ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಚುನಾವಣೆ ಬಳಿಕವೂ ಜೋಶ್!

Lingaraj Badiger
Updated On : 19 Apr 2014, 11:24 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 18
ಬೆಳ್ಳಂಬೆಳಗ್ಗೆ ಬೆಂಬಲಿಗರೊಂದಿಗೆ ಪ್ರಚಾರಕ್ಕೆ ಹೊರಡುತ್ತಿದ್ದ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಶಿಯವರ ಮಯೂರಿ ಬಡಾವಣೆಯ ಮನೆಯಲ್ಲಿ ಚುನಾವಣೆ ಮರುದಿನವೂ ಕಾರ್ಯಕರ್ತರದ್ದೇ ಗದ್ದಲ.
ಎರಡು ತಿಂಗಳಿಂದ ಬೆಳಗ್ಗೆ 7-8ರೊಳಗೆ ಪ್ರಚಾರಕ್ಕೆ ತೆರಳುತ್ತಿದ್ದ ಪ್ರಹ್ಲಾದ ಜೋಶಿ, ಶುಕ್ರವಾರ ಹಾಸಿಗೆಯಿಂದ ಎದ್ದಿದ್ದೇ 8.30ಕ್ಕೆ. ಪ್ರಚಾರಕ್ಕಾಗಿ ಹಳ್ಳಿಹಳ್ಳಿ ತಿರುಗಿ ಸುಸ್ತಾಗಿದ್ದ ಜೋಶಿ, ಶುಕ್ರವಾರ ಪೂರ್ತಿ ರಿಲ್ಯಾಕ್ಸ್ ಮೂಡ್‌ನಲ್ಲಿದ್ದರು.
ಎಷ್ಟೋ ದಿನಗಳಿಂದ ದಣಿದಿದ್ದ ಕಣ್ಣುಗಳು ಈಗ ಭರಪೂರ ನಿದ್ದೆ ಕಂಡು ಸೊಂಪಾಗಿದ್ದವು. ನಿತ್ಯ ಕರ್ಮ ಮುಗಿಸಿ ಹಾಲ್‌ಗೆ ಬಂದು ಕುಳಿತ ಜೋಶಿ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸುವ ಹೊತ್ತಿಗೆ ಬಿಜೆಪಿ ಮುಖಂಡರು, ಹಿತೈಷಿಗಳು, ಕಾರ್ಯಕರ್ತರ ದಂಡು ಅವರನ್ನು ಮುತ್ತಿತು. ಶರ್ಟ್ ಹಾಗೂ ಪಂಚೆ ಉಟ್ಟು ಕುಳಿತಿದ್ದ ಜೋಶಿ, ಎಲ್ಲರಿಗೂ ಚಹಾ ವ್ಯವಸ್ಥೆ ಮಾಡುವಂತೆ ಪತ್ನಿ ಜ್ಯೋತಿ ಜೋಶಿಯವರಿಗೆ ತಿಳಿಸಿ ಮಾತಿಗೆ ಮುಂದಾದರು.
ಹಾಸ್ಯ ಚಟಾಕಿ: ರಣ ಬಿಸಿಲನ್ನೂ ಲೆಕ್ಕಿಸದೆ ತಿಂಗಳಿಂದ ಒಂದೇ ಸಮನೆ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತಾಡಿದ್ದ ಸುಸ್ತು ಅವರ ಮುಖದಲ್ಲಿ ಇನ್ನೂ ಕಾಣುತ್ತಿತ್ತು. ಆದರೂ ಮನೆಗೆ ಬರುತ್ತಿದ್ದವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಾ, ಏನ್ರೀ ಗೌಡ್ರ ಗದ್ಲಾ... ಎನ್ನುತ್ತಾ ಹಾಸ್ಯ ಚಟಾಕಿ ಹಾರಿಸಿ ಮಾತನಾಡಿಸಿದರು. ತಲೆ ಮೇಲೆ ಇದ್ದ ಹೊರಿ ಕೆಳಗಿಳಿಸಿದಾಂಗ ಆಗೈತಿ ನೋಡ್ರಿ ಸರ್... ಎಂದು ಕುಂದಗೋಳದಿಂದ ಬಂದ ಬಿಜೆಪಿ ಮುಖಂಡರೊಬ್ಬರು ಹೇಳಿದಾಗ, ದೇವೆಗೌಡ್ರು ಕೇಳಿಸಿಕೊಂಡಾರು ಸುಮ್ನಿರ್ರೀ... ಎಂದು ಚಟಾಕಿ ಹಾರಿಸಿದರು.
ಆ ವೇಳೆಗೆ ಹುಬ್ಬಳ್ಳಿ ಗ್ರಾಮೀಣ ಪ್ರದೇಶದಿಂದ ಬಂದ ಬಿಜೆಪಿ ಮುಖಂಡರೋರ್ವರು, 'ಜೋಶಿ ಸಾಹೇಬ್ರ ಚಿಂತಿ ಬಿಡ್ರಿ ಈ ಬಾರಿ ನಿಮ್ದರೀ...' ಎಂದು ಕೈ ಕುಲುಕಿದರು. ಪ್ರತಿಯಾಗಿ "ಏನನ್ನೋದು ಪೂರಾ ಬಿಡ್ಸಿ ಹೇಳೋ ಮಾರಾಯಾ...' ಎಂದಾಗ ನೆರೆದವರ ಮುಖ ಅರಳಿತ್ತು. ಹೀಗೆ ಬಂದವರೊಟ್ಟಿಗೆ ಜೋಕ್ ಕತ್ತರಿಸುತ್ತಾ ಹಾಯಾಗಿ ಹರಟೆ ಹೊಡೆದರು ಜೋಶಿ.
ಮತ ಲೆಕ್ಕಾಚಾರ: ಪಕ್ಷದಲ್ಲೇ ತಮ್ಮ ಕಾಲೆಳೆದವರ ಬಗ್ಗೆ, ಅಪಪ್ರಚಾರ ಮಾಡಿದವರ ಬಗ್ಗೆ ಕೊಂಚ ಸಿಡಿಮಿಡಿಗೊಳ್ಳುತ್ತಾ, 'ಪಕ್ಷಕ್ಕೆ ದ್ರೋಹ ಮಾಡ್ದವರು ಉದ್ಧಾರ ಆಗಾಂಗಿಲ್ಲ ಬಿಡ್ರಿ' ಎನ್ನುತ್ತಾ ಮಾತು ಮುಂದುವರಿಸಿದರು. ಯಾವ್ಯಾವ ಮತಗಟ್ಟೆಯಲ್ಲಿ ತಮಗೆ ಪ್ಲಸ್ ಆಗಿದೆ ಎಲ್ಲಿ ಮೈನಸ್ ಆಗಿದೆ ಎಂದು ಪೆನ್ನು, ಹಾಳೆ ಹಿಡಿದು ಲೆಕ್ಕಾಚಾರಾ ಹಾಕುತ್ತಿದ್ದರು. ತಾವು ಯಾವ ಊರಿಗೆ ಎಂಪಿ ಫಂಡ್ ಕೊಟ್ಟಿದ್ದೇನೆ, ಅದರ ಪ್ರತಿಫಲವಾಗಿ ಬರುವ ಮತವೆಷ್ಟು ಎಂದು ಪರಿಶೀಲಿಸುತ್ತಿದ್ದರು. ಮೋದಿ ಹವಾದಿಂದ ಬರುವ ಮತವೆಷ್ಟು? ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯದಿಂದ ಸಿಗುವ ಮತವೆಷ್ಟು? ಕಳೆದ ಬಾರಿಗಿಂತ ಈ ಸಲ ಶೇ. 10ರಷ್ಟು ಮತ ಹೆಚ್ಚಳವಾಗಿದೆ, ಈ ಪೈಕಿ ತಮಗೆಷ್ಟು ದಕ್ಕಬಹುದು ಎಂಬ ಎಣಿಕೆಯೂ ನಡೆಯಿತು.
ಟೂರ್ ಹೋಗ್ತಾರಂತೆ: 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಜೋಶಿ, ಚುನಾವಣೆಯಿಂದ ಬಿಡುವಿಲ್ಲದಂತೆ ತಿರುಗಿದ್ದಾಯಿತು. ಇದೀಗ ಕುಟುಂಬ ಸಮೇತ 4-5 ದಿನ ಟೂರ್ ಹೋಗಲು ತೀರ್ಮಾನಿಸಿದ್ದೇನೆ. ಅನ್ಯ ರಾಜ್ಯಗಳ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವಿರಾ ಎಂದು ಕೇಳಿದಾಗ, ನಾನೇನು ಅಂಥಾ ದೊಡ್ಡ ಲೀಡರ್ ಅಲ್ಲಾ ಬಿಡ್ರಿ ಎಂದರು. ನಾನಿದ್ದರೆ ಸಾಕು, ಮನೆಯಲ್ಲಿ ಸದಾ ಕಾರ್ಯಕರ್ತರಿರುತ್ತಾರೆ, ಇವತ್ತೂ ಇದ್ದಾರೆ. ಜನರಿಲ್ಲದಿದ್ದರೆ ನನಗೆ ಏನೋ ಕಳೆದುಕೊಂಡಂತಾಗುತ್ತದೆ. ರೆಸ್ಟು-ಗಿಸ್ಟು ಏನೂ ಇಲ್ಲ. ಫುಲ್ ಟೈಮ್ ಸೇವಾ ನೋಡ್ರಿ ಎಂದು ಜೋಶಿ ಮತ್ತೊಂದಿಷ್ಟು ಕಾರ್ಯಕರ್ತರೊಂದಿಗೆ ಮಾತು ಶುರುಮಾಡಿಕೊಂಡರು.
-ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement