ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮಧ್ಯವರ್ತಿಗಳಿಂದ ರೈತರ ಬದುಕು ಸಂಕಷ್ಟ

Lingaraj Badiger
Updated On : 29 Apr 2014, 12:21 pm

ಕನ್ನಡಪ್ರಭ ವಾರ್ತೆ, ಧಾರವಾಡ, ಏ. 28
ಕೃಷಿ ಕ್ಷೇತ್ರದಲ್ಲಿ ದುಡಿಯುವವರು ಸಂಕಷ್ಟದಲ್ಲಿದ್ದರೆ ಮಧ್ಯವರ್ತಿಗಳು ಸುಖಮಯ ಜೀವನ ಸಾಗಿಸುತ್ತಿದ್ದಾರೆ. ಇದು ದೇಶದ ಬೆನ್ನೆಲುಬೆಂದು ಕರೆಯಿಸಿಕೊಳ್ಳುವ ರೈತರ ದುಸ್ಥಿತಿ ಎಂದು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಎಂ.ಐ. ಪಾಟೀಲ ಕಳವಳ ವ್ಯಕ್ತಪಡಿಸಿದರು.
ಇಲ್ಲಿಯ ಆಲೂರು ವೆಂಕಟರಾವ್ ಭವನದಲ್ಲಿ ಗ್ರೀನ್ ಆರ್ಗ್ಯ್ಯಾನಿಕ್ಸ್ ಏರ್ಪಡಿಸಿದ್ದ ಸಾವಯವ ಕೃಷಿ ಜಾಗೃತಿ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ವೇಗವಾಗಿ ಬೆಳೆಯುತ್ತಿರುವ ವೈಜ್ಞಾನಿಕ ಯುಗದಲ್ಲಿ ಕೃಷಿ ಲಾಭದಾಯಕವಾಗಬೇಕಿತ್ತು. ಆದರೆ ಆಹಾರ ಪದಾರ್ಥಗಳನ್ನು ರಕ್ಷಿಸುವ ಪದ್ಧತಿ ವೈಜ್ಞಾನಿಕವಾಗಿಲ್ಲ ಎಂದರು. ತರಕಾರಿ ಹಾಗೂ ದವಸ ಧಾನ್ಯಗಳನ್ನು ಪಾದಚಾರಿ ಮಾರ್ಗಗಳಲ್ಲಿ ಮಾರಲಾಗುತ್ತಿದೆ. ಪಾದರಕ್ಷೆಗಳನ್ನು ಹವಾ ನಿಯಂತ್ರಿತ ಕೊಠಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಮಧ್ಯವರ್ತಿಗಳು ರೈತರನ್ನು ಸಂಕಷ್ಟಕ್ಕೆ ನೂಕಿ ತಾವು ಮಾತ್ರ ಸುಖ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು. ಅವೈಜ್ಞಾನಿಕವಾದ ಸರ್ಕಾರಿ ನೀತಿಗಳು ರೈತರನ್ನು ತಪ್ಪು ದಾರಿಗೆ ಎಳೆಯುತ್ತಿವೆ. ಕೆಲವು ಯೋಜನೆಗಳು ಕೃಷಿ ಕಾರ್ಮಿಕರನ್ನು ಸೋಮಾರಿಗಳನ್ನಾಗಿ ಮಾಡಿವೆ. ಈ ಹಿನ್ನಲೆಯಲ್ಲಿ ಹೊಲದಲ್ಲಿ ಕೆಲಸ ಮಾಡಲು ಕಾರ್ಮಿಕರು ಸಿಗುತ್ತಿಲ್ಲ. ಪ್ರತಿಯೊಬ್ಬರೂ ಐಷಾರಾಮಿ ಜೀವನಕ್ಕೆ ಮಾರು ಹೋದರೆ ಕೃಷಿ ಗತಿಯೇನೆಂದು ಯೋಚಿಸುವವರು ಸಹ ಸಿಗುತ್ತಿಲ್ಲ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಕೂಲಿ ನಿರೀಕ್ಷಿಸುವ ಜನರಿಂದಾಗಿ ರೈತರು ಕೃಷಿಯಿಂದ ವಿಮುಖರಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿ ಮುಂದುವರಿದರೆ ಅನ್ನ ನೀಡುವರು ಯಾರು ಎಂದರು. ಪತ್ರಕರ್ತ ಹರ್ಷವರ್ಧನ್ ಶೀಲವಂತ ಮಾತನಾಡಿದರು. ನಂದಿ ಶುಗರಸನ್ ಅಧಿಕಾರಿ ಪಾಂಡುರಂಗ ಬಿರಾದಾರ, ರಾಜ್ಯ ಸಾವಯವ ಪ್ರಮಾಣ ಸಂಸ್ಥೆಯ ಉಪಾಧ್ಯಕ್ಷರಾದ ಟಿ.ಸಿ. ದೇವರಾಜ  ಹಾಗೂ ಜಲಪರಿ ಸಂಸ್ಥೆಯ ಆಗ್ರೋ ವ್ಯವಸ್ಥಾಪಕ ಮ್ಯಾನೇಜರ ಸಂಜೀವ ಕಟ್ಟಿ ಮಾತನಾಡಿದರು. ತೋಟಗಾರಿಕೆ ಇಲಾಖೆಯ ನಿವೃತ್ತ ಉಪನಿರ್ದೇಶಕ ಸಿ.ಕೆ. ಹೆರಕಲ್ ಅಧ್ಯಕ್ಷತೆ ವಹಿಸಿದ್ದರು. ಹೊಟೇಲ್ ಉದ್ಯಮಿಗಳಾದ ಸಂತೋಷ ಶೆಟ್ಟಿ, ತೋಟಗಾರಿಕಾ ವಿಷಯ ತಜ್ಞ ಶ್ರೀನಿವಾಸ ಮಂಕಣಿ, ವಿಜಯಾ ಬ್ಯಾಂಕ್ ನಿವೃತ್ ಹಿರಿಯ ವ್ಯವಸ್ಥಾಪಕ ಸುಧಾಕರ ಶೆಟ್ಟಿ, ಗ್ರೀನ್ ಆರ್ಗ್ಯಾನಿಕ್ಸ್ ಮುಖ್ಯಸ್ಥ ಚಂದ್ರಶೇಖರ ಶೆಟ್ಟಿ, ಬೀಜ ಅಭಿವೃದ್ಧಿ ನಿಗಮದ ಸಜ್ಜನ ಇದ್ದರು. ಸಾವಯವ ಪದ್ಧತಿಯಲ್ಲಿ ಉತ್ತಮ ಬೆಳೆ ಬೆಳೆದ ಹದಿನೈದು ರೈತರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement