30ರಂದು ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ
ಹುಬ್ಬಳ್ಳಿ: ಹುಬ್ಬಳ್ಳಿಯ ಪಂಚಾಕ್ಷರಿ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಭಗವಾನ್ ಮುನಿಸುವ್ರತ ತೀರ್ಥಂಕರರ ಪಂಚಕಲ್ಯಾಣ ಪೂಜಾ ಹಾಗೂ ನವಗ್ರಹ ತೀರ್ಥಂಕರ ಪ್ರತಿಷ್ಠಾಪನೆ ಕಾರ್ಯಕ್ರಮ ಏ. 30ರಿಂದ ಮೇ 4ರವರೆಗೆ ನಡೆಯಲಿವೆ ಎಂದು ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎ. ಪಾಟೀಲ ತಿಳಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಕಲ್ಯಾಣ ಪೂಜಾ ಮಹೋತ್ಸವದ ಸಾನ್ನಿಧ್ಯವನ್ನು ಪುಣ್ಯಸಾಗರ ಮುನಿ ಮಹಾರಾಜ ವಹಿಸಲಿದ್ದಾರೆ. ಸೋಂದಾ ಜೈನಮಠದ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೋಮ ಹವನ ಕಾರ್ಯಕ್ರಮಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಏ. 29ರಂದು ಮಹೋತ್ಸವದ ಸಾನ್ನಿಧ್ಯ ವಹಿಸಲಿರುವ ಪುಣ್ಯ ಸಾಗರ ಮುನಿಗಳ ಪುರಪ್ರವೇಶ ನಡೆಯಲಿದ್ದು, ಅಂದು ನವನಗರದ ಕ್ಯಾನ್ಸರ್ ಆಸ್ಪತ್ರೆಯಿಂದ ಸ್ವಾಮೀಜಿಗಳ ಭವ್ಯ ಮೆರವಣಿಗೆ ನಡೆಯಲಿದೆ.
ನವಲಗುಂದ: ವಾರ್ಷಿಕ ಸ್ನೇಹ ಸಮ್ಮೇಳನ
ನವಲಗುಂದ: ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿ ಜೀವನದಲ್ಲಿ ಪರಿಶ್ರಮದಿಂದ ಕೃಷಿಗೈಯಬೇಕೆಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎನ್. ಶಾಂತನಾಯ್ಕರ ಹೇಳಿದರು. ಇಲ್ಲಿಯ ಶಂಕರ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಬಿ. ಯಳ್ಳೂರ, ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಶ್ರದ್ಧೆ, ಶಿಸ್ತು ಅಳವಡಿಸಿಕೊಂಡು ಉನ್ನತ ಹುದ್ದೆ ಅಲಂಕರಿಸಿ ಸಮಾಜಕ್ಕೆ ಕೊಡುಗೆ ನೀಡಬೇಕೆಂದು ಹೇಳಿದರು. ಅಂತಿಮ ವರ್ಷದ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಗುಮ್ಮಗೋಳ, ಸದಾನಂದ ಪಟ್ಟಣಶೆಟ್ಟಿ, ಮಂಜುನಾಥ ಕಲ್ಮಡ ಅನುಭವ ಹಂಚಿಕೊಂಡರು. ಡಿ.ಸಿ. ಪಾವಟೆ ಅತ್ಯುತ್ತಮ ಸ್ವಯಂಸೇವಕಿ ಪ್ರಶಸ್ತಿ ವಿಜೇತೆ ತೈಸಿನ್ಬಾನು ನದಾಫ್ ಹಾಗೂ ಕವಿವಿ ಕಬಡ್ಡಿ ತಂಡದಲ್ಲಿ ಸ್ಥಾನ ಪಡೆದ ಭೀಮಶಿ ಹೊರಕೇರಿ ಅವರನ್ನು ಸನ್ಮಾನಿಸಲಾಯಿತು.