ಮಳೆಯಬ್ಬರಕ್ಕೆ ಹಾರಿದ ಸೂರು
ಧಾರವಾಡ: ಸಾಮಾನ್ಯವಾಗಿ ಮಳೆ ಎಲ್ಲರಿಗೂ ಖುಷಿ ಕೊಡುವ ಅತಿಥಿ. ಅದರಲ್ಲೂ ರೈತಾಪಿ ವರ್ಗಕ್ಕಂತೂ ಮಳೆಯಿಂದ ಎಲ್ಲಿಲ್ಲದ ಹುಮ್ಮಸ್ಸು. ಆದರೆ, ಧಾರವಾಡ ತಾಲೂಕಿನ ಕರಡಿಗುಡ್ಡದಲ್ಲಿ ಶನಿವಾರ ರಾತ್ರಿ ಭಾರಿ ಗಾಳಿ ಸಮೇತ ಸುರಿದ ಮಳೆಗೆ ಬಹಳಷ್ಟು ಮನೆಗಳ ಸೂರು ಕಿತ್ತು ಹೋದವು.
ಹಾರಿ ಹೋದ ಸೂರು, ನುಚ್ಚುನೂರಾದ ಹೆಂಚು, ಸಿಮೆಂಟ್ ತಗಡುಗಳು ಹಾಗೂ ಅವುಗಳನ್ನು ನೋಡುತ್ತಾ ನಿಂತಿರುವ ಗ್ರಾಮಸ್ಥರು. ಕರಡಿಗುಡ್ಡದಲ್ಲಿ ಮಳೆ ಬಂದಾಗ ಜನತೆ ಸಂತಸದಿಂದಲೇ ಬರ ಮಾಡಿಕೊಂಡರು. ಆದರೆ, ಮಳೆಗಿಂತ ಮುಂಚೆ ಸುಮಾರು ಎರಡು ಗಂಟೆ ಬೀಸಿದ ಗಾಳಿ ಗ್ರಾಮದ ಹತ್ತಾರು ಮನೆಗಳ ಸೂರನ್ನೇ ಎತ್ತಿಕೊಂಡು ಹೋಗಿದೆ. ಕೆಲವು ಮನೆಗಳ ಹೆಂಚುಗಳು ಕಿಲೋಮೀಟರ್ ದೂರದಲ್ಲಿ ಬಿದ್ದಿವೆ ಎನ್ನುತ್ತಾರೆ ಗ್ರಾಮಸ್ಥರು. ಅನೇಕ ದನ-ಕರುಗಳ ಶೆಡ್ಗಳು ಸಹ ಗಾಳಿಯ ಹೊಡೆತಕ್ಕೆ ನಲುಗಿವೆ. ಅದೃಷ್ಟವಶಾತ್ ಯಾವದೇ ಪ್ರಾಣಿ ಹಾನಿ ಆಗಿಲ್ಲ. ಗ್ರಾಮದ ಶಿವಪ್ಪ ಪೂಜಾರ ಎಂಬುವರ ಮನೆ ಗೃಹ ಪ್ರವೇಶ ಮುಂದಿನ ವಾರವಷ್ಟೇ ನಿಗದಿಯಾಗಿತ್ತು. ಆದರೆ ಮನೆಯ ಮೇಲಿನ ಸುಮಾರು 30 ಶೀಟ್ ಹಾರಿ ಹೋಗಿದೆ. ಬೇಸಿಗೆಯಲ್ಲಿ ಜಾನುವಾರುಗಳಿಗೆ ಹೊಲಗಳಲ್ಲಿ ಸಂಗ್ರಹಿಸಿಟ್ಟಿದ್ದ ಮೇವು ಸಹಾ ಗಾಳಿ ಹೊಡೆತಕ್ಕೆ ಹಾರಿ ಹೋಗಿದ್ದು, ಪ್ರತಿಯೊಬ್ಬ ಕೃಷಿಕರು ಸಾವಿರಾರು ರು.ಗಳ ಮೇವು ಕಳೆದುಕೊಂಡು ಕಂಗಾಲಾಗಿದ್ದಾರೆ.