ಪಕ್ಷೇತರ ಅಭ್ಯರ್ಥಿ ವಿಕಾಸ ಸೊಪ್ಪಿನ ಕಣದಿಂದ ಹಿಂದಕ್ಕೆ: ಬಡಿಗೇರಗೆ ಬೆಂಬಲ
ಧಾರವಾಡ: ಧಾರವಾಡ ಲೋಕಸಭೆ ಪಕ್ಷೇತರ ಅಭ್ಯರ್ಥಿ ವಿಕಾಸ ಸೊಪ್ಪಿನ ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸ್ವಂತ ಈ ಕುರಿತಂತೆ ವಿವರಣೆ ನೀಡಿದ ಸೊಪ್ಪಿನ, ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಶಕ್ತಿ ಅತ್ಯಲ್ಪ ಅನಿಸಿದೆ. ಅದಕ್ಕಾಗಿ ಬಿಜೆಪಿ-ಕಾಂಗ್ರೆಸೇತರ ಹೋರಾಟದ ಭಾಗವಾಗಿರುವ ಕಮ್ಯುನಿಸ್ಟ್ ಪಕ್ಷಕ್ಕೆ ತಮ್ಮ ಬೆಂಬಲ ಸೂಚಿಸಿ ಕಣದಿಂದ ಹೊರಗೆ ಬಂದಿದ್ದೇವೆ ಎಂದರು. ಚುನಾವಣೆಯೆಂದರೆ ಎರಡೇ ಪಕ್ಷಗಳ ಕಾದಾಟ ಎಂಬ ಸನ್ನಿವೇಶ ಸೃಷ್ಟಿಯಾಗಿದೆ. ಹೋರಾಟದ ತಳಹದಿಯ, ಪರ್ಯಾಯ ಶಕ್ತಿ ಇಲ್ಲಿ ಸೃಷ್ಟಿಯಾಗದಿರುವುದು ವಿಪರ್ಯಾಸ ಹಾಗೂ ದುರಂತ. ಅದಕ್ಕಾಗಿ ರಾಜ್ಯದಲ್ಲಿ ಪರ್ಯಾಯ ಶಕ್ತಿಯ ಅವಶ್ಯವಿದೆ. ಚುನಾವಣೆಯು ಸಹ ಹೋರಾಟದ ಒಂದು ಭಾಗ, ಇದರಲ್ಲಿ ನಿಜವಾಗಿಯೂ ಜನರ ಸಮಸ್ಯೆ ಈಡೇರಿಕೆಗಾಗಿ ಹೋರಾಟ ಮಾಡುವವರಿಗೆ ಸೋಲು ಖಚಿತ. ಪ್ರಚಾರಕ್ಕಾಗಿ, ಕೊಳ್ಳೆ ಹೊಡೆಯುವುದಕ್ಕಾಗಿ ಬರುವವರಿಗೆ ಜಯ ಸಿಗುತ್ತಿದೆ. ಆದ್ದರಿಂದ ನಿಜವಾದ ಹೋರಾಟ ಮಾಡುವವರ ಶಕ್ತಿ ಒಂದೇ ವೇದಿಕೆಯಲ್ಲಿ ಕೇಂದ್ರೀಕೃತಗೊಳ್ಳಲೆಂಬ ಉದ್ಧೇಶದಿಂದ ತಾವು ಈ ನಿರ್ಧಾರ ಕೈಗೊಂಡಿದ್ದೇವೆ ಎಂದರು. ಹೋರಾಟದ ಮೂಲಕ ಶ್ರೀಸಾಮಾನ್ಯರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಬಲವಾಗಿ ನಂಬಿರುವ ತಮಗೆ, ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಗಂಗಾಧರ ಬಡಿಗೇರ, ಇಂತಹದ್ದೆ ಮನೋಭಾವನೆ ಹೊಂದಿದ್ದರಿಂದ ಹಾಗೂ ಜಾತಿ ಆಧಾರದ ಮೇಲೆ ಚುನಾವಣೆ ನಡೆಸಲು ಮುಂದಾಗಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಪರ್ಯಾಯ ಶಕ್ತಿಯನ್ನು ಅಧಿಕಾರಕ್ಕೆ ತರಲು ತಾವು ಈ ನಿರ್ಣಯಕೈಗೊಂಡಿದ್ದೇವೆ ಎಂದೂ ಸೂಪ್ಪಿನ ವಿವರಿಸಿದರು. ಗಂಗಾಧರ ಬಡಿಗೇರ, ವಿಠಲ ಕಮ್ಮಾರ, ಎಂ.ಬಿ.ಕಟ್ಟಿ ಗೋಷ್ಠಿಯಲ್ಲಿದ್ದರು.