ಸಮರ್ಪಕ ನೀರು ಪೂರೈಕೆಗೆ ಆಗ್ರಹ
ಕನ್ನಡಪ್ರಭ ವಾರ್ತೆ, ನವಲಗುಂದ, ಏ. 28
ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಗ್ರಾಮದ ವಿವಿಧ ಸ್ವಸಹಾಯ ಸಂಘಗಳ ಮಹಿಳೆಯರು ಸೋಮವಾರ ರಾಷ್ಟ್ರೀಯ ಹೆದ್ದಾರಿಯ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಒಂದು ತಿಂಗಳ ಹಿಂದೆ ರಸ್ತೆ ಬಂದ್ ಮಾಡಿದ್ದರೂ ಸಹ ಎಚ್ಚತ್ತುಕೊಳ್ಳದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಮರ್ಪಕ ಕುಡಿಯುವ ನೀರು ಪೂರೈಸುವ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದೂ ಪ್ರತಿಭಟನಾಕಾರರು ದೂರಿದರು. ಕುಡಿಯುವ ನೀರು ಸೇರಿದಂತೆ ಅವಶ್ಯಕ ಮೂಲ ಸೌಕರ್ಯ ಒದಗಿಸಿಕೊಡಲು ಸಂಬಂಧಪಟ್ಟವರು ತಕ್ಷಣ ಕಾರ್ಯ ಪ್ರವೃತ್ತರಾಗದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದೂ ಎಚ್ಚರಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಶಾಸಕ ಎನ್.ಎಚ್. ಕೋನರಡ್ಡಿ, ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ಈ ಸಮಸ್ಯೆ ಕುರಿತು ಅಧಿಕಾರಿಗಳ ಸಭೆ ನಡೆಸಿದ ಅವರು, ತಾಲೂಕಿನಲ್ಲಿನ ಕುಡಿಯುವ ನೀರಿನ ಸಮಸ್ಯೆಗಳಿರುವ ಗ್ರಾಮಗಳ ಬಗ್ಗೆ ಮಾಹಿತಿ ಪಡೆದು ತಕ್ಷಣವೇ ಟ್ಯಾಂಕರ್ ಅಥವಾ ಬೋರ್ವೆಲ್ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ತಾಲೂಕಿನ ಮಜ್ಜಿಗುಡ್ಡ, ಗುಮ್ಮಗೋಳ ಹಾಗೂ ಹಳ್ಳಿಕೇರಿ ಗ್ರಾಮಗಳಲ್ಲಿಯೂ ಕುಡಿಯುವ ನೀರಿನ ತೊಂದರೆಯಾಗಿದೆ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಂ.ಸವದತ್ತಿ, ಜಿ.ಪಂ.ಅಭಿಯಂತರ ಜಿ.ಡಿ.ಜೋಶಿ, ಗ್ರಾಮೀಣ ಉದ್ಯೋಗ ಖಾತ್ರಿಯ ಸಹಾಯಕ ನಿರ್ದೇಶಕ ಬಿ.ಎಸ್. ಮೂಗನೂರಮಠ ಮಾಹಿತಿ ನೀಡಿದರು. ಪ್ರತಿಭಟನೆಯಲ್ಲಿ ಅಕ್ಕಮಹಾದೇವಿ, ಮಹಾಲಕ್ಷ್ಮಿ, ಇಂದಿರಾ, ಅನ್ನಪೂಣೇಶ್ವರಿ, ಶಾರದಾ ಸ್ವ-ಸಹಾಯ ಗುಂಪಿನ ನೂರಾರು ಮಹಿಳೆಯರು ಇದ್ದರು. ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದರಿಂದ ಕೆಲಕಾಲ ಸಾರಿಗೆ ಸಂಚಾರ ಸ್ಥಗಿತಗೊಂಡು ಸುಡುಬಿಸಿಲಿನಲ್ಲಿ ಪ್ರಯಾಣಿಕರು ಪರದಾಡಬೇಕಾಯಿತು.
--