ವಿದ್ಯುತ್ ದರ ಏರಿಕೆಗೆ ಖಂಡನೆ
ಹುಬ್ಬಳ್ಳಿ: ವಿದ್ಯುತ್ ದರ ಏರಿಕೆ ಮಾಡುವ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಖಂಡಿಸಿದೆ. ಕೆಇಆರ್‌ಸಿ ಏ. 29ರಂದು ನಡೆಸಲಿರುವ ವಿದ್ಯುತ್ ಬಳಕೆದಾರರ ಸಭೆಯಲ್ಲಿ ಸರ್ಕಾರದ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ವಸಂತ ಲದವಾ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈಗಾಗಲೇ ರಾಜ್ಯದ ಜನತೆ ವಿದ್ಯುತ್ ದರ ಏರಿಕೆಯಿಂದ ಕಂಗೆಟ್ಟಿದ್ದಾರೆ. ಇದರ ಬೆನ್ನಲ್ಲೇ ಮತ್ತೆ ಪ್ರತಿ ಯುನಿಟ್‌ಗೆ 66 ಪೈಸೆ ಹೆಚ್ಚಿಸುವ ಸರ್ಕಾರದ ನಿರ್ಧಾರ ಖಂಡನೀಯ. ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏ. 29ನಡೆಯಲಿರುವ ಸಭೆಯಲ್ಲಿ ವಿದ್ಯುತ್ ದರ ಏರಿಕೆ ಏಕೆ ಮಾಡಬಾರದೆಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಲಾಗುವುದು ಎಂದು ಹೇಳಿದರು. 2012-13 ನೇ ಸಾಲಿನ ನಿರ್ವಹಣೆ ವರದಿ ಹಾಗೂ ಲೆಕ್ಕ ಪರಿಶೋಧಕರ ವರದಿ ಪರಿಶೀಲಿಸಿದಾಗ ಹಲವಾರು ಆಘಾತಕಾರಿ ಅಂಶಗಳು ಬಹಿರಂಗಗೊಳ್ಳುತ್ತಿವೆ. ಪ್ರತಿವರ್ಷ ಕೆಇಆರ್‌ಸಿ ಹಾನಿ ತಡೆಗಟ್ಟಲು ಮಾರ್ಗದರ್ಶನಗಳನ್ನ್ನು ನೀಡಿದೆ. ಹೆಸ್ಕಾಂ ಈ ಮಾರ್ಗದರ್ಶನಗಳನ್ನ್ನು ಮೀರಿ ನಡೆದುಕೊಂಡಿರುವುದರಿಂದ ಈ ಕಂಪನಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಸಂಸ್ಥೆಯ ಉಪಾಧ್ಯಕ್ಷ ಕೆ.ಡಿ. ಕೋಟೆಕರ್, ಗೌರವ ಕಾರ್ಯದರ್ಶಿ ಸಿದ್ದೇಶ್ವರ ಕಮ್ಮಾರ, ಎ.ಎಸ್. ಕುಲಕರ್ಣಿಹಾಜರಿದ್ದರು.
ಬಸವೇಶ್ವರ ಜಯಂತಿ
ಹುಬ್ಬಳ್ಳಿ; ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಉತ್ಸವ ಸಮಿತಿ ವತಿಯಿಂದ ನಗರದಲ್ಲಿ ಮೇ 2ರಂದು ಸಂಜೆ 4ಕ್ಕೆ ಬಸವೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ಹಾಗೂ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಉತ್ಸವ ಸಮಿತಿ ಅಧ್ಯಕ್ಷೆ ಅನಸೂಯಾ ಅರಕೇರಿ, ಮೂರುಸಾವಿರಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡುವರು. ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ, ಪರತಪ್ಪ ಬಾಳಣ್ಣವರ, ಶಾಂತಾ ಚನ್ನೋಜಿ, ನಿರಂಜನ ಹಿರೇಮಠ, ಪ್ರಕಾಶ ಬೆಂಡಿಗೇರಿ ನೇತೃತ್ವ ವಹಿಸುವರು. ಸಂಜೆ 6.30ಕ್ಕೆ ನಡೆಯಲಿರುವ ಚಿಂತನ ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ವಹಿಸುವರು. ನಟರಾಜ ಮುರಶಿಳ್ಳಿನ, ಶಿವಪುತ್ರಪ್ಪ ಆಶಿ ಉಪನ್ಯಾಸ ನೀಡುವರು. ಅಂದು ಬೆಳಗ್ಗೆ 11ಕ್ಕೆ ಬಸವಣ್ಣನವರ ಭಾವಚಿತ್ರ ಹಾಗೂ ಧರ್ಮಗ್ರಂಥ ವಚನದೊಂದಿಗೆ ಪ್ರಾರಂಭಗೊಳ್ಳುವುದು. ದುರ್ಗದಬೈಲ್ ವೃತ್ತದಲ್ಲಿ ದಲಿತ ಮುಖಂಡ ಪಿತಾಂಬರಪ್ಪ ಬಿಳಾರ ಧ್ವಜಾರೋಹಣ ನೆರವೇರಿಸುವರು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಅತಿಥಿಯಾಗಿ ಪಾಲ್ಗೊಳ್ಳುವರು.