ಹಸಿರು ವರ್ತುಲ ರಂಗಸ್ಥಳ ಸಾಕಾರ
ದುಬೈ: ಸೌರಶಕ್ತಿ ಚಾಲಿತ 'ಹಸಿರು ವರ್ತುಲ ರಂಗಸ್ಥಳ' ಸ್ಥಾಪಿಸುವ ಧಾರವಾಡದ ಕಲಕೇರಿ ಸಂಗೀತ ವಿದ್ಯಾಲಯ(ಕೆಎಸ್ವಿ)ದ ಕನಸು ಈಗ ನನಸಾಗುತ್ತಿದೆ. ತನ್ನ ಸುಸ್ಥಿರ ಯೋಜನೆ ಅನುಷ್ಠಾನಕ್ಕಾಗಿ ವಿದ್ಯಾಲಯವು ಸೆಲ್ಕೋ ಇಂಡಿಯಾದ ಸಹಕಾರ ಪಡೆಯುತ್ತಿದೆ.
ಕೆಎಸ್ವಿ ವಿದ್ಯಾರ್ಥಿಗಳೇ ನೇತೃತ್ವ ವಹಿಸಿ ರೂಪಿಸಿದ್ದ ಸುಸ್ಥಿರ ಯೋಜನೆಗೆ ಪ್ರಸಕ್ತ ವರ್ಷಾರಂಭದಲ್ಲಿ ದುಬೈನ ಝಯೇದ್ ಫ್ಯೂಚರ್ ಎನರ್ಜಿ ಪ್ರಶಸ್ತಿ ದೊರೆತಿತ್ತು. ಅದರಂತೆ ಕೆಎಸ್ವಿಗೆ ರು. 60 ಲಕ್ಷ (1 ಲಕ್ಷ ಡಾಲರ್) ನಗದು ಬಹುಮಾನ ನೀಡಲಾಗಿತ್ತು.
ಬಡತನ ನಿವಾರಣೆಗೆ ನವೀಕರಿಸಬಹುದಾದ ಶಕ್ತಿಯನ್ನು ಬಳಸುತ್ತಿರುವ ಸೆಲ್ಕೋ ಇಂಡಿಯಾ ಕಂಪನಿಯ ಸಹಭಾಗಿತ್ವದಲ್ಲಿ ಈಗ ಕಲಕೇರಿ ವಿದ್ಯಾಲಯ ತನ್ನ ಯೋಜನೆ ಅನುಷ್ಠಾನಕ್ಕೆ ತರಲು ಮುಂದಾಗಿದೆ. ಮೊದಲು ವಿದ್ಯಾಲಯದಲ್ಲೊಂದು ಸೌರಶಕ್ತಿ ಚಾಲಿತ ಹಸಿರು ವರ್ತುಲ ರಂಗಸ್ಥಳವನ್ನು ನಿರ್ಮಿಸುವುದು ಕೆಎಸ್ವಿ ಉದ್ದೇಶ. ಬಳಿಕ, ತರಗತಿಗಳು ಹಾಗೂ ಹಾಸ್ಟೆಲ್ಗಳಿಗೆ ವಿದ್ಯುತ್ ಪೂರೈಸಲು ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ಮಿನಿ ಗ್ರಿಡ್ ಅನ್ನು ಸೆಲ್ಕೋ ಅಳವಡಿಸಲಿದೆ.