ಹದಿನಾಲ್ಕೂ ಹಳ್ಳಿಗೆ ಹರಿದಿಲ್ಲ ಮಲಪ್ರಭೆ
ಹೊನ್ನಪ್ಪ ಲಕ್ಕಮ್ಮನವರ
ಕನ್ನಡಪ್ರಭ ವಾರ್ತೆ, ಧಾರವಾಡ, ಏ.26
ಧಾರವಾಡದ 14 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನಿಯಮದ ಪ್ರಕಾರ ಕಳೆದ 2014ರ ಜ.8ರಿಂದಲೇ ಗ್ರಾಮಗಳಿಗೆ ಮಲಪ್ರಭಾ ನದಿಯ ನೀರು ಪೂರೈಕೆಯಾಗಬೇಕಿತ್ತು. ಆದರೆ, ಮೂರು ತಿಂಗಳು ಕಳೆದರೂ ಸಹ ಇನ್ನು ಗ್ರಾಮಗಳ ಮನೆಗೆ ನೀರು ಬಂದಿಲ್ಲ.
ಈ ಯೋಜನೆಯನ್ನು ಕೈಗೆತ್ತಿಕೊಂಡ ಕೌಶಿಕ್ ಕನ್ಸಲ್ಟಂಟ್ ಅಧಿಕಾರಿಗಳು ಹಾಗೂ ಜಲನಿರ್ಮೂಲನ ಅಧಿಕಾರಿಗಳ ಲೆಕ್ಕದಲ್ಲಿ ಯೋಜನೆ ಅನುಷ್ಠಾನ ಪೂರ್ಣಗೊಂಡಿದೆ. ಅವರ ಪ್ರಕಾರ ಪ್ರತಿದಿನ 14 ಹಳ್ಳಿಗಳಿಗೆ 58.81 ಲಕ್ಷ ಲೀಟರ್ ಕುಡಿಯುವ ನೀರನ್ನು ಪೂರೈಕೆಯಾಗುತ್ತಿದೆ ಎಂದು ಮಾಹಿತಿ ನೀಡುತ್ತಿದ್ದಾರೆ. ಆದರೆ ವಾಸ್ತವಿಕವಾಗಿ ಯಾವುದೇ ಗ್ರಾಮಕ್ಕೂ ಕುಡಿವ ನೀರು ಪೂರೈಕೆಯಾಗುತ್ತಿಲ್ಲ ಎಂಬ ಸತ್ಯ ಯಾರಿಗೂ ಗೊತ್ತಿಲ್ಲ.
14 ಗ್ರಾಮಗಳ ಪೈಕಿ ಹೆಬ್ಬಳ್ಳಿ ಗ್ರಾಮಕ್ಕೆ ನಿತ್ಯ 6.20 ಲಕ್ಷ ಲೀಟರ್ ನೀರು ಪೂರೈಕೆಯಾಗಬೇಕು. ಆದರೆ, ಇಲ್ಲಿ 2 ಲಕ್ಷ ಲೀಟರ್ ಮಾತ್ರ ಪೂರೈಕೆಯಾಗುತ್ತಿದೆ. ಯೋಜನೆ ಕೈಗೆತ್ತಿಕೊಂಡ ಕಂಪನಿ ಸರಿಯಾದ ರೀತಿಯಲ್ಲಿ ಪೈಪಲೈನ್ ಜೋಡಣೆ ಮಾಡದ ಕಾರಣ ಮಲಪ್ರಭಾ ನದಿಯಿಂದ ನೀರು ಸಂಗ್ರಹಿಸುವ ಟ್ಯಾಂಕಿಗೆ ಕಡಿಮೆ ಪ್ರಮಾಣದಲ್ಲಿ ನೀರು ಸರಬರಾಜುಗುತ್ತಿದೆ. ಟ್ಯಾಂಕಿನಿಂದ ಗ್ರಾಮಗಳ ಮನೆ ಮನೆಗೂ ಸಹ ಸರಿಯಾದ ಪೈಪಲೈನ್ ಇಲ್ಲದ್ದರಿಂದ ನೀರು ಪೂರೈಕೆಯಾಗುತ್ತಿಲ್ಲ.
50 ಸಾವಿರ ಲೀಟರ್ನ ಸಾಮರ್ಥ್ಯದ ಓವರ್ಹೆಡ್ ಟ್ಯಾಂಕ್ ಭರ್ತಿಯಾಗಲು 24 ಗಂಟೆಗಳು ಬೇಕು. ಈ ಹಳ್ಳಿಗಳಲ್ಲಿರುವ ಹಳೇ ಪೈಪ್ಲೈನ್ ಸರಿಯಾಗಿಲ್ಲ. ಆದರೆ ಈ ಕಂಪನಿಯವರು ಅವುಗಳು ಸರಿಯಾಗಿವೆ ಎಂದು ಹಳೇ ಪೈಪ್ಲೈನ್ಗೆ ಸಂಪರ್ಕ ಕಲ್ಪಿಸಿರುವ ಕಾರಣ ಗ್ರಾಮಸ್ಥರಿಗೆ ಕುಡಿವ ನೀರು ಪೂರೈಕೆಯಾಗುತ್ತಿಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ ಮೂರು ತಿಂಗಳಿಂದ ನೀರು ಬರುತ್ತಿದೆ. ಆಯಾ ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಅಲ್ಲಿನ ಗ್ರಾಪಂನ ಸಿಬ್ಬಂದಿ ನೋಡಿಕೊಳ್ಳಬೇಕೆಂದು ಹೇಳುತ್ತಾರೆ ಎನ್ನುತ್ತಾರೆ ಎಂದು ಹೆಬ್ಬಳ್ಳಿಯ ಸುರೇಶ ಬನ್ನಿಗಿಡದ ಬೇಸರ ವ್ಯಕ್ತಪಡಿಸುತ್ತಾರೆ. ಈಗ 14 ಹಳ್ಳಿಗಳಲ್ಲಿ ಶೇ.20ರಷ್ಟು ಜನರಿಗೆ ಮಾತ್ರ ಬಹುಗ್ರಾಮ ಕುಡಿವ ನೀರು ತಲುಪಿದೆ. ಅಮ್ಮಿನಭಾವಿ, ಪುಡಕಲಕಟ್ಟಿ ಸಂಗ್ರಹಾಗಾರದಿಂದ ಇನ್ನುಳಿದ ಗ್ರಾಮಗಳ ಸಂಗ್ರಹಾಗಾರಗಳಿಗೆ ಸಂಪರ್ಕ ಕಲ್ಪಿಸುವ ಪೈಪ್ಲೈನ್ ಸರಿಯಾಗಿ ಮಾಡದ ಕಾರಣ ಈ ಸಮಸ್ಯೆ ಉದ್ಭವಿಸಿದೆ. ಈ ಯೋಜನಾ ವ್ಯಾಪ್ತಿಯ ಗ್ರಾಪಂಗಳು ಜನವರಿಯಿಂದ ಗ್ರಾಮಸ್ಥರಿಂದ ನೀರಿನ ಕರ ಸಂಗ್ರಹಿಸಿತ್ತು, ಸಂಗ್ರಹಿಸಿದ ಮೊತ್ತವನ್ನು ಜಲಮಂಡಳಿಗೆ ಪಾವತಿಸಲೇಬೇಕು. ಆದರೆ ಜನತೆಗೆ ನೀರು ಬಾರದ್ದರಿಂದ ನೀರಿನ ಕರ ಪಾವತಿಸುತ್ತಿಲ್ಲ.
ನೇಣು ಬಿಗಿದು ವಿದ್ಯಾರ್ಥಿ ಆತ್ಮಹತ್ಯೆ
ಹುಬ್ಬಳ್ಳಿ: ಅಂತಿಮ ವರ್ಷದ ಡಿಪ್ಲೋಮಾ ಮೂರು ವಿಷಯದಲ್ಲಿ ಅನುತ್ತೀರ್ಣನಾಗಿದ್ದರಿಂದ ಮಾನಸಿಕವಾಗಿ ಬೇಸರಗೊಂಡ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ಕೇಶ್ವಾಪುರದ ಮಾರುತಿ ಗುಡಿ ಹತ್ತಿರದ ನಿವಾಸಿ ಆಕಾಶ ರಮೇಶ ತೆಲಗೌಡರ ಎಂಬ ವಿದ್ಯಾರ್ಥಿಯು ಗೋಪನಕೊಪ್ಪದ ಸ್ವಾಗತ ಕಾಲನಿ ಬಳಿ ಹೊಸದಾಗಿ ಕಟ್ಟಿಸುತ್ತಿರುವ ಮನೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪಲ್ಟಿ: ಓರ್ವ ಸಾವು
ನವಲಗುಂದ: ಎತ್ತುಗಳನ್ನು ಹೇರಿಕೊಂಡು ಗದಗನಿಂದ ಚಿಕ್ಕನರಗುಂದಕ್ಕೆ ಹೋಗುತ್ತಿದ್ದ ಸರಕು ಸಾಮಗ್ರಿ ವಾಹನ ಅಮರಗೋಳ ಕ್ರಾಸ್ ಬಳಿ ಟೈರ್ ಸ್ಫೋಟದಿಂದಾಗಿ ಪಲ್ಟಿಯಾಗಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಟೈರ್ ಸ್ಫೋಟ ಶಬ್ದಕ್ಕೆ ಎತ್ತುಗಳು ಬೆದರಿದ್ದರಿಂದ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದ ಮಾರುತಿ ಯಲ್ಲಪ್ಪ ಕಲಹಾಳ (28) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಬಸವರಾಜ ಹಂಚಿನಾಳ (32) ಹಾಗೂ ಸೋಮಪ್ಪ ಪವಡೆಪ್ಪನವರ (50) ಗಾಯಗಳಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಡಿಲಿಗೆ ಬಾಲಕ ಬಲಿ
ನವಲಗುಂದ: ಹೊಲದಲ್ಲಿ ಕುರಿ ಕಾಯುತ್ತಿದ್ದ ಬಾಲಕನಿಗೆ ಸಿಡಿಲು ಬಡಿದ ಪರಿಣಾಮ ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ಸಂಭವಿಸಿದೆ. ಇಲ್ಲಿಯ ಬಸವೇಶ್ವರ ನಗರದ ನಿವಾಸಿ ಶ್ರೀಕಾಂತ ಶೇಖಪ್ಪಾ ಲಮಾಣಿ (15) ಎಂಬ ಬಾಲಕ ಬೆಟದೂರ ಎಂಬುವರ ಹೊಲದಲ್ಲಿ ಕುರಿ ಮೇಯಿಸುತ್ತಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.