ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

3ನೇ ರೈತ ಬಂಡಾಯಕ್ಕೆ ಸಿದ್ಧ

Rashmi Kasaragodu
Updated On : 23 Apr 2014, 12:12 pm

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 22
ಜೂನ್ ಹೊತ್ತಿಗೆ ಕಳಸಾ ನಾಲೆಯಿಂದ ಕನಿಷ್ಠ 1.5 ಟಿಎಂಸಿ ನೀರನ್ನು ತರುತ್ತೇವೆ ಎಂದು ಚುನಾವಣೆ ಹೊಸ್ತಿಲಲ್ಲಿ ಮಾತು ನೀಡಿ ಅದರಂತೆ ನಡೆದುಕೊಳ್ಳಲಿಕ್ಕೆ ಆಗದ ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ನಮ್ಮ ಪ್ರಾಣ ಹೋದರೂ ಚಿಂತೆ ಇಲ್ಲ. ಮೂರನೇ ರೈತ ಬಂಡಾಯಕ್ಕೆ ಅನಿವಾರ್ಯವಾಗಿ ಸಿದ್ಧವಾಗಬೇಕಾಗುತ್ತದೆ ಎಂದು ಕಳಸಾ ಬಂಡೂರಿ ಕೇಂದ್ರ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ಮತ್ತು ಬಿಜೆಪಿಯ ರಾಜಕಾರಣಿಗಳು ಕುಡಿಯುವ ನೀರಿಗಾಗಿ ತಹತಹಿಸುತ್ತಿರುವ ಜನರಿಗೆ ಸುಳ್ಳು ಆಶ್ವಾಸನೆ ನೀಡಿ ಜನರನ್ನು ವಂಚಿಸಿದ್ದಾರೆ. ಮಹಾದಾಯಿ ನ್ಯಾಯಾಧೀಕರಣದಲ್ಲಿ ಮಧ್ಯಂತರ ಆದೇಶಕ್ಕೆ ಸಮರ್ಥ ವಾದ ಮಂಡಿಸಲಾಗುವುದು ಎಂದು ಸುಳ್ಳು ಹೇಳಿದ್ದಾರೆ.  ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನ್ಯಾಯಾಧೀಕರಣದಲ್ಲಿ ರಾಜ್ಯದ ಪರ ವಾದಿಸುತ್ತಿರುವ ನ್ಯಾಯವಾದಿಗಳು ಮಧ್ಯಂತರ ಆದೇಶಕ್ಕೆ ವಾದ ಮಾಡಿಯೇ ಇಲ್ಲ. ಇದೀಗ ಸ್ವಾಭಾವಿಕವಾಗಿ ನಾಲೆಗೆ ಹರಿದು ಬರುವ ನೀರಿಗೂ ತಡೆಗೋಡೆ ನಿರ್ಮಿಸುತ್ತೇವೆ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದು, ಅಲ್ಲದೇ 2006ರಲ್ಲಿ ರಾಜ್ಯ ಸರ್ಕಾರ ವಿವಾದಿತ ನೀರನ್ನು ತೀರ್ಪು ಬರುವವರೆಗೆ ಬಳಕೆ ಮಾಡುವುದಿಲ್ಲ ಎಂದು ಬರೆದುಕೊಟ್ಟಿತ್ತು. ಹೀಗಾಗಿ  ಆ ರೀತಿ ನಡೆದುಕೊಳ್ಳುತ್ತಿದ್ದೇವೆ ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ಆದಾಗ್ಯೂ 1.5 ಟಿಎಂಸಿ ನೀರು ತರುವ ಭರವಸೆ ನೀಡುವ ಮೂಲಕ ರಾಜಕಾರಣಿಗಳು ಜನರಿಗೆ ಮೋಸ ಮಾಡಿದ್ದಾರೆ.
ಕಳಸಾ ಬಂಡೂರಿ ಹೋರಾಟ ಸಮಿತಿ ಸಂಚಾಲಕ ವಿಕಾಸ ಸೊಪ್ಪಿನ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಮಹಾದಾಯಿ ಮತ್ತು ಕಳಸಾ-ಬಂಡೂರಿ ನಾಲಾ ಯೋಜನೆಯನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಸೆಪ್ಟಂಬರ್ನಲ್ಲಿ ಬೆಳಗಾವಿ ಸಭೆ ಸೇರಿದ್ದ ಮಹಾದಾಯಿ ನ್ಯಾಯಾಧೀಕರಣದಲ್ಲಿ ವಾದ ಮಂಡಿಸುತ್ತಿರುವ ನ್ಯಾಯವಾದಿಗಳ ತಂಡ ಮತ್ತು ತಂತ್ರಜ್ಞರ ತಂಡ ಮಧ್ಯಂತರ ಆದೇಶಕ್ಕೆ ವಾದ ಮಂಡಿಸುವ ಕುರಿತು ತೀರ್ಮಾನಿಸಿತ್ತು. ಆದರೆ ಗೋವಾ ರಾಜ್ಯದಲ್ಲಿ ಇನ್ನೂ ಚುನಾವಣೆ ಬಾಕಿ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್, ಮಹಾದಾಯಿ ವಿವಾದ ಬಳಸಿಕೊಂಡು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂದರು.
ಸ್ವಾಭಾವಿಕವಾಗಿ ಹರಿದು ಬರುವ ನೀರಿಗೂ ತಡೆಗೋಡೆ ನಿರ್ಮಿಸುವುದಕ್ಕೆ ಸರ್ಕಾರ ತರಾತುರಿಯಲ್ಲಿ ಒಪ್ಪಿಗೆ ನೀಡಿದೆ. ಮುಂಬರುವ ಮುಂಗಾರು ಹಂಗಾಮಿನಲ್ಲಿ ಸ್ವಾಭಾವಿಕವಾಗಿ ಹರಿದು ಬರುವ ನೀರನ್ನು ಉಪಯೋಗಿಸುವುದಕ್ಕೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಅಥವಾ ನ್ಯಾಯಾಧೀಕರಣಕ್ಕೆ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಶೈಲೇಂದ್ರಕುಮಾರ ಪಾಟೀಲ, ಶ್ರೀಕಾಂತ ಕಬಾಡಿ, ಮಹೇಶ ಪತ್ತಾರ ಸೇರಿದಂತೆ ಇತರರು ಇದ್ದರು.


ಮೇ 11ರಿಂದ ಜಾಥಾ
ಕಳಸಾ ನಾಲೆಯಿಂದ ಮಲಪ್ರಭಾ ನದಿಗೆ ನೀರು ತರುವ ನಿಟ್ಟಿನಲ್ಲಿ ಮಧ್ಯಂತರ ಆದೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ರೈತ ಬಂಡಾಯದ ನೆಲ ನರಗುಂದ ತಾಲೂಕಿನಿಂದ ಬೆಳಗಾವಿವರೆಗೆ ಕಳಸಾ ಬಂಡೂರಿ ಕೇಂದ್ರ ಹೋರಾಟ ಸಮಿತಿಯಿಂದ ಜಾಥಾ ಹಮ್ಮಿಕೊಳ್ಳಲಾಗಿದೆ. ಮೇ 12ರಂದು ಬೆಳಗಾವಿಯ ವಿಭಾಗೀಯ ಕಮಿಷನರ್ ಮುಖಾಂತರ ರಾಷ್ಟ್ರಪತಿ ಮತ್ತು ಪ್ರಧಾನಿಗೆ ಮನವಿ ಸಲ್ಲಿಸಿ ಒಂದು ದಿನದ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗುವುದು. ಮನವಿಯಲ್ಲಿ ಮಹಾದಾಯಿ ವಿವಾದ ಪರಿಹಾರಕ್ಕೆ ಮಧ್ಯ ಪ್ರವೇಶಿಸಿ ವಿವಾದ ಇತ್ಯರ್ಥ ಪಡಿಸಬೇಕು ಎಂದು ಆಗ್ರಹಿಸಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement