ಅಯ್ಯಪ್ಪಸ್ವಾಮಿ ಎಲ್ಲರ ಆರಾಧ್ಯ ದೈವ: ಪೇಜಾವರ ಶ್ರೀ
ಹುಬ್ಬಳ್ಳಿ: ಶಿರೂರ ಪಾರ್ಕ್‌ನ ಶಬರಿಮಲೆ ಮಾದರಿಯ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ಅಯ್ಯಪ್ಪಸ್ವಾಮಿ, ಮಹಾಗಣಪತಿ ಹಾಗೂ ಸುಬ್ರಹ್ಮಣ ಮೂರ್ತಿಗಳ ಪ್ರತಿಷ್ಠಾ ಬ್ರಹ್ಮ ಕಲಶ ಮಹೋತ್ಸವದಲ್ಲಿ ಗುರುವಾರ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಪಾಲ್ಗೊಂಡರು. ಮೂರ್ತಿಗಳಿಗೆ ಪೂಜೆ ಸಲ್ಲಿಸಿದ ಬಳಿಕ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದ ಅವರು, ಕಳೆದ 18 ವರ್ಷಗಳ ಹಿಂದೆ ಈ ದೇವಸ್ಥಾನದ ಅಡಿಗಲ್ಲು ಸಮಾರಂಭಕ್ಕೆ ಅನಿರೀಕ್ಷಿತವಾಗಿ ಬಂದಿದ್ದೆ. ಈಗ ಬ್ರಹ್ಮ ಕಲಶ ಮಹೋತ್ಸವಕ್ಕೂ ಅನಿರೀಕ್ಷಿತವಾಗಿ ಬಂದಿದ್ದೇನೆ. ಹೀಗಾಗಿ ಇದು ಶಾಂತಿ-ನೆಮ್ಮದಿ ಹಾಗೂ ಭಕ್ತಿಗೆ ಪ್ರಧಾನ ಕ್ಷೇತ್ರವಾಗಿ ಬೆಳೆಯಲಿ ಎಂದರು. ಅಯ್ಯಪ್ಪಸ್ವಾಮಿಯನ್ನ್ನು ಎಲ್ಲ ಜಾತಿ ಧರ್ಮದವರು ಆರಾಧಿಸುತ್ತಾರೆ. ಆತ ತನ್ನ್ನ ಭಕ್ತರನ್ನು ಎಂದಿಗೂ ಕೈ ಬಿಟ್ಟಿಲ್ಲ. ಈಗ ಈ ದೇವರ ಪವಿತ್ರ ದೇವಸ್ಥಾನ ಹುಬ್ಬಳ್ಳಿಯಲ್ಲಿಯೇ ನಿರ್ಮಾಣಗೊಂಡಿರುವುದು ಈ ಭಾಗದ ಭಕ್ತರ ಶ್ರೇಯೋಭಿವೃದ್ಧಿಗೆ ದಾರಿಯಾಗಲಿದೆ. ಅದರಲ್ಲಿಯೂ ದಾನ-ಧರ್ಮಗಳಿಂದ ನಿರ್ಮಾಣವಾಗಿರುವ ಈ ದೇವಾಲಯದ ಮೇಲೆ ಅಯ್ಯಪ್ಪಸ್ವಾಮಿ ವಿಶೇಷ ಕೃಪೆ ಇರಲಿದೆ ಎಂದರು.
ಶ್ರೀ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ಅಧ್ಯಕ್ಷ ಆನಂದ ಸಂಕೇಶ್ವರ ಶ್ರೀಗಳನ್ನು ಬರಮಾಡಿಕೊಂಡರು. ಆನಂದ ಗುರುಸ್ವಾಮಿ, ಟ್ರಸ್ಟ್ ಉಪಾಧ್ಯಕ್ಷ ವಿ.ಎಸ್.ವಿ. ಪ್ರಸಾದ, ಜೈರಾಮ ಶೆಟ್ಟಿ, ಪಿ.ಡಿ. ಶೆಟ್ಟಿ, ಜಿ.ಎಸ್. ಅಯ್ಯರ, ರೇವಣಕರ, ಪ್ರದೀಪ ಶೆಟ್ಟಿ, ಇತರರು ಉಪಸ್ಥಿತರಿದ್ದರು.