ಮತದಾನಕ್ಕೆ 11 ದಾಖಲೆ
ಧಾರವಾಡ: ಏ. 17 ರಂದು ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, ಮತದಾರರ ಗುರುತಿನ ಪತ್ರ (ಎಪಿಕ್ ಕಾರ್ಡ್) ಹೊಂದಿರದ ಮತದಾರರು ಚಿಂತಿಸಬೇಕಾದ ಅಗತ್ಯವಿಲ್ಲ.
ಕಳೆದ ಬಾರಿಯಂತೆ ಈ ಬಾರಿಯೂ ಚುನಾವಣಾ ಆಯೋಗ ವಿವಿಧ ಬಗೆಯ ಭಾವಚಿತ್ರವುಳ್ಳ ದಾಖಲೆಗಳನ್ನು ತೋರಿಸಿ, ಮತ ಚಲಾಯಿಸಲು ಅವಕಾಶ ಕಲ್ಪಿಸಿದೆಯೆಂದು ಜಿಲ್ಲಾ ಚುನಾವಣಾ ಅಧಿಕಾರಿಗಳಾದ ಸಮೀರ್ ಶುಕ್ಲಾ ತಿಳಿಸಿದ್ದಾರೆ.
ಚುನಾವಣಾ ಆಯೋಗದ ಆದೇಶದಂತೆ ಚುನಾವಣಾ ಆಯೋಗ ನೀಡಿದ ಭಾವಚಿತ್ರವುಳ್ಳ ಎಪಿಕ್ ಕಾರ್ಡ್ ಇಲ್ಲದಿದ್ದರೆ, ಭಾವಚಿತ್ರವುಳ್ಳ ಹನ್ನೊಂದು ದಾಖಲೆಗಳು ಅಂದರೆ, ಪಾಸ್‌ಪೋರ್ಟ್, ವಾಹನ ಚಾಲನಾ ಪರವಾನಗಿ ಪತ್ರ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉದ್ಯೋಗಿಗಳು, ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ನೀಡುವ ಸೇವಾ ಗುರುತಿನ ಚೀಟಿ ಹೊಂದಿರುವವರು ಮತ ಚಲಾಯಿಸಬಹುದು. ಬ್ಯಾಂಕ್ ಹಾಗೂ ಅಂಚೆ ಕಚೇರಿಯ ಪಾಸ್ ಬುಕ್‌ಗಳು, ಪಾನಕಾರ್ಡ್, ಆಧಾರ ಕಾರ್ಡ್, ಆರ್.ಜಿ.ಐ. ಸಂಸ್ಥೆಯಿಂದ ಎನ್.ಪಿ.ಆರ್. ಅಡಿ ನೀಡಲಾದ ಸ್ಮಾರ್ಟ್ ಕಾರ್ಡ್, ನರೇಗಾ ಉದ್ಯೋಗ ಚೀಟಿ, ಕಾರ್ಮಿಕ ಇಲಾಖೆ ನೀಡಿದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಪಿಂಚಣಿ ದಾಖಲೆ ಹಾಗೂ ಚುನಾವಣಾ ಆಡಳಿತದಿಂದ ನೀಡಲಾದ ಅಧಿಕೃತ ಮತದಾರರ ಸ್ಲಿಪ್ ಈ ದಾಖಲೆಗಳ ಪೈಕಿ ಒಂದನ್ನು ಕಡ್ಡಾಯವಾಗಿ ಮತದಾರರ ಗುರುತಿಗಾಗಿ ಮತಗಟ್ಟೆ ಅಧಿಕಾರಿಗಳಿಗೆ ತೋರಿಸಿ ತಮ್ಮ ಮತ ಚಲಾಯಿಸಬೇಕೆಂದು ಅವರು ತಿಳಿಸಿದ್ದಾರೆ.