ರು. 2.74 ಕೋಟಿ ಕಾಮಗಾರಿಗೆ ವಿಘ್ನ
ಪ್ರಕಾಶ ಎಸ್. ಶೇಟ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 29
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರು. 30 ಕೋಟಿ ಅನುದಾನದಲ್ಲಿ ಅವಳಿ ನಗರದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯವನ್ನು ನಾಲ್ಕು ಹಂತದಲ್ಲಿ ಕೈಗೆತ್ತಿಕೊಂಡಿತ್ತು. ಕಾಮಗಾರಿ ಆರಂಭವಾಗಿ ಆರು ವರ್ಷ ಗತಿಸಿದರೂ ನಾಲ್ಕೂ ಹಂತದ ಕಾಮಗಾರಿಯಲ್ಲಿ ಇಂದಿಗೂ ಅನೇಕ ಕೆಲಸಗಳು ಅಪೂರ್ಣವಾಗಿರುವುದು ಇದೀಗ ಬೆಳಕಿಗೆ ಬಂದಿದೆ.
ಪ್ಯಾಕೇಜ್ ನಂ. 1ರಲ್ಲಿ ಹುಬ್ಬಳ್ಳಿ ಉತ್ತರ ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದ್ದರೆ, ಪ್ಯಾಕೇಜ್ ನಂ. 2ರಲ್ಲಿ ಹುಬ್ಬಳ್ಳಿ ದಕ್ಷಿಣ ಭಾಗದಲ್ಲಿ, 3 ಮತ್ತು 4ನೇ ಪ್ಯಾಕೇಜ್ ಧಾರವಾಡ ನಗರದ ದಕ್ಷಿಣ ಹಾಗೂ ಉತ್ತರ ಭಾಗದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.
ಪ್ಯಾಕೇಜ್ ನಂ. 1: ಹುಬ್ಬಳ್ಳಿ ಉತ್ತರ ವಲಯದಲ್ಲಿ ರಸ್ತೆ ಅಭಿವೃದ್ಧಿ ಪಡಿಸುವ ಗುತ್ತಿಗೆಯನ್ನು ಪಾಲಿಕೆ ಚಂದ್ರಗಿರಿ ಕಂಸ್ಟ್ರಕ್ಷನ್ ಕಂಪನಿಗೆ ನೀಡಲಾಗಿತ್ತು. ಈ ಕಾಮಗಾರಿಯ ಒಟ್ಟೂ ಮೊತ್ತ 2.74 ಕೋಟಿ ಎಂದು ಅಂದಾಜಿಸಲಾಗಿತ್ತು. ಶಿಂಧೆ ಚಾಳನಿಂದ ಕ್ಲಬ್ ರೋಡ್ ವರೆಗೆ ರು. 49.13 ಲಕ್ಷ ವೆಚ್ಚದಲ್ಲಿ 800 ಮೀಟರ್ ರಸ್ತೆ ನಿರ್ಮಾಣ, ರಮೇಶ ಭವನದಿಂದ ಅಶೋಕ ನಗರ ಬ್ರಿಜ್ ವರೆಗೆ ರು. 68.43 ಲಕ್ಷ ವೆಚ್ಚದಲ್ಲಿ 1320 ಮೀಟರ್ ರಸ್ತೆ ನಿರ್ಮಾಣ, ರಮೇಶ ಭವನದಿಂದ ಕುಸುಗಲ್ ರಸ್ತೆ ವರೆಗೆ ರು. 34.29 ಲಕ್ಷ ವೆಚ್ಚದಲ್ಲಿ 780 ಮೀಟರ್ ರಸ್ತೆ ನಿರ್ಮಿಸಲು, ಗಣೇಶಪೇಟೆ ಪೊಲೀಸ್ ಚೌಕಿಯಿಂದ ಗೂಡಶೆಡ್ ರಸ್ತೆವರೆಗೆ ರು. 33.67 ಲಕ್ಷ ವೆಚ್ಚದಲ್ಲಿ 650 ಮೀಟರ್, ಪಿ. ಬಿ. ರಸ್ತೆಯಿಂದ ಬಿಡನಾಳ ಸರ್ಕಾರಿ ಶಾಲೆಯವರೆಗೆ ರು. 28.28 ಲಕ್ಷ ವೆಚ್ಚದಲ್ಲಿ 660 ಮೀಟರ್ ರಸ್ತೆ ನಿರ್ಮಿಸಲು ಹಾಗೂ ರೈಲ್ವೆ ಬ್ರಿಜ್ನಿಂದ ಹಳೆ ಐಟಿ ಕಚೇರಿವರೆಗೆ ರು. 60.59 ಲಕ್ಷ ವೆಚ್ಚದಲ್ಲಿ 1500 ಮೀಟರ್ ರಸ್ತೆ ನಿರ್ಮಿಸಲು ಗುತ್ತಿಗೆ ನೀಡಲಾಗಿತ್ತು.
ಆದರೆ ದುರಂತದ ಸಂಗತಿಯೆಂದರೆ 2006ರಲ್ಲಿ ಟೆಂಡರ್ ಕರೆಯಲಾಗಿದ್ದರೂ ಪಾಲಿಕೆ ಹಾಗೂ ಗುತ್ತಿಗೆದಾರರನಡುವಿನ ಹಗ್ಗ ಜಗ್ಗಾಟದಲ್ಲಿ ಕಾಮಗಾರಿ ಶುರುವಾಗಲೇ ಇಲ್ಲ. ಗುತ್ತಿಗೆ ಪಡೆದ ಕಂಪನಿ ಇನ್ನೇನು ಕೆಲಸ ಆರಂಭಿಸಿತು ಎನ್ನುವ ಕಾಲಕ್ಕೆ ಪಾಲಿಕೆ ಕೆಲ ತಾಂತ್ರಿಕ ಸಮಸ್ಯೆಯನ್ನು ಗುತ್ತಿಗೆದಾರರ ಮುಂದಿಟ್ಟಿತು. ಇದರ ಪರಿಣಾಮ ರಸ್ತೆ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳದೇ ಗುತ್ತಿಗೆದಾರರು ಕಾಮಗಾರಿ ಕೈಬಿಟ್ಟರು.
ಆ ಬಳಿಕ ಪಾಲಿಕೆ ಗುತ್ತಿಗೆದಾರರಿಗೆ ನೀಡಿದ್ದ ಗುತ್ತಿಗೆ ತಾತ್ಕಾಲಿಕವಾಗಿ ತಡೆ ಹಿಡಿಯಿತು. ಈ ವಿಷಯವಾಗಿ ಮಾತುಕತೆ ಮಾಡಿ ಸಮಸ್ಯೆ ಪರಿಹರಿಸಿ ಒಂದು ಒಪ್ಪಂದಕ್ಕೆ ಬಂದರಾಯಿತು ಎನ್ನುವ ನಿರ್ಧಾರಕ್ಕೆ ಬರಲಾಯಿತಾದರೂ, ತಗಾದೆ ಶುರುವಾಗಿ ಆರು ವರ್ಷ ಕಳೆದರೂ ಒಪ್ಪಂದ ಮಾತ್ರ ಈವರೆಗೂ ಏರ್ಪಟ್ಟಿಲ್ಲ.
ಒಪ್ಪಂದದ ಕುರಿತಾಗಿ ಪಾಲಿಕೆಯ ಅಧಿಕಾರಿಗಳಿಗೆ ಪ್ರಶ್ನಿಸಿದರೆ, ಒಪ್ಪಂದ ವಿಷಯ ಇನ್ನೂ ಚರ್ಚೆಯ ಹಂತದಲ್ಲಿದೆ ಎನ್ನುತ್ತಾರೆ. ಇನ್ನು ಕಾಮಗಾರಿಯ ಕಥೆ ಎಲ್ಲಿಗೆ ಬಂತು ಎಂದು ಕೇಳಿದರೆ ಪ್ರಗತಿಯ ಹಂತದಲ್ಲಿದೆ ಎನ್ನುವ ಸಿದ್ಧ ಉತ್ತರ ನೀಡುತ್ತಿದ್ದಾರೆ.
ಒಂದೊಮ್ಮೆ ಗುತ್ತಿಗೆದಾರರು ನಿಯಮಾನುಸಾರ ಕೆಲಸ ಮಾಡಲು ಮುಂದಾಗುತ್ತಿಲ್ಲ ಎಂದ ಮೇಲೆ ಗುತ್ತಿಗೆಯನ್ನು ಕೈಬಿಟ್ಟು ಪಾಲಿಕೆ ಬೇರೆಯವರಿಗೆ ರಸ್ತೆ ನಿರ್ಮಿಸುವ ಗುತ್ತಿಗೆ ನೀಡಬಹುದಾಗಿತ್ತು. ಆದರೆ ಆರು ವರ್ಷ ಕಾಲ ಹಗ್ಗಜಗ್ಗಾಟ ಮಾಡಿಕೊಂಡು ಬಂದಿರುವುದರ ಒಳಗುಟ್ಟೇನು? ಎಂಬುದಕ್ಕೆ ಪಾಲಿಕೆಯೇ ಉತ್ತರಿಸಬೇಕಿದೆ. ಇನ್ನು ಕಾಮಗಾರಿಗಾಗಿ ಮೀಸಲಿಡಲಾಗಿದ್ದ ರು. 2.74 ಕೋಟಿ ಪಾಲಿಕೆ ಖಜಾನೆಯಲ್ಲಿ ಭದ್ರವಾಗಿದೆಯೇ? ಎನ್ನುವ ಪ್ರಶ್ನೆಯೂ ಉದ್ಭವಿಸಿದೆ.
ಪ್ಯಾಕೆಜ್ ನಂ. 2: ಇದು ಪ್ಯಾಕೆಜ್ ನಂ. 1ರಲ್ಲಿ ಸೃಷ್ಟಿಯಾದ ಅವಾಂತರವಾದರೆ ಇನ್ನು, ಪ್ಯಾಕೆಜ್ ನಂ. 2ರಲ್ಲಿ ಕೈಗೆತ್ತಿಕೊಂಡ ಕಾಮಗಾರಿಯ ಕಥೆ ಬೇರೆಯೇ ಇದೆ. ಹುಬ್ಬಳ್ಳಿ ದಕ್ಷಿಣ ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು 2005ರಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಪಾಲಿಕೆಯ ದಾಖಲೆಗಳ ಪ್ರಕಾರ ಈ ಭಾಗದಲ್ಲಿ ನಿರೀಕ್ಷೆ ಮೀರಿ ಕೆಲಸವಾಗಿದೆ.
ಒಟ್ಟೂ 16.02 ಕಿ. ಮೀ. ಉದ್ದದ ರಸ್ತೆ ನಿರ್ಮಿಸುವ 29 ಪ್ರತ್ಯೇಕ ಕಾಮಗಾರಿಗಳನ್ನು ರು. 10.22 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ತದ ನಂತರ ಅಗತ್ಯತೆಗನುಗುಣವಾಗಿ ಹೆಚ್ಚುವರಿಯಾಗಿ 1.50 ಕಿ. ಮೀ. ರಸ್ತೆ ನಿರ್ಮಿಸಲಾಯಿತು. ಈ ಭಾಗದಲ್ಲಿ ಒಟ್ಟಾರೆಯಾಗಿ 17.52 ಕಿ. ಮೀ. ರಸ್ತೆ ನಿರ್ಮಿಸಲಾಯಿತು. ಪಾಲಿಕೆ ಲೆಕ್ಕಾಚಾರದ ಪ್ರಕಾರ ಶೇ. 109.36 ಕಾಮಗಾರಿ ಪೂರ್ಣಗೊಂಡಿದೆ. ಸೋಜಿಗದ ಸಂಗತಿಯೆಂದರೆ ನಿರೀಕ್ಷೆ ಮೀರಿ ಕೆಲಸ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಪಾಲಿಕೆ ರು. 10.22 ಕೋಟಿ ಪೈಕಿ ಕೇವಲ ರು. 3.94 ಕೋಟಿ ಮಾತ್ರ ಪಾವತಿಸಿದೆ. ಪಾಲಿಕೆ ಬಳಿ ಹಣವಿದ್ದಾಗಲೂ ಗುತ್ತಿಗೆದಾರರಿಗೆ ಪಾವತಿಸಬೇಕಾದ ಮೊತ್ತ ಬಾಕಿ ಉಳಿಸಿಕೊಂಡಿದ್ದಾದರೂ ಏಕೆ ಎನ್ನುವ ಪ್ರಶ್ನೆ ಎದುರಾಗಿದೆ. ಬಲ್ಲ ಮೂಲಗಳ ಪ್ರಕಾರ ಗುತ್ತಿಗೆದಾರರಿಂದ 'ಖುಷಿ' ಕಿತ್ತುಕೊಳ್ಳುವ ಸಲುವಾಗಿ ಬಾಕಿ ಹಣ ಉಳಿಸಿಕೊಳ್ಳಲಾಗಿದೆಯಂತೆ.