ಕವಿ ಐರಸಂಗಗೆ ಸೂಕ್ತ ಮನ್ನಣೆ ದೊರೆತಿಲ್ಲ
ಕನ್ನಡಪ್ರಭ ವಾರ್ತೆ, ಧಾರವಾಡ, ಏ. 28
ಶ್ರೀ ಸಾಮಾನ್ಯ ಕವಿ ಎಂದೇ ಪ್ರಸಿದ್ಧರಾದ ವಿ.ಸಿ. ಐರಸಂಗ ಅವರಿಗೆ ಸಿಗಬೇಕಾದ ಮನ್ನಣೆ ದೊರೆತಿಲ್ಲ. ರಾಜ್ಯ ಸರ್ಕಾರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉದಾಸೀನತೆ ಅಕ್ಷಮ್ಯವಾದದ್ದು ಎಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾವರ್ಧಕ ಸಾಹಿತ್ಯ ಮಂಟಪದ ಆಶ್ರಯದಲ್ಲಿ ದರ್ಪಣ ಪ್ರಕಾಶನ ಪ್ರಕಟಿಸಿದ ವಿ.ಸಿ. ಐರಸಂಗರ ಸಮಗ್ರ ಕವಿತೆಗಳ ಗ್ರಂಥ ಬಿಡುಗಡೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾರ್ಯಾರಿಗೋ ಗೌರವ ಡಾಕ್ಟರೇಟ್ ಕೊಡುವ ವಿಶ್ವವಿದ್ಯಾಲಯಗಳಿಗೆ ಎರಡೂವರೆ ಸಾವಿರ ಕವಿತೆ ಬರೆದ ಕವಿ ಐರಸಂಗ ಏಕೆ ಕಾಣುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು. ಐರಸಂಗ ಅವರಿಗೆ ಸಿಗಬೇಕಾದ ಗೌರವ ಸನ್ಮಾನ ನೀಡುವ ನಿಟ್ಟಿನಲ್ಲಿ ಸಮಾಜ ಮತ್ತು ಸರ್ಕಾರ ಲಕ್ಷ್ಯ ನೀಡಬೇಕು. ಕವಿ ಐರಸಂಗ ಅವರ ಮುಂದಿನ ಸಂಪುಟಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಬೇಕು. ಅವರ ಕವಿತೆಗಳನ್ನು ಜನಪ್ರಿಯಗೊಳಿಸಿದ ಆಕಾಶವಾಣಿ ಕಾರ್ಯ ಅಭಿನಂದನೀಯ.
ಕೃತಿ ಬಿಡುಗಡೆ ಮಾಡಿದ ಕವಿ ನಾಡೋಜ ಡಾ. ಚೆನ್ನವೀರ ಕಣವಿ, ಜಗದ ಯಾವುದೇ ಭಾಷೆಯ ಕಾವ್ಯವಿರಲಿ ಅದಕ್ಕೆ ಲಯಬದ್ಧತೆ ಇದ್ದ ಕಾರಣ ಅದು ಅಮರತ್ವ ಪಡೆದಿರುವುದನ್ನು ಕಂಡಿದ್ದೇವೆ. ಕನ್ನಡದಲ್ಲಿಯೂ ಇತ್ತೀಚೆಗೆ ಕನ್ನಡ ಕವಿತೆ ಲಯ ಬದ್ಧತೆಯ ಕಡೆಗೆ ಮುಖ ಮಾಡಿರುವುದನ್ನು ಕಾಣಬಹುದಾಗಿದೆ. ವಿ.ಸಿ. ಐರಸಂಗ ಅಂತಹ ಕವಿಗಳ ಜೀವನದಲ್ಲಿ ಬಾಹ್ಯ ಸಿದ್ಧಾಂತಗಳು ಏರಿಳಿತಗಳನ್ನು ನಿರ್ಮಿಸಿದರೂ ಅದರ ಪ್ರಭಾವಕ್ಕೊಳಗಾಗದೆ ಬದ್ಧತೆಯಿಂದ ಕವಿತೆಗಳನ್ನು ರಚಿಸಿದ್ದಾರೆ ಹೆಮ್ಮೆಯಿಂದ ನುಡಿದರು. ಪ್ರಕಾಶನದ ಡಾ. ಶಿವಾನಂದ ಗಾಳಿ ಮಾತನಾಡಿದರು. ಡಾ. ಶಶಿಧರ ನರೇಂದ್ರ ಕೃತಿ ಪರಿಚಯಿಸಿದರು. ಸಾಹಿತ್ಯ ಮಂಟಪದ ಸಂಚಾಲಕ ಮೋಹನ ನಾಗಮ್ಮನವರ ಸ್ವಾಗತಿಸಿದರು. ಆಕಾಶವಾಣಿ ಕಲಾವಿದ ಶ್ರೀಕಾಂತ ಕುಲಕರ್ಣಿ ಐರಸಂಗರ ಗೀತೆಗಳನ್ನು ಪ್ರಸ್ತುತ ಪಡಿಸಿದರು. ವಾದಿರಾಜ ನಿಂಬರಗಿ, ಅನಿಲ ಮೇತ್ರಿ ಸಾಥ್ ನೀಡಿದರು. ಪ್ರೊ.ಬಿ.ವಿ. ಗುಂಜೆಟ್ಟಿ, ವಿಶ್ವೇಶ್ವರಿ ಹಿರೇಮಠ, ಗುರು ಹಿರೇಮಠ, ಡಾ. ಲಿಂಗರಾಜ ಅಂಗಡಿ, ಲೀಲಾವತಿ ಕಳಸಪ್ಪನವರ ಇದ್ದರು. ಪ್ರಮೀಳಾ ಜಕ್ಕಣ್ಣವರ ಪ್ರಾರ್ಥಿಸಿದರು. ಕೃಷ್ಣ ಜೋಶಿ ವಂದಿಸಿದರು.