ಇಂದು ಬೈಕ್ ರ್ಯಾಲಿ
ಧಾರವಾಡ: ಶಿವಾಜಿ ಜಯಂತಿ, ಬಸವ ಜಯಂತಿ ಹಾಗೂ ಕಾರ್ಮಿಕ ದಿನಾಚರಣೆ ನಿಮಿತ್ತ ಬಸವ ದಳ ಹಾಗೂ ಬಸವ ಸಂಘಟನೆಗಳ ಆಶ್ರಯದಲ್ಲಿ ಮೇ 1ರಂದು ಬೆಳಗ್ಗೆ 8.30ಕ್ಕೆ ಇಲ್ಲಿಯ ಅಕ್ಕಮಹಾದೇವಿ ಆಶ್ರಮದಿಂದ ಬೈಕ್ ರ್ಯಾಲಿ ನಡೆಯಲಿದೆ. ಕರ್ನಾಟಕ ವಿವಿ ಮಾಜಿ ಕುಲಸಚಿವ ಡಾ. ಜಿ.ಬಿ. ನಂದನ ರ್ಯಾಲಿಗೆ ಚಾಲನೆ ನೀಡುವರು. ದೆಹಲಿ ಅನುಭವ ಮಂಟಪದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಇಂದು ದಿನಾಚರಣೆ
ಧಾರವಾಡ: ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಮೇ 1ರಂದು ಸಂಜೆ 5ಕ್ಕೆ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ವಿಚಾರ ಸಂಕಿರಣ ನಡೆಯಲಿದೆ. ಅಧ್ಯಕ್ಷತೆಯನ್ನು ಶಿವಯೋಗಿ ಪ್ಯಾಟಿಶೆಟ್ಟರ ವಹಿಸಲಿದ್ದು, ಬಿ.ಎಸ್. ಸೊಪ್ಪಿನ ಅವರು ಪ್ರಸ್ತುತ ಕಾರ್ಮಿಕ ವರ್ಗದ ಮುಂದಿರುವ ಸವಾಲುಗಳು ಹಾಗೂ ಬಿ.ಎನ್. ಪೂಜಾರಿ, ಕೇಂದ್ರ ಕಾರ್ಮಿಕ ಸಂಘಟನೆಗಳ ಐಕ್ಯ ಹೋರಾಟಗಳು ಕುರಿತು ಮಾತನಾಡಲಿದ್ದಾರೆ. ರಾಘವೇಂದ್ರ ಆಯಿ, ಆರ್.ಎಫ್. ಕವಳಿಕಾಯಿ, ಸಿಐಟಿಯು ಜಿಲ್ಲಾಧ್ಯಕ್ಷ ಬಿ.ಐ. ಈಳಿಗೇರ ಭಾಗವಹಿಸುವರು.
ವೇಳಾಪಟ್ಟಿ ಪ್ರಕಟ
ಧಾರವಾಡ: ಬಿಎ, ಬಿ.ಕಾಂ., ಬಿ.ಎಸ್.ಸಿ. (ಹಳೆಯ, ಹೊಸ) ನಾನ್ ಸೆಮೆಸ್ಟರ್ ಮೇಜರ್, ಮೈನರ್ ಐ.ಎಲ್.ಆರ್.ಡಿ, ಬಿ.ಎಫ್.ಎ, ಬಿ. ಮ್ಯೂಜಿಕ್, ವಿವಿಧ ಎಲ್.ಎಲ್.ಬಿ. ಕೋರ್ಸ್ಗಳು, ಸಂಪರ್ಕ ಶಿಕ್ಷಣ ವಿದ್ಯಾಲಯದ ಬಿ.ಎ, ಬಿ.ಕಾಂ. ಭಾಗ 1,2 ಹಾಗೂ 3ರ ಪರೀಕ್ಷೆಗಳು ಮೇ 20ರಿಂದ ಹಾಗೂ ಸ್ನಾತಕೋತ್ತರ ಸಂಪರ್ಕ ಶಿಕ್ಷಣ ವಿದ್ಯಾಲಯದ ಎಂ,ಎ., ಎಂ.ಕಾಂ. ಪರೀಕ್ಷೆಗಳು ಮೇ 24ರಿಂದ ಪ್ರಾರಂಭವಾಗಲಿದೆ. ಢಿಢಿಢಿ.್ಞ್ಡಜ.ಛ್ಛ.್ಝಟಿ ದಿಂದ ಮಾಹಿತಿ ಪಡೆಯಬಹುದು.
ಇಂದಿನಿಂದ ಸಿಇಟಿ ಪರೀಕ್ಷೆ
ಧಾರವಾಡ: ಜಿಲ್ಲೆಯಲ್ಲಿ 2014 ನೇ ಸಾಲಿನ ಸಿ.ಇ.ಟಿ ಪರೀಕ್ಷೆ ಮೇ 1, 2ರಂದು ನಡೆಯಲಿದೆ. ಧಾರವಾಡದಲ್ಲಿ 7 ಪರೀಕ್ಷಾ ಕೇಂದ್ರಗಳು, ಹುಬ್ಬಳ್ಳಿಯಲ್ಲಿ 7 ಪರೀಕ್ಷಾ ಕೇಂದ್ರಗಳಿದ್ದು, ಒಟ್ಟು 6717 ವಿದ್ಯಾರ್ಥಿಗಳು ಪರೀಕ್ಷಗೆ ಹಾಜರಾಗಲಿದ್ದಾರೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮೂವರು ಅಧಿಕಾರಿಗಳ ಸಮಿತಿ ರಚಿಸಲಾಗಿದೆ. 14 ಪರೀಕ್ಷಾ ಕೆಂದ್ರಕ್ಕೆ ಒಬ್ಬರು ಪ್ರಶ್ನೆ ಪತ್ರಿಕಾಪಾಲರನ್ನು ಮತ್ತು ಕೇಂದ್ರಗಳಲ್ಲಿ, ಕೇಂದ್ರಕ್ಕೆ ಇಬ್ಬರಂತೆ ವಿಶೇಷ ಜಾಗೃತ ಸದಸ್ಯರನ್ನು ನೇಮಿಸಲಾಗಿದೆ. ಮೇ 1 ರಂದು ಬೆಳಗ್ಗೆ 10.30 ರಿಂದ 11.50 ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ಗಣಿತಶಾಸ್ತ್ರ, ಮೇ 2 ರಂದು ಬೆಳಗ್ಗೆ 10.30 ರಿಂದ 11.50ರ ವರೆಗೆ ಭೌತಶಾಸ್ತ್ರ, 2.30ರಿಂದ 3.50ರ ವರೆಗೆ ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿವೆ ಎಂದು ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.
ಇಂದು ಬೈಕ್ ರ್ಯಾಲಿ
ಧಾರವಾಡ: ಮುರುಘಾಮಠದ ಮುರುಘರಾಜೇಂದ್ರ ಪ್ರಸಾದ ನಿಲಯದ ವತಿಯಿಂದ ಬಸವೇಶ್ವರ ಜಯಂತಿ ಅಂಗವಾಗಿ ಮೇ 1ರಂದು ಸಂಜೆ 4ಕ್ಕೆ ಮಠದಿಂದ ಬೈಕ್ ರ್ಯಾಲಿ ಹಮ್ಮಿಕೊಂಡಿದೆ. ಮಠದಿಂದ ಶಿವಾಜಿ ಸರ್ಕಲ್, ಜುಬಿಲಿ ಸರ್ಕಲ್ಲ್ ತಲುಪಿ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಸುಭಾಸ ರೋಡ್, ಗಾಂಧಿಚೌಕ್ ಸುತ್ತುವರಿದು ಟಿಕಾರೆ ರೋಡ್, ಸಂಗಮ ಸರ್ಕಲ್, ಲಕ್ಷ್ಮೀ ಟಾಕೀಜ್, ತಹಸೀಲ್ದಾರ್ ಕಚೇರಿ ಮುಂದೆ ಹಾಯ್ದು ಉಳವಿ ಚನ್ನಬಸವೇಶ್ವರ ದೇವಸ್ಥಾನ ತಲುಪುವದು.
ಇಂದು ಕಾರ್ಮಿಕ ದಿನಾಚರಣೆ
ಧಾರವಾಡ: ಇಲ್ಲಿಯ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಮೇ 1ರಂದು ಬೆಳಗ್ಗೆ 10ಕ್ಕೆ ಕಾರ್ಮಿಕ ದಿನಾಚರಣೆಯ ಅಂಗವಾಗಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯುನಿಯನ್ ಸೆಂಟರ್ ಸೇರಿದಂತೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಕಾರ್ಮಿಕ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಎಸ್.ಯು.ಸಿ.ಐ. ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ, ಸಂಘದ ಅಧ್ಯಕ್ಷ ಜೀವನ್ ಉತ್ಕುರಿ, ಮೂಕಾಂಬಿಕಾ ಪರಶಿಕಲ್ಲಿನ ಗಾಡಿ ಹಮಾಲರ ಸಂಘದ ಕಾರ್ಯದರ್ಶಿ ಮಹ್ಮದಲಿ ಬೆಟಗೇರಿ, ನಿವೇಶನ ರಹಿತರ ಆಂದೋಲನದ ಸಹಸಂಚಾಲಕ ಆರ್.ವಿ. ಹಿರೇಒಡೆಯರ, ಕೊಳಗೇರಿ ನಿವಾಸಿಗಳ ಹಿತಾಭಿವೃದ್ಧಿ ಸಂಘದ ಸಂಚಾಲಕ ರಸೂಲ್ ನದಾಫ ಆಗಮಿಸುವರು. ಗಂಗಾಧರ ಬಡಿಗೇರ ಅಧ್ಯಕ್ಷತೆ ವಹಿಸುವರು.
ಇಂದು ಶಿವಾಜಿ ಜಯಂತಿ ಆಚರಣೆ
ಧಾರವಾಡ: ಛತ್ರಪತಿ ಶಿವಾಜಿ ಮಹಾರಾಜರ 387ನೇ ಜಯಂತ್ಯುತ್ಸವವನ್ನು ಮರಾಠಾ ವಿದ್ಯಾಪ್ರಸಾರಕ ಮಂಡಳ ಹಾಗೂ ಉತ್ಸವ ಸಮಿತಿ ಆಶ್ರಯದಲ್ಲಿ ಮೇ 1ರಂದು ಆಚರಿಸಲಾಗುವುದು ಎಂದು ಉತ್ಸವ ಸಮಿತಿ ಅಧ್ಯಕ್ಷ ಸುಭಾಸ ಶಿಂಧೆ ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುವಾರ ಸವದತ್ತಿ ರಸ್ತೆಯಲ್ಲಿರುವ ಮರಾಠಾ ವಿದ್ಯಾಪ್ರಸಾರಕ ಮಂಡಳದ ಆವರಣದಲ್ಲಿ ಬೆಳಗ್ಗೆ 5ಕ್ಕೆ ಗಣ ಹೋಮ, 9ಕ್ಕೆ ವಿಠಲ ಕಾಟೇನವರ ಸಾನ್ನಿಧ್ಯದಲ್ಲಿ ಭಗವಾ ಧ್ವಜಾರೋಹಣ ನೆರವೇರಲಿದೆ. ಮರಾಠಾ ವಿದ್ಯಾಪ್ರಸಾರಕ ಮಂಡಳ ಅಧ್ಯಕ್ಷ ಎಂ.ಎನ್. ಮೋರೆ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ ಎಂದರು. ಅಂದು ಬೆಳಿಗ್ಗೆ 10ಕ್ಕೆ ಸುಮಂಗಲಿಯರಿಂದ ತೊಟ್ಟಿಲು ಪೂಜೆ ಹಾಗೂ ಬಾಲ ಶಿವಾಜಿ ನಾಮಕರಣ ಕಾರ್ಯಕ್ರಮಗಳು ಜರುಗಲಿವೆ. ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4ಕ್ಕೆ ನಡೆಯಲಿರುವ ಸಾಂಸ್ಕೃತಿಕ ಮೆರವಣಿಗೆಗೆ ಉತ್ಸವ ಸಮಿತಿ ಗೌರವ ಅಧ್ಯಕ್ಷ ಚಂದ್ರಭಾಗ ಮೋರೆ ಚಾಲನೆ ನೀಡಲಿದ್ದಾರೆ. ರಾತ್ರಿ 8ಕ್ಕೆ ಪ್ರಸಾದ ವಿತರಣೆ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಎಂ.ಎನ್. ಮೋರೆ, ಬಸವರಾಜ ಜಾಧವ, ನಾರಾಯಣ ಹುಬ್ಬಳ್ಳಿ, ವಿಜಯ ಭೋಸಲೆ, ನವೀನ ಕದಂ, ಡಾ. ಅರುಣ ಬಾಬು ಅಂಗಡಿ ಇದ್ದರು.
ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ
ಹುಬ್ಬಳ್ಳಿ: ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಮಹಿಳೆಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕುರಿತು ಕಮರಿಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಮರಿಪೇಟೆಯ ಕೌಶಲ್ಯಾ ಗೋವಿಂದಸಾ ಮೆಹರವಾಡೆ (82) ಎಂಬ ಮಹಿಳೆ ತಮ್ಮ ಹಳೇ ಮನೆಯನ್ನು ರಿಪೇರಿ ಮಾಡಿಸಲಿಕ್ಕಾಗದೇ ಮನೆಯಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಸರಸ್ವತಿ ಸಾಲಗಾರ ನೀಡಿದ ದೂರಿನ ಮೆರೆಗೆ ಅಸ್ವಾಭಾವಿಕ ಸಾವು ಎಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.