ಕಲ್ಮೇಶ್ವರ ಮಹೋತ್ಸವ
ಧಾರವಾಡ: ನವಲಗುಂದ ತಾಲೂಕಿನ ಬ್ಯಾಲಾಳ ಗ್ರಾಮದಲ್ಲಿ ಮಾರುತಿ ದೇವರ ಹೊಂಡ ಪೂಜೆ ಹಾಗೂ ಶ್ರೀ ಕಲ್ಮೇಶ್ವರ ಮಹೋತ್ಸವವು ಮೇ 3 ರಿಂದ 5 ರವರೆಗೆ ನಡೆಯಲಿದೆ. ಮೇ 3 ಹಾಗೂ 4 ರಂದು ಶ್ರೀ ಮಾರುತಿ ದೇವರ ಹೊಂಡ ಪೂಜೆ ಜರುಗಲಿದ್ದು, ಅಂದು ಹೊಂಡದಲ್ಲಿ ಬಣ್ಣದ ನೀರು ಹಾಕಿ ಗ್ರಾಮದ ಯುವ ಪಡೆಯು ಬಣ್ಣದ ಹೋಕುಳಿ ಆಡಿ ಸಂಭ್ರಮಿಸಲಿದ್ದಾರೆ. 5ರಂದು ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ. ಅಂದು ಬೆಳಗ್ಗೆ ನಡೆಯುವ ಕೋಲಾಟದಲ್ಲಿ ದೇವರ ಹುಬ್ಬಳ್ಳಿಯ ಜಾನಪದ ಕಲಾವಿದೆ ಪಾರ್ವತಮ್ಮ ಹೊಂಗಲ್ ಹಾಗೂ ಸಂಗಡಿಗರು ಪಾಲ್ಗೊಳ್ಳಲಿದ್ದು, ಅವರಿಂದ ಕೋಲಾಟ ನಡೆಯಲಿದೆ. ಇದರೊಂದಿಗೆ ಹೆಜ್ಜೆ-ಮೇಳಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಇಂದು ಸಮಾರೋಪ
ಧಾರವಾಡ: ಇಲ್ಲಿಯ ಕರ್ನಾಟಕ ವಿವಿಯ ಡಾ.ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ 2013-14 ನೇ ಸಾಲಿನ ಕರ್ನಾಟಕ ಸಂಘದ ಕಾರ್ಯ ಚಟುವಟಿಕೆಗಳ ಸಮಾರೋಪ ಹಾಗೂ ಎಂ.ಎ.ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಕವಿವಿ ಕನ್ನಡ ಅಧ್ಯಯನ ಪೀಠದ ವಿಶ್ವನಿಕೇತನ ಸಭಾಭವನದಲ್ಲಿ ಏ.29 ರಂದು ಬೆಳಗ್ಗೆ 11ಕ್ಕೆ ನಡೆಯಲಿದೆ. ಅತಿಥಿಗಳಾಗಿ ವಿಮರ್ಶಕ ಡಾ.ಗುರುಲಿಂಗ ಕಾಪಸೆ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಡಾ.ಶಾಂತಾ ಎಸ್. ಇಮ್ರಾಪೂರ ವಹಿಸಿಕೊಳ್ಳುವರು. ಕನ್ನಡ ಅಧ್ಯಯನ ಪೀಠದ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ವಿ. ಅಯ್ಯನಗೌಡರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
ಮೇ 2ಕ್ಕೆ ಬಸವ ಜಯಂತಿ
ಧಾರವಾಡ: ಜಗಜ್ಯೋತಿ ಬಸವೇಶ್ವರರ 881 ನೇ ಜಯಂತ್ಯುತ್ಸವವನ್ನು ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಮೇ 2 ರಂದು ಸಂಜೆ 5.30 ನಡೆಯಲಿದೆ. ಸಾನಿಧ್ಯವನ್ನು ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸಿಕೊಳ್ಳುವರು. ಜಿಲ್ಲಾಧಿಕಾರಿ ಸಮೀರ್ ಶುಕ್ಲಾ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಮೇಘಣ್ಣವರ, ಹುಬ್ಬಳ್ಳಿ- ಧಾರವಾಡ ಪೋಲೀಸ್ ಆಯುಕ್ತ ರವೀಂದ್ರ ಪ್ರಸಾದ, ಜಿಲ್ಲಾ ವರಿಷ್ಠಾಧಿಕಾರಿ ಬಿ.ಲೋಕೇಶಕುಮಾರ ಅತಿಥಿಗಳಾಗಿ ಆಗಮಿಸಲಿದ್ದು, 21 ನೇ ಶತಮಾನಕ್ಕೆ ಬಸವ ತತ್ವ ಕುರಿತು ಉಪನ್ಯಾಸವನ್ನು ಗುಲ್ಬರ್ಗದ ಸರ್ವಜ್ಞ ಗ್ರುಪ್ ಆಫ್ ಎಜ್ಯುಕೇಶನಲ್ ಇನ್ಸ್ಟಿಟ್ಯೂಶನ್ ಆಡಾಳಿತಾಧಿಕಾರಿ ನೀಡಲಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದ ಪಂ.ಶ್ರೀಪಾದ ಹೆಗಡೆಯವರಿಂದ ವಚನ ಗಾಯನ ಮೂಡಿ ಬರಲಿದೆ.