ಮಾಸಾಶನಕ್ಕಾಗಿ ಹಿರಿಜೀವಗಳ ಯಾತನೆ
ಪುಂಡಲೀಕ ಮುಧೋಳೆ
ನವಲಗುಂದ: ಮನೆ ಎದುರು ಕುಳಿತು ಪ್ರತಿ ತಿಂಗಳು ಅಂಚೆಯಣ್ಣನ ಹಾದಿ ಕಾಯ್ದು ಮಾಸಾಶನ ಪಡೆಯುತ್ತಿದ್ದ ಅಂಗವಿಕಲರು, ವೃದ್ಧರು ಮತ್ತು ವಿಧವೆಯರು ಈಗ ಸುಡುಬಿಸಿಲಿನಲ್ಲಿ ದೇವಸ್ಥಾನವೋ ಸಮುದಾಯ ಭವನದ ಎದುರು ಸರ್ಕಾರ ಕೊಡುವ ಮಾಸಾಶನಕ್ಕಾಗಿ ಕಾದು ಕುಳಿತುಕೊಳ್ಳುವಂತಾಗಿದೆ.
ಹೌದು, ಇಂತಹ ಪರಿಸ್ಥಿತಿ ನಿರ್ಮಿಸಿದ್ದು ಸರ್ಕಾರ. ಪ್ರತಿ ತಿಂಗಳು ಅಂಚೆ ಇಲಾಖೆ ಮುಖಾಂತರ ಬಟವಡೆಯಾಗುತ್ತಿದ್ದ ಮಾಸಾಶನವನ್ನು ಸರ್ಕಾರ ಈಗ ಫಿನೋ ಏಜೆನ್ಸಿ ಎಂಬ ಖಾಸಗಿ ಸಂಸ್ಥೆಗೆ ನೀಡಿದ್ದು, ಈ ಖಾಸಗಿ ಸಂಸ್ಥೆಯ ಅಧಿಕಾರಿಗಳು ಪ್ರತಿ ತಿಂಗಳು ಮಾಸಾಶನ ವಿತರಿಸುತ್ತಿಲ್ಲ. ಅದರ ಜತೆಗೆ ಇಂತಹ ಸ್ಥಳಕ್ಕೆ ಈ ದಿನದಂದು ಬಂದರೆ ಮಾಸಾಶನ ನೀಡುತ್ತೇವೆ ಎಂದು ಫಲಾನುಭವಿಗಳಿಗೆ ಸೂಚಿಸಿದ್ದಾರೆ.
ಖಾಸಗಿ ಸಂಸ್ಥೆಯ ದರ್ಬಾರ್ದಿಂದ ಕಂಗೆಟ್ಟು ಹೋಗಿರುವ ಮಾಸಾಶನ ಫಲಾನುಭವಿಗಳು ಫಿನೋ ಏಜೆನ್ಸಿ ಅಧಿಕಾರಿಗಳು ಹೇಳಿದ ಜಾಗಕ್ಕೆ ಮಾಸಾಶನ ಪಡೆಯುವುದಕ್ಕಾಗಿ ಊಟ, ತಿಂಡಿ ಬಿಟ್ಟು ಸುಡುಬಿಸಿಲಿನಲ್ಲಿ ಕಾಯುತ್ತ ಕುಳಿತುಕೊಳ್ಳುತ್ತಿದ್ದಾರೆ.
ಇಡೀ ನವಲಗುಂದ ತಾಲೂಕಿನಾದ್ಯಂತ ನಿರ್ಗತಿಕ ಫಲಾನುಭವಿಗಳು ಈ ತೊಂದರೆ ಅನುಭವಿಸುತ್ತಿದ್ದಾರೆ. 4- 6 ತಿಂಗಳವರೆಗಿನ ಮಾಸಾಶನ ವಿತರಿಸದೆ ತಮ್ಮಿಚ್ಛೆಯಂತೆ ನಡೆದುಕೊಳ್ಳುತ್ತಿರುವ ಫಿನೋ ಏಜೆನ್ಸಿ, ಒಂದು ದಿನ ಒಂದೊಂದು ವಾರ್ಡ್ಗಳಿಗೆ ಬಂದು ಮಾಸಾಶನ ವಿತರಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಅವರ ಮಾತು ನಂಬಿದ ವೃದ್ದರು ಬೆಳಗ್ಗೆಯಿಂದಲೇ ದೇವಸ್ಥಾನ, ಸಮುದಾಯ ಭವನಗಳ ಎದುರು ಊಟ-ತಿಂಡಿ ಬಿಟ್ಟು ಅವರು ಬರುವ ದಾರ್ನಿ ಕಾಯುವಿಕೆಯ ಯಾತನೆಗೆ ಬೇಸತ್ತು ಈ ಹಿರಿ ಜೀವಗಳು ಸರ್ಕಾರಕ್ಕೆ ಹಾಗೂ ಮಾಸಾಶನ ನೀಡುವ ಏಜೆನ್ಸಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಲಕ್ಷೀಬಾಯಿ ಬಡಿಗೇರ ಎಂಬ 85 ವರ್ಷದ ವೃದ್ಧ ಮಹಿಳೆಗೆ ನಡೆಯಲು ಆಗುವುದಿಲ್ಲ. ಹೀಗಾಗಿ ಫೀನೋ ಏಜೆನ್ಸಿ ಹೇಳಿದ ಸ್ಥಳಕ್ಕೆ ಹೋಗಿ ಮಾಸಾಶನ ಪಡೆಯಲಿಕ್ಕಾಗದೇ, ಔಷಧಿ, ಆಹಾರಕ್ಕೆ ತೊಂದರೆ ಅನುಭವಿಸುತ್ತಿದ್ದೇನೆ ಎಂದು ಕನ್ನಡಪ್ರಭದೊಂದಿಗೆ ತಮ್ಮ ನೋವು ತೋಡಿಕೊಂಡರು. ಇದೇ ರೀತಿ ತಾಲೂಕಿನಲ್ಲಿ ವಿವಿಧೆಡೆ ನೂರಾರು ವೃದ್ಧರು, ವಿಧವೆಯರು, ಅಂಗವಿಕಲರು ಮಾಸಾಶನ ಸಿಗದೆ ಸಂಕಷ್ಟದಲ್ಲಿದ್ದಾರೆ.
ಹಲವು ತಿಂಗಳುಗಳಿಂದ ಒಂದಿಲ್ಲೊಂದು ಸಮಸ್ಯೆ ಹೇಳುತ್ತ ಬಂದಿರುವ ಫಿನೋ ಏಜೆನ್ಸಿ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ನೋಡಿದ ನಂತರ ಈಗ ಮೊದಲು ಅಂಚೆ ಇಲಾಖೆ ಮುಖಾಂತರ ಇದ್ದ ವ್ಯವಸ್ಥೆ ಉತ್ತಮವಾಗಿತ್ತು ಎನ್ನಿಸುತ್ತಿದೆ. ಕೂಡಲೇ ಈ ಏಜೆನ್ಸಿ ವಿರುದ್ಧ ಕ್ರಮ ತೆಗೆದುಕೊಂಡು ಫಲಾನುಭವಿಗಳಿಗೆ ಮಾಸಾಶನ ವಿತರಿಸಬೇಕು ಎನ್ನುವುದು ಫಲಾನುಭವಿಗಳಿಗೆ ಯಾತನೆಯ ಬೇಡಿಕೆ. ಮಾಸಾಶನ ಬಾರದೇ ಪರದಾಡುತ್ತಿರುವವರು ಒಂದೆಡೆಯಾದರೆ, ಈಗಾಗಲೇ ನೂರಾರು ಫಲಾನುಭವಿಗಳು ಹಲವು ತಿಂಗಳ ಹಿಂದೆಯೇ ಮಾಸಾಶನ ಮಂಜೂರಾತಿ ಆದೇಶ ಪಡೆದು ಅಕೌಂಟ್ ಆರಂಭವಾಗದವರ ಸ್ಥಿತಿ ಇನ್ನೊಂದು ತರಹ ಇದೆ. ಭಾವಚಿತ್ರ ಹಾಗೂ ಅಕೌಂಟ್ ತೆರೆಯದ ಕಾರಣ ಅವರಿಗೆ ಮಾಸಾಶನ ಬರುತ್ತಿಲ್ಲ. ಇಂತಹ ಪ್ರಕರಣಗಳು ತಾಲೂಕಿನಾದ್ಯಂತ ಇದ್ದರೂ ತಾಲೂಕಾಡಳಿತ ಮಾತ್ರ ಯಾವುದೇ ಕ್ರಮ ಜರುಗಿಸದಿರುವುದು ಸೋಜಿಗದ ಸಂಗತಿ.