ಮದ್ಯಕ್ಕೆ ಮತ ಮಾರಿಕೊಳ್ಳದ ಮತದಾರ
ನಾರಾಯಣ ಹೆಗಡೆ
ಹಾವೇರಿ: ಮತದಾರರಿಗೆ ಹಣ ಹಾಗೂ ಹೆಂಡ ಹಂಚದೇ ರಾಜಕೀಯ ಪಕ್ಷಗಳಿಂದ ಚುನಾವಣೆ ನಡೆಸಲು ಸಾಧ್ಯವೇ ಇಲ್ಲ ಎಂಬ ಮಾತಿದೆ. ಆದರೆ, ಈ ಬಾರಿ ಇವೆರಡರ ಕರಾಮತ್ತು ಜಿಲ್ಲೆಯಲ್ಲಿ ಅಷ್ಟಾಗಿ ಕಂಡುಬಂದಿಲ್ಲ. ಮತದಾರ ಯಾವುದೇ ಆಮಿಷಗಳಿಗೆ ಬಲಿಯಾಗದೇ ಮತ ಚಲಾಯಿಸಿದ್ದು, ಈ ಸಲದ ವಿಶೇಷ.
ಇದು ಆಶ್ಚರ್ಯವಾದರೂ ಅಬಕಾರಿ ಇಲಾಖೆ ಅಂಕಿಸಂಖ್ಯೆಯೇ ಈ ವಿಷಯ ಸಾಬೀತುಪಡಿಸುತ್ತವೆ. ಕೆಲ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮದ್ಯ ಮಾರಾಟವಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಏ.15ರೊಳಗೇ ತಿಂಗಳ ಗುರಿ ಸಾಧನೆಯಾಗಿ, ಬಾರ್, ವೈನ್ಶಾಪ್ಗಳಲ್ಲಿ ಎಲ್ಲ ಬ್ರಾಂಡ್ಗಳ ಮದ್ಯ ದೊರೆಯದಂತಾಗಿದೆ. ಆದರೆ, ಹಾವೇರಿ ಜಿಲ್ಲೆಯಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧ. ಏಪ್ರಿಲ್ ಕೊನೆಯ ವಾರವಾದರೂ ಅರ್ಧದಷ್ಟೂ ಗುರಿ ತಲುಪಲಾಗಿಲ್ಲ. ಮತದಾರ ಈ ಸಲ ರಾಜಕೀಯ ಪಕ್ಷಗಳು ಹಂಚುವ ಮದ್ಯಕ್ಕೆ ಬಲಿಯಾಗದಿರುವುದೇ ಕಾರಣ. ಅಲ್ಲದೆ, ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮವೂ ಮದ್ಯ ಹಂಚಿಕೆಯಾಗುವುದನ್ನು ತಡೆದಿದೆ.
ಮಾರಾಟವಾಗದ ಮದ್ಯ: ಚುನಾವಣೆ ಸಂದರ್ಭ ಮದ್ಯ ವ್ಯಾಪಾರ ಜೋರಾಗಿ ನಡೆಯುತ್ತದೆ ಎಂದು ಅಧಿಕೃತ ಮದ್ಯ ಮಾರಾಟಗಾರರು ವಿವಿಧ ಬ್ರಾಂಡ್ಗಳ ಮದ್ಯ ಸಂಗ್ರಹಿಸಿಟ್ಟುಕೊಂಡಿದ್ದರು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವಾಗಿಲ್ಲ. ಯಾವ ರಾಜಕೀಯ ಪಕ್ಷಗಳೂ ಮತದಾರರಿಗೆ ಹಂಚಲು ಮದ್ಯ ಖರೀದಿಸಿಲ್ಲ. ಒಂದು ವೇಳೆ ಹಂಚಿಕೆಯಾಗಿದ್ದರೆ ಅಬಕಾರಿ ಇಲಾಖೆಗೆ ಅದರ ಪಕ್ಕಾ ಲೆಕ್ಕ ಸಿಗುತ್ತಿತ್ತು. ಮಾರ್ಚ್ ತಿಂಗಳಲ್ಲಿ ಅಬಕಾರಿ ಇಲಾಖೆಯು ಜಿಲ್ಲೆಗೆ 99,448 ಬಾಕ್ಸ್ ಲಿಕ್ಕರ್ ಮಾರಾಟದ ಗುರಿ ನಿಗದಿಪಡಿಸಿತ್ತು. ಆದರೆ, ಸೋಮವಾರದವರೆಗೆ ಶೇ. 59ರಷ್ಟು ಮದ್ಯ ಮಾರಾಟವಾಗಿದ್ದು, ಇನ್ನುಳಿದ ಒಂದು ವಾರದಲ್ಲಿ ಶೇ.ನೂರು ಗುರಿ ತಲುಪುವುದು ಅನುಮಾನ ಎಂದು ಅಬಕಾರಿ ಇಲಾಖೆ ಅಧಿಕಾರಿಗಳೇ ಹೇಳುತ್ತಾರೆ. ಅಲ್ಲದೆ, ಮಾರ್ಚ್ ತಿಂಗಳಲ್ಲೇ ಮತದಾರರಿಗೆ ಹಂಚಲು ರಾಜಕೀಯ ಪಕ್ಷಗಳು ಸಗಟಾಗಿ ಮದ್ಯ ಖರೀದಿಸಿಲ್ಲ. ಮಾರ್ಚ್ ತಿಂಗಳಲ್ಲಿ ಶೇ.76ರಷ್ಟು ಗುರಿ ತಲುಪಲು ಮಾತ್ರ ಇಲಾಖೆಗೆ ಸಾಧ್ಯವಾಗಿದೆ.
ಕಟ್ಟುನಿಟ್ಟಿನ ಕ್ರಮ: ಈ ಸಲ ಚುನಾವಣೆಯಲ್ಲಿ ಮದ್ಯ ವಿತರಣೆ ಸೇರಿದಂತೆ ಯಾವ ಅಕ್ರಮಕ್ಕೂ ಚುನಾವಣಾ ಆಯೋಗ ಆಸ್ಪದ ನೀಡಿಲ್ಲ. ಅಕ್ರಮ ಮದ್ಯ ಸಾಗಾಟಕ್ಕೆ ಅಸ್ಪದವೇ ಇಲ್ಲದಷ್ಟು ಎಂಸಿಸಿ ತಂಡದ ಅಧಿಕಾರಿಗಳು ಎಲ್ಲ ಕಡೆ ಕಣ್ಣಿಟ್ಟಿದ್ದರು. ಅಬಕಾರಿ ಇಲಾಖೆಯಿಂದ ಚುನಾವಣೆ ಸಂದರ್ಭ 143 ದಾಳಿಗಳು ನಡೆದು, ಅಕ್ರಮ ಮದ್ಯ ಸಾಗಿಸುತ್ತಿದ್ದ ಆರೋಪದಲ್ಲಿ 106 ಜನರನ್ನು ಬಂಧಿಸಿದ್ದರು. ಇದರಿಂದ ರಾಜಕೀಯ ಪಕ್ಷಗಳೂ ಎಚ್ಚೆತ್ತು ಮದ್ಯ ಹಂಚಿಕೆ ವಿಷಯವನ್ನೇ ಕೈಬಿಟ್ಟಿದ್ದರು ಎಂಬ ಮಾಹಿತಿಯಿದೆ.
ಜಾಗೃತಿ ಕಾರಣ: ಈ ಸಲ ಚುನಾವಣೆ ನೀತಿ ಸಂಹಿತೆ ಜಾರಿಯಾದಾಗಿನಿಂದಲೂ ಆಯೋಗ, ಸಂಘಸಂಸ್ಥೆಗಳಿಂದ ಮತದಾರರ ಜಾಗೃತಿ ಕಾರ್ಯಕ್ರಮಗಳು ನಡೆದವು. ಸಣ್ಣ ಗ್ರಾಮದಿಂದ ಎಲ್ಲ ನಗರಗಳಲ್ಲೂ ಮತದಾರರ ಜಾಗೃತಿಗೆ ಅನೇಕ ಚಟುವಟಿಕೆ ನಡೆಸಲಾಗಿತ್ತು. ರಾಜಕೀಯ ಪಕ್ಷಗಳು ಒಡ್ಡುವ ಆಸೆ ಆಮಿಷಗಳಿಗೆ ಬಲಿಯಾಗದೇ ಕಡ್ಡಾಯವಾಗಿ ಮತ ಚಲಾಯಿಸುವಂತೆ ಪ್ರಚಾರ ನಡೆಸಲಾಗಿತ್ತು. ಇದು ಮತದಾರರನ್ನು ಪ್ರಜ್ಞಾವಂತರನ್ನಾಗಿಸುವಲ್ಲಿ ಯಶಸ್ವಿಯಾಗಿದೆ. ಆದ್ದರಿಂದ ಈ ಸಲ ಮತದಾರರು ರಾಜಕೀಯ ಪಕ್ಷಗಳಿಗೆ ಬಾಟಲಿ ಕೇಳಿಲ್ಲ. ಹಣ ಪಡೆದು ತಾವೇ ಮದ್ಯ ಖರೀದಿಯನ್ನೂ ಮಾಡುವ ಗೋಜಿಗೆ ಹೋಗಿಲ್ಲ. ಇದರ ಪರಿಣಾಮವಾಗಿ ಬಾರ್, ವೈನ್ಶಾಪ್ಗಳು ಖಾಲಿ ಹೊಡೆಯುವಂತಾಗಿದೆ. ಅಧಿಕೃತ ಮದ್ಯ ಮಾರಾಟ ಮಳಿಗೆಗಳು ಚುನಾವಣೆ ವೇಳೆ ನೊಣ ಹೊಡೆಯುವಂತಾಯಿತು.
ಈ ಮಧ್ಯೆ ಕೆಲ ರಾಜಕೀಯ ಮುಖಂಡರು ಹಳ್ಳಿಗಳಲ್ಲಿ ಬಾಟಲಿ ಪೂರೈಕೆ ಮಾಡುವ ಕುರಿತು ಹೇಳಿಕೊಂಡು ತಿರುಗಾಡಿದರು. ಆದರೆ, ಕೊನೆವರೆಗೂ ಮದ್ಯ ಹಂಚಿಕೆ ಸಾಧ್ಯವಾಗಲಿಲ್ಲ. ಆದ್ದರಿಂದ ಲಾರಿಯಲ್ಲಿ ಮದ್ಯ ತುಂಬಿ ತರುತ್ತಿದ್ದಾಗ ಅಧಿಕಾರಿಗಳು ಹಿಡಿದರು ಎಂದು ಹೇಳಿಕೊಂಡು ತಿರುಗಾಡಿದ ಪ್ರಸಂಗಗಳೂ ನಡೆದಿವೆ. ಪಾನಪ್ರಿಯರ ಅನುಕಂಪ ಗಿಟ್ಟಿಸಿಕೊಳ್ಳಬಹುದು ಎಂಬುದು ಅವರ ಲೆಕ್ಕಾಚಾರ. ಆದರೆ, ಇದಕ್ಕೆಲ್ಲ ಮತದಾರ ಬಗ್ಗಿಲ್ಲ ಎಂಬುದು ಮದ್ಯ ಮಾರಾಟದ ಅಂಕಿಸಂಖ್ಯೆಗಳೇ ಹೇಳುತ್ತವೆ.