ಒಡಲು ಭರ್ತಿಯಾದರೆ ಕುಡಿವ ನೀರು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 25
ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಮಲಪ್ರಭಾ ಅಣೆಕಟ್ಟೆಯ ನೀರು ಸಂಗ್ರಹ ಪ್ರಮಾಣವನ್ನು 42 ಟಿಎಂಸಿಗೆ ತಂದರೆ ಮಾತ್ರ ಭವಿಷ್ಯದ ದಿನಗಳಲ್ಲಿ ನದಿ ತೀರದ ಗ್ರಾಮಗಳ ಕುಡಿಯುವ ನೀರು ಮತ್ತು ಕೃಷಿಗೆ ನೀರಾವರಿ ಒದಗಿಸಲು ಸಾಧ್ಯ.
ಈಗಾಗಲೇ ಮಲಪ್ರಭಾ ನದಿಯಿಂದ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಸವದತ್ತಿ ತಾಲೂಕಿನ ಗ್ರಾಮಗಳಿಗೆ ಒಂದು ಅಣೆಕಟ್ಟು ಬಳಿ ಇಲ್ಲವೇ ಜಾಕವೆಲ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಸಾಮಾನ್ಯವಾಗಿ ಸಂಗ್ರಹವಾಗುತ್ತಿರುವ ಅಂದಾಜು 37 ಟಿಎಂಸಿ ನೀರಿನಲ್ಲಿ ಐದು ಟಿಎಂಸಿಗಿಂತ ಹೆಚ್ಚು ನೀರು ಕುಡಿಯುವ ನೀರು ಪೂರೈಕೆಗೆ ವೆಚ್ಚವಾಗುತ್ತಿದೆ. ಇನ್ನುಳಿದ 25 ಟಿಎಂಸಿಗಳಲ್ಲಿ ಶೇ. 50ರಷ್ಟು ನೀರು ನೀರಾವರಿಗೆ ಬಳಕೆಯಾದರೆ ಇನ್ನುಳಿದ ನೀರನ್ನು ಪರಿಸರ ಸಂರಕ್ಷಣೆ ಮತ್ತು ಜಲಚರಗಳ ಸಂರಕ್ಷಣೆಗೆ ಎಂದು ಮೀಸಲು ಇಡಬೇಕಾಗುತ್ತದೆ. ಸಂರಕ್ಷಿತ ನೀರು ಕೂಡ ಬಾಷ್ಪಿಕರಣ ಇತ್ಯಾದಿ ನೈಸರ್ಗಿಕ ಪ್ರಕ್ರಿಯೆಗಳಿಗೆ ಒಳಗಾಗಿ ಮೇ ಹೊತ್ತಿನಲ್ಲಿ ಅತ್ಯಂತ ಕಡಿಮೆ ಪ್ರಮಾಣ ನೀರು ಅಣೆಕಟ್ಟೆಯಲ್ಲಿ ಲಭ್ಯವಾಗುತ್ತಿದೆ.
ಅಣೆಕಟ್ಟೆಯ ಕೆಳಭಾಗದ ಪ್ರದೇಶವಾದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕು ಬರ ಪೀಡಿತ ಪ್ರದೇಶಗಳಲ್ಲಿ ಒಂದಾಗಿದ್ದು, ಇಲ್ಲಿಯೂ ಕೂಡ ಬೇಸಿಗೆ ಹೊತ್ತಿಗೆ ನದಿಯಲ್ಲಿ ನೀರು ದೊರೆಯುವುದು ಅಪರೂಪ. ಒಂದು ವೇಳೆ ಮಲಪ್ರಭೆ ಅಣೆಕಟ್ಟಿನಲ್ಲಿ ನಿಗದಿತ ಪ್ರಮಾಣದಲ್ಲಿ ನೀರು ಸಂಗ್ರಹವಾದರೆ ಬೇಸಿಗೆಯಲ್ಲಿ ಕೆಳಭಾಗದ ಪ್ರದೇಶಕ್ಕೂ ನೀರು ಹರಿಸಿ ಆ ಪ್ರದೇಶದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯ. ಮಲಪ್ರಭಾ ನದಿ ತೀರದ ಗ್ರಾಮಗಳಲ್ಲಿನ ಹೆಚ್ಚಿರುವ ನೀರಿನ ಬಳಕೆಯಿಂದಾಗಿ ವಾರ್ಷಿಕ 3000 ಮಿ.ಮೀ. ಮಳೆ ಬೀಳುವ ಪ್ರದೇಶದಲ್ಲಿ 11,549 ಚದರ ಕಿ.ಮೀ. ಜಲಾನಯನ ಪ್ರದೇಶ ಮತ್ತು ಹಿರೇಹಳ್ಳ ಮತ್ತು ಬೆಣ್ಣಿ ಹಳ್ಳಗಳನ್ನು ನೀರಿನ ಮೂಲವಾಗಿ ಹೊಂದಿದ್ದರೂ ಅಣೆಕಟ್ಟಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿಲ್ಲ.
ಜಲಾನಯನ ವಿಸ್ತಾರವಾಗಬೇಕು: ನದಿ ನೀರಿನ ಬಳಕೆಯ ಹೆಚ್ಚುತ್ತಿರುವುದು ಮತ್ತು ಮಳೆ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಸಿತವಾಗಿರುವ ನದಿ ನೀರಿನ ಹರಿವಿಗೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕಾದರೆ ಒಂದು ಜಲಾನಯನ ಪ್ರದೇಶದ ವಿಸ್ತರಣೆಯಾಗಬೇಕು ಇಲ್ಲವೇ ಹೊಸತಾಗಿ ನೀರಿನ ಮೂಲಗಳನ್ನು ನದಿಗೆ ಸೇರಿಸುವ ಕೆಲಸ ಆಗಬೇಕಿದೆ. ಒಂದು ವೇಳೆ ಕಳಸಾ ಬಂಡೂರಿ ನಾಲಾದಿಂದ ಮಲಪ್ರಭಾ ನದಿಗೆ 7.56 ಟಿಎಂಸಿ ನೀರನ್ನು ಪಡೆಯುವಲ್ಲಿ ಸರ್ಕಾರ ಯಶಸ್ವಿಯಾದರೆ ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ ಮತ್ತು ಬಾಗಲಕೋಟೆ ಜಿಲ್ಲೆಯ 132ಕ್ಕೂ ಹೆಚ್ಚು ಗ್ರಾಮಗಳಿಗೆ ಶುದ್ಧ ಕುಡಿವ ನೀರು ಪೂರೈಸುವುದರ ಜೊತೆಗೆ ಹೆಚ್ಚುವರಿಯಾಗಿ ಉಳಿಯುವ ನೀರನ್ನು ನರಗುಂದ ಮತ್ತು ರೋಣ ತಾಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಉಪಯೋಗಿಸಬಹುದು.
ಹೆಚ್ಚಾದರೂ ಕಷ್ಟ: ಈಗಾಗಲೇ ನ್ಯಾಯಾಧೀಕರಣದಲ್ಲಿ ವಿಚಾರಣೆ ನಡೆಯುತ್ತಿರುವ ಮಹಾದಾಯಿ ಜಲವಿವಾದ ಪರಿಹಾರಗೊಂಡು ಕರ್ನಾಟಕ ತನ್ನ ಪಾಲಿನ 40 ಟಿಎಂಸಿ ನೀರು ಪಡೆದರೂ ಕೂಡ ಸದ್ಯಕ್ಕೆ ಅಷ್ಟೂ ನೀರನ್ನು ಬಳಸಿಕೊಳ್ಳುವ ಸಾಮರ್ಥ್ಯ ರಾಜ್ಯ ಸರ್ಕಾರಕ್ಕೆ ಇಲ್ಲ. ಕಳಸಾ ಮತ್ತು ಬಂಡೂರಿ ನಾಲಾದಿಂದ ಬರುವ 7.56ಟಿಎಂಸಿ ನೀರಿನಿಂದಲೇ ಮಲಪ್ರಭೆಯ ಒಡಲು ಭರ್ತಿಯಾಗುತ್ತದೆ.
ಮಲಪ್ರಭಾ ನದಿ ತೀರದ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಬೇಕಾದರೆ ಸರ್ಕಾರ ಕಳಸಾ ಬಂಡೂರಿ ನಾಲೆ ನೀರನ್ನು ಮಲಪ್ರಭಾ ನದಿಗೆ ಜೋಡಿಸುವ ಕೆಲಸಕ್ಕೆ ಆದ್ಯತೆ ನೀಡಲೇಬೇಕು. ಇಲ್ಲದಿದ್ದರೆ ಮುಂಬರುವ ವರ್ಷಗಳಲ್ಲಿ ಬೆಳಗಾವಿ, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಯ ನದಿ ತೀರದ ಗ್ರಾಮಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಬರ ಎದುರಿಸಬೇಕಾಗುತ್ತದೆ.
- ಸತೀಶ ಪಾಗಾದ