ಶ್ರೀಗಳು ಹೇಳಿದರು.
ಇಲ್ಲಿನ ಹುರಕಡ್ಲಿ ಅಜ್ಜ ಕಾನೂನು ಕಾಲೇಜು ಆವರಣದಲ್ಲಿ ಶನಿವಾರ ಸಂಜೆ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ 35 ಸಾವಿರ ಮತ ಪಡೆದ ಅಮೃತ ದೇಸಾಯಿ ಈ ಲೋಕಸಭೆ ಚುನಾವಣೆಯಲ್ಲಿ ಜೋಶಿ ಹ್ಯಾಟ್ರಿಕ್ ಸಾಧಿಸಲು ನೆರವಾಗಲಿದ್ದಾರೆ ಎಂದರು.
ಸೇರ್ಪಡೆ: ಜೆಡಿಎಸ್ ಮುಖಂಡ ಅಮೃತ ದೇಸಾಯಿ ಸಾವಿರಾರು ಕಾರ್ಯಕರ್ತರೊಂದಿಗೆ ಬಿಜೆಪಿ ಸೇರಿದರು. ರೈತ ಪರ ಹೋರಾಟ ಮಾಡಬೇಕೆಂದು ಚಿಂತಿಸಿದ್ದು, ಅದು ಜೆಡಿಎಸ್‌ನಿಂದ ಫಲ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಸೇರಿದ್ದೇನೆ ಎಂದರು.
ಮಾಜಿ ಸಚಿವ ಜಗದೀಶ ಶೆಟ್ಟರ್, ಇದು ಬದಲಾವಣೆ ಕಾಲ. ಈ ಹಿನ್ನೆಲೆಯಲ್ಲಿ ಭಾರತಕ್ಕೆ ಬಲಾಡ್ಯ ರಾಷ್ಟ್ರದ ಅಗತ್ಯವಿದೆ ಎಂದರು.
ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ, ಬಸವರಾಜ ಬೊಮ್ಮಾಯಿ, ಶಾಸಕ ಅರವಿಂದ ಬೆಲ್ಲದ, ಮೇಯರ್ ಶಿವು ಹಿರೇಮಠ, ಸೀಮಾ ಮಸೂತಿ, ಮೋಹನ ಲಿಂಬಿಕಾಯಿ, ಶಿವಾನಂದ ಅಂಬಡಗಟ್ಟಿ, ಶಶಿ ಕುಲಕರ್ಣಿ, ವೀರೇಶ ಅಂಚಟಗೇರಿ, ತವನಪ್ಪ ಅಷ್ಟಗಿ, ನಿಜನಗೌಡ ಪಾಟೀಲ, ಈಶ್ವರ ಶಿವಳ್ಳಿ, ಮಡಿವಾಳಪ್ಪ ಉಳವಣ್ಣವರ ಇದ್ದರು.
ಬಿರಿಯಾನಿ ತಿನ್ನಿಸಬೇಕೇ?
ಅತ್ಯಾಚಾರಿಗಳ ಬಗ್ಗೆ ಮುಲಾಯಂ ಸಿಂಗ್ ಯಾದವ್ ತೀರಾ ಮೃದು ಧೋರಣೆ ತಾಳಿದ್ದಾರೆ. ಅತ್ಯಾಚಾರಿಗಳಿಗೆ ಶಿಕ್ಷೆ ಕೊಡುವ ಬದಲು ಕರೆದು ಸನ್ಮಾನ ಮಾಡಬೇಕೇ? ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸಬೇಕೆ? ನಮ್ಮ ದೇಶವನ್ನು ಆಳುವ ಮುಖಂಡರು ಈ ರೀತಿ ಹೇಳಿಕೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಮನಗುಂಡಿಯ ಬಸವಾನಂದ ಸ್ವಾಮೀಜಿ ಪ್ರಶ್ನಿಸಿದರು.
ಮಠದಿಂದ ಹೊರಬಂದು ಮತ ಹಾಕಿ
ಸ್ವಾಮೀಜಿಗಳು ರಾಜಕೀಯದಲ್ಲಿ ನೇರವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸ್ವಾಮೀಜಿಗಳು ದೇಶಭಕ್ತರಿಗೆ ಬೆಂಬಲ ನೀಡಬೇಕೇ ಹೊರತು, ದೇಶ ಕೊಳ್ಳೆ ಹೊಡೆಯುವರಿಗಲ್ಲ. 25 ವರ್ಷಗಳಿಂದ ದೇಶ ಸ್ಥಿರ ಸರ್ಕಾರ ಕಂಡಿಲ್ಲ. ಬಿಜೆಪಿ ಪೂರ್ಣ ಬಹುಮತ ಸರ್ಕಾರ ನಡೆಸಬೇಕು. ಸ್ವಾಮೀಜಿಗಳೂ ಮಠಗಳಿಂದ ಹೊರಬಂದು ಮತದಾನ ಮಾಡಬೇಕು ಎಂದು ಶ್ರೀಗಳು ಕರೆ ನೀಡಿದರು.