ಹಿರೇಮಠ ಹೈ ವಕೀಲರ ಸಂಘ ಅಧ್ಯಕ್ಷ
ಕನ್ನಡಪ್ರಭ ವಾರ್ತೆ, ಧಾರವಾಡ, ಏ. 24
ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ರಂಗೇರಿದ್ದ ಇಲ್ಲಿಯ ಹೈಕೋರ್ಟ್ ವಕೀಲರ ಸಂಘದ ಚುನಾವಣೆ ಮುಗಿದಿದ್ದು, ಹಿರಿಯ ನ್ಯಾಯವಾದಿ ಬಿ.ಡಿ. ಹಿರೇಮಠ ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
ಗುರುವಾರ ಸಂಘದ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 425 ಮತದಾರರಿದ್ದು, ಬಿ.ಡಿ. ಹಿರೇಮಠ (202) ಅವರು ಎದುರಾಳಿ ಮದನಮೋಹನ ಕುಣ್ಣೂರ (159) ಅವರಿಗಿಂತ 43 ಮತಗಳನ್ನು ಹೆಚ್ಚು ಪಡೆದು ಜಯ ಸಾಧಿಸಿದರು. ಉಪಾಧ್ಯಕ್ಷರಾಗಿ ಶಿವರಾಜ ಮುಧೋಳ (167), ಕಾರ್ಯದರ್ಶಿಯಾಗಿ ಹರೀಷ ಮೈಗೂರ (216), ಖಜಾಂಚಿಯಾಗಿ ಶ್ರೀಹರ್ಷ ನಿಲೋಪಂತ (179), ಜಂಟಿ ಕಾರ್ಯದರ್ಶಿಯಾಗಿ ಎಚ್.ಎನ್. ಗೂಳರೆಡ್ಡಿ ಹಾಗೂ ಮಹಿಳಾ ಪ್ರತಿನಿಧಿಯಾಗಿ ಅನುರಾಧಾ ಕುಲಕರ್ಣಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿ ಐದು ಸದಸ್ಯ ಸ್ಥಾನಕ್ಕೆ ಏಳು ಜನ ಚುನಾವಣಾ ಕಣದಲ್ಲಿದ್ದು, ಈ ಪೈಕಿ ಪಿ.ಜಿ. ಅಂದಾನಿಮಠ, ಶಿವರಾಜ ಬೆಳ್ಳಕ್ಕಿ, ಐ.ವೈ. ಪಾಟೀಲ, ಪಿ.ಜಿ. ನರಸಾಪುರ, ಆರ್.ಎ. ಗ್ರಾಮಪುರೋಹಿತ ಚುನಾಯಿತರಾದರು. ಪ್ರಪ್ರಥಮ ಬಾರಿಗೆ ಸಂಘದ ಚುನಾವಣೆಯಲ್ಲಿ ನೋಟಾ ವ್ಯವಸ್ಥೆ ಬಳಕೆ ಮಾಡಿದ್ದು, ಅಧ್ಯಕ್ಷ ಸ್ಥಾನಕ್ಕೆ ಮೂರು ಮತಗಳು ನೋಟಾ ಹಾಕಲಾಗಿದೆ. ಚುನಾವಣಾಧಿಕಾರಿಗಳಾದ ಎಸ್.ಎಸ್. ಕಾಯಕಮಠ ಹಾಗೂ ಮೃತ್ಯುಂಜಯ ಬಾಂಗಿ ಕಾರ್ಯ ನಿರ್ವಹಿಸಿದರು. ಚುನಾವಣೆ ಅನಂತರ ಪಟಾಕಿ ಹಾರಿಸಿ ವಕೀಲರು ಸಂಭ್ರಮಿಸಿದರು.
ಪ್ರಜ್ಞಾವಂತಿಕೆ ಮೆರೆದ ಮತದಾರ
ಚುನಾವಣೆ ವೇಳೆ ಮತದಾರರ ಆಮಿಷದ ವಸ್ತುಗಳಲ್ಲಿ ಮದ್ಯವೂ ಪ್ರಮುಖ. ಆದರೆ, ಈ ಬಾರಿ ಚುನಾವಣೆಯಲ್ಲಿ ಅಬಕಾರಿ ಇಲಾಖೆ ಹೆಚ್ಚಿನ ಮದ್ಯ ಮಾರಾಟವಿರಲಿ, ನಿಗದಿತ ಗುರಿ ತಲುಪಲು ಆಗಿಲ್ಲ. ಕರ್ನಾಟಕ ರಾಜ್ಯ ಪಾನೀಯ ನಿಗಮದ 80ಕ್ಕೂ ಅಧಿಕ ಡಿಪೋಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ, ಅಕ್ರಮ ಎತ್ತುವಳಿ ಬಗ್ಗೆ ನಿಗಾ ವಹಿಸಿದ ಹಿನ್ನೆಲೆಯಲ್ಲಿ ಪಾನಪ್ರಿಯರಿಗಂತೂ ಈ ಚುನಾವಣೆ ನಿರಾಸೆ ಮೂಡಿಸಿತ್ತು.
ಬಳ್ಳಾರಿಯಲ್ಲಿ ಗಣಿಗಾರಿಕೆ ಬೂಮ್ ಇದ್ದಾಗ, ಚುನಾವಣೆ ವೇಳೆ ಇಲ್ಲಿ ಮದ್ಯದ ಕಾರುಬಾರು ಜೋರಾಗಿತ್ತು. ರಾಜ್ಯದ ಎಲ್ಲ ಕಡೆಗಳಿಗಿಂತ ಇಲ್ಲಿ ಹೆಚ್ಚು ಮದ್ಯ ಮಾರಾಟ ಆಗುತ್ತಿತ್ತು. ಆದರೆ, ಈ ಬಾರಿ ಗಣನೀಯ ಪ್ರಮಾಣದಲ್ಲಿ ಮದ್ಯ ಮಾರಾಟ ಕುಸಿದಿದ್ದು, ಪ್ರಜ್ಞಾವಂತರಲ್ಲಿ ಸಂತಸ ಮೂಡಿಸಿದೆ. ಬಳ್ಳಾರಿ ಮತ್ತು ಹೊಸಪೇಟೆಯಲ್ಲಿರುವ ಪಾನೀಯ ನಿಗಮದ ಡಿಪೋಗಳಲ್ಲಿ 16 ಸಿಸಿ ಕ್ಯಾಮೆರಾ ಅಳವಡಿಸಿ, ಹದ್ದಿನ ಕಣ್ಣಿಟ್ಟಿದ್ದು, ಅಕ್ರಮಗಳ ಮೇಲೆ ಕಡಿವಾಣ ಹಾಕಲು ಕಾರಣವಾಯಿತೆನ್ನಬೇಕು.
ರಾಜ್ಯದೆಲ್ಲೆಡೆ ಸಿಸಿ ಕ್ಯಾಮೆರಾ: ಕರ್ನಾಟಕ ರಾಜ್ಯ ಪಾನೀಯ ನಿಗಮದ 80ಕ್ಕೂ ಹೆಚ್ಚು ಐಎಂಎಲ್ ಹಾಗೂ ಸ್ಪಿರಿಟ್ ಡಿಪೋಗಳಲ್ಲಿ ಕೋಟ್ಯಂತರ ರುಪಾಯಿ ವ್ಯಯಿಸಿ, ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಈ ಮೂಲಕ ಪಾನೀಯ ನಿಗಮದಲ್ಲಿ ಮದ್ಯದ ಎತ್ತುವಳಿ ಮೇಲೆ ನಿಗಾ ವಹಿಸುವ ಜತೆಗೆ, ಚುನಾವಣೆ ಸಂದರ್ಭ ಎತ್ತುವಳಿಗಳ ಪ್ರಮಾಣ ಹಾಗೂ ಅಕ್ರಮ ಎತ್ತುವಳಿ ಮೇಲೆ ಕಣ್ಣಿಡಲು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಮದ್ಯದ ಆಮಿಷ ಕಡಿಮೆ ಎನ್ನುತ್ತಾರೆ ಅಧಿಕಾರಿಗಳು.
ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಗುರಿ ತಲುಪಲು ಅಬಕಾರಿ ಇಲಾಖೆಗೆ ಸಾಧ್ಯವೇ ಆಗಿಲ್ಲ ಎಂಬುದು ಆಶಾದಾಯಕ ಬೆಳವಣಿಗೆ. ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ, ಈ ಬಾರಿ ಮದ್ಯ ಮಾರಾಟಕ್ಕೆ ಇಲಾಖೆಯೇ ತಿಣುಕಾಡಿದೆ. ಅಬಕಾರಿ ಅಧಿಕಾರಿಗಳ ದಾಳಿ ಮದ್ಯ ಮಾರಾಟಕ್ಕೆ ಅಡ್ಡಿಯಾಗಿತ್ತು. ಮದ್ಯ ಮಾರಾಟ ಚುನಾವಣೆಯಲ್ಲಿ ಹೆಚ್ಚೆಂಬ ಮಾತು, ಬಳ್ಳಾರಿ ಗಣಿ ನಾಡಿನಲ್ಲಿ ಹುಸಿಗೊಂಡಿದೆ.
2014ರ ಫೆಬ್ರವರಿಯಲ್ಲಿ 2,08,431 ಲೀಟರ್ ಮದ್ಯ ಮಾರಾಟದ ಗುರಿ ಇದ್ದರೆ, 1,67,768 ಮದ್ಯ ಮರಾಟವಾಗಿ ಶೇ. 80ರಷ್ಟು ಸಾಧನೆಯಾಗಿದೆ. 2013ರ ಫೆಬ್ರವರಿ ತಿಂಗಳಲ್ಲಿ ಶೇ. 104ರಷ್ಟು ಸಾಧನೆಯಾಗಿತ್ತು. 2014 ಮಾರ್ಚ್ನಲ್ಲಿ 2,30,715 ಲೀಟರ್ ಮಾರಾಟ ಗುರಿ ಇದ್ದರೆ, 1,68,503 ಲೀಟರ್ ಮಾರಾಟವಾಗಿ, ಶೇ. 73ರಷ್ಟು ಗುರಿ ತಲುಪಿತ್ತು. 2013ರ ಮಾರ್ಚ್ ತಿಂಗಳಲ್ಲಿ ಶೇ. 79ರಷ್ಟು ಗುರಿ ಸಾಧನೆಯಾಗಿದೆ. 2014 ಏಪ್ರಿಲ್ (ಏ. 22ರ ವರೆಗೆ) ತಿಂಗಳಲ್ಲಿ 1,24,882 ಲೀಟರ್ ಗುರಿಯಲ್ಲಿ 1,10,143 ಲೀಟರ್ ಮಾರಾಟವಾಗಿದೆ. ಶೇ. 88 ಸಾಧನೆ. 2013ರ ಏಪ್ರಿಲ್ ತಿಂಗಳಲ್ಲಿ ಶೇ. 96ರಷ್ಟು ಸಾಧನೆಯಾಗಿತ್ತು. ಚುನಾವಣೆ ಸಂದರ್ಭದಲ್ಲೇ ಮದ್ಯ ಮಾರಾಟ ಕುಸಿದಿದ್ದನ್ನು ಈ ಅಂಕಿಅಂಶ ಸಾಬೀತು ಮಾಡುತ್ತದೆ.
ಚುನಾವಣೆ ಹತ್ತಿರ ಬಂದಂತೆಲ್ಲ ರಾಜಕಾರಣಿಗಳು ದುಡ್ಡಿನ ಹೊಳೆ ಹರಿಸುತ್ತಾರೆ. ಆಮಿಷದ ವಸ್ತುಗಳಲ್ಲಿ ಮೊದಲ ಆದ್ಯತೆ ಮದ್ಯಕ್ಕೆ. ಕಿಕ್ ಏರಿಸುವ ಆಮಿಷ ಈ ಚುನಾವಣೆಯಲ್ಲಿ ವರ್ಕ್ಔಟ್ ಆಗಿಲ್ಲ ಎಂಬುದು ಫಲಿತಾಂಶ ನಿಖರವಾಗಿ ಬರುತ್ತದೆ ಎಂಬ ನಿರೀಕ್ಷೆ ಮೂಡಿಸಿದೆ.
ಸಿಸಿ ಕ್ಯಾಮೆರಾ ಎಫೆಕ್ಟ್...
ಪಾನೀಯ ನಿಗಮದಲ್ಲಿ ಲಿಕ್ಕರ್ ಎತ್ತುವಳಿ ಬಗ್ಗೆ ತೀವ್ರ ನಿಗಾ ವಹಿಸಲಾಗಿತ್ತು. ಇನ್ನು ಅಕ್ರಮವಾಗಿ ಎತ್ತುವಳಿ ಬಗ್ಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿರುವುದರಿಂದ ಪ್ರಸಕ್ತ ಚುನಾವಣೆಯಲ್ಲಿ ಮದ್ಯ ಮಾರಾಟ ಹೆಚ್ಚಾಗಿಲ್ಲ.
- ಮಹಮ್ಮದ್ ಅಬೀಬ್ ಹುಸೇನ್,
ಅಬಕಾರಿ ಇಲಾಖೆ ಉಪ ಆಯುಕ್ತ, ಬಳ್ಳಾರಿ