ಜೀವ ಬೆದರಿಕೆ ಇಬ್ಬರ ಬಂಧನ
ಹುಬ್ಬಳ್ಳಿ: ಆಸ್ತಿ ವಿವಾದಕ್ಕೆ ಸಂಬಂಧಿಸಿದ ತಮ್ಮ ಹಿರಿಯಣ್ಣನ ಮಗಳಿಗೆ ಜೀವ ಬೆದರಿಕೆ ಹಾಕಿದ್ದ ಇಬ್ಬರು ಚಿಕ್ಕಪ್ಪಂದಿರನ್ನು ಕೇಶ್ವಾಪುರ ಪೊಲೀಸರು ಬಂಧಿಸಿದ್ದಾರೆ. ಕೆಲವು ದಿನಗಳ ಹಿಂದೆ ತಂದೆಗೆ ಬರಬೇಕಿದ್ದ ಪಿತ್ರಾರ್ಜಿತ ಆಸ್ತಿಯಲ್ಲಿನ ಪಾಲು ಕೇಳಲು ಹೋಗಿದ್ದ ಇಲ್ಲಿನ ನವೀನ್ ಪಾರ್ಕ್ ನಿವಾಸಿ ಶ್ರೀದೇವಿ ಶ್ರೀನಿವಾಸ ಯಾದವಾಡ ಅವರಿಗೆ ಚಿಕ್ಕಪ್ಪಂದಿರಾದ ಮೋಹನ ಕುಲಕರ್ಣಿ ಮತ್ತು ಅಶೋಕ ಕುಲಕರ್ಣಿ ಜೀವ ಬೆದರಿಕೆ ಹಾಕಿದ್ದರು. ಜೀವ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಲಕಂಠ ಕುಲಕರ್ಣಿ ಮತ್ತು ಇನ್ನಿಬ್ಬರು ನಾಪತ್ತೆಯಾಗಿದ್ದಾರೆ. ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿರುವ ತನ್ನ ತಂದೆಗೆ ಸಲ್ಲಬೇಕಿರುವ ಪಿತ್ರಾರ್ಜಿತ ಆಸ್ತಿಯಲ್ಲಿನ ಪಾಲನ್ನು ಕೊಟ್ಟುಬಿಡಿ ಎಂದು ಶ್ರೀದೇವಿ ಕೇಳಿದ್ದರು. ಆಸ್ತಿಯಲ್ಲಿ ಪಾಲು ಕೇಳುತ್ತಿರುವ ಶ್ರೀದೇವಿ ಮನೆಗೆ ಕೆಲವು ದಿನಗಳ ಹಿಂದೆ ಗೂಂಡಾಗಳನ್ನು ಕಳುಹಿಸಿದ್ದ ಕುಲಕರ್ಣಿ ಸಹೋದರರು ಜೀವ ಬೆದರಿಕೆ ಹಾಕಿದ್ದರು. ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿರುವ ಕೃಷ್ಣಾಜಿ ಅವರ ಆಸ್ತಿಯನ್ನು ನಕಲಿ ಸಹಿ ಮಾಡಿ ಮಾಡಿದ್ದಾರೆ ಎಂಬ ಆರೋಪ ಇದ್ದು, ಆಸ್ತಿ ವಿವಾದಕ್ಕೆ ಸಂಬಂದಿಸಿದಂತೆ ಹುಬ್ಬಳ್ಳಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದೆ.
ಎ. ಕೃಷ್ಣಪ್ಪಗೆ ಜೆಡಿಎಸ್ ಶ್ರದ್ಧಾಂಜಲಿ
ಹುಬ್ಬಳ್ಳಿ: ಜೆಡಿಎಸ್ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ನಿಧನದಹಿನ್ನೆಲೆಯಲ್ಲಿ ಮಹಾನಗರ ಜಿಲ್ಲಾ ಜೆಡಿಎಸ್ ವತಿಯಿಂದ ನಗರದಲ್ಲಿ ಗುರುವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ದುರ್ಗದಬೈಲ್ ವೃತ್ತದಲ್ಲಿ ಜರುಗಿದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಮಹಾನಗರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಾಜಣ್ಣ ಕೊರವಿ, ಕಾರ್ಮಿಕ ನಾಯಕರಾಗಿ ಸತತ ನಾಲ್ಕು ಬಾರಿ ಶಾಸಕರಾಗಿ, ಸಚಿವರಾಗಿದ್ದ ಕೃಷ್ಣಪ್ಪ ಅವರು ಪಕ್ಷದ ಸಂಘಟನೆಗಾಗಿ ಶ್ರಮಿಸಿದ್ದರು. ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ಹಾನಿಯಾಗಿದೆ ಎಂದರು. ವಿ.ಐ. ಅಳಗುಂಡಗಿ, ಕಿರಣ ಹಿರೇಮಠ, ಫೆಮೀದಾ ಕಿಲ್ಲೇದಾರ, ಗುರಯ್ಯ ವಿರಕ್ತಮಠ, ಶ್ರೀಕಾಂತ ಮಗಜಿಕೊಂಡಿ ಮತ್ತಿತರರು ಇದ್ದರು.