ಸಂಸ್ಕೃತಿ, ಸಂಪ್ರದಾಯದ ಆಗರ ಜಾನಪದ
ಕನ್ನಡಪ್ರಭ ವಾರ್ತೆ, ಧಾರವಾಡ, ಏ. 20
ತಲೆಮಾರಿನ ಸಂಸ್ಕೃತಿ, ಸಂಪ್ರದಾಯಗಳ ಆಗರ ಪ್ರತಿಬಿಂಬವೇ ಜಾನಪದ ಎಂದು ಕಲಘಟಗಿಯ ಜಾನಪದ ಪರಿಷತ್ ಅಧ್ಯಕ್ಷ ಮಲ್ಲಯ್ಯಸ್ವಾಮಿ ತೋಟಗಂಟಿಮಠ ಹೇಳಿದರು.
ವಿದ್ಯಾವರ್ಧಕ ಸಂಘದ ಜಾನಪದ ಮಂಟಪ ಆಯೋಜಿಸಿದ್ದ ಯಕ್ಕೇರಪ್ಪ ನಡುವಿನಮನಿ (ಶ್ಯಾನವಾಡ ಮಾಸ್ತರ) ಅವರ ತತ್ವಪದ ಹಾಗೂ ಜನಪದ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನಪದ ಸಾಹಿತ್ಯ ಬರೀ ಹಾಡುಗಳಿಂದ ಕೂಡಿಲ್ಲ. ಅದು ಮಾನವನ ಹುಟ್ಟಿನಿಂದ ಹಿಡಿದು ಸಾವಿನವರೆಗೂ ಬರುವ ಎಲ್ಲ ಸುಖಃ ದುಃಖ ನೋವು-ನಲಿವುಗಳ ರಸಗಟ್ಟಿಯೇ ಜನಪದ ಸಾಹಿತ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷ ಶಿವಣ್ಣ ಬೆಲ್ಲದ, ನಾವು ಸಣ್ಣವರಿದ್ದಾಗ ರೈತರು ಕಣ ಮಾಡಿ ಕಣದಲ್ಲಿ ಮೇಟಿ ನಡೆಸಿ ಮೇಟಿಗೆ ಹತ್ತಿಪ್ಪತ್ತು ದನಕರುಗಳನ್ನು ಕಟ್ಟಿ ಹಂತಿ ತುಳಿಸುತ್ತಾ, ಇಂಪಾಗಿ ಹಂತಿಪದ ಹೇಳುತ್ತಿದ್ದರು. ಅವುಗಳನ್ನು ಕೇಳಿದ ನಾವು ಇಂದಿಗೂ ಮರೆಯುವಂತಿಲ್ಲ. ಇಂತಹ ಹಾಡುಗಳನ್ನು ಉಳಿಸಿ, ಬೆಳೆಸಿಕೊಂಡು ಬರಬೇಕೆಂದರು.
ಸಾಹಿತಿ ಮೋಹನ ನಾಗಮ್ಮನವರ ಪ್ರಾಸ್ತಾವಿಕ ಮಾತನಾಡಿದರು. ಜಾನಪದ ಮಂಟಪದ ಸಂಚಾಲಕ ಶಂಕರ ಕುಂಬಿ ಸ್ವಾಗತಿಸಿದರು. ಎಂ.ಆರ್. ಬಾವಾಖಾನ ಪ್ರಾರ್ಥಿಸಿದರು. ಜಾನಪದ ಮಂಟಪ ಸಲಹಾ ಸಮಿತಿ ಸದಸ್ಯ ಡಾ. ರಾಮೂ ಮೂಲಗಿ ನಿರೂಪಿಸಿದರು. ಯಕ್ಕೇರಪ್ಪ ನಡುವಿನಮನಿ ಅವರು ತತ್ವಪದ ಹಾಗೂ ಜನಪದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಅನಿಲ ಮೇತ್ರಿ ತಬಲಾ ಹಾಗೂ ವಾದಿರಾಜ ನಿಂಬರಗಿ ವಾಯಲಿನ್ ಸಾಥ್ ನೀಡಿದರು. ಹಾಡಿನಲ್ಲಿ ಶೇಖಣ್ಣ ಕಿತ್ತೂರ, ಎಂ. ಜಿ. ನೂಲಕರ್ ಸಾಥ್ ನೀಡಿದರು.