ತಿಂಗಳ ಪಾಸ್ಗೆ 15 ದಿನ ಅಲೆದಾಟ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 30
ಪಾಸ್ ಬೇಕಿರುವುದು ಒಂದು ತಿಂಗಳಿಗೆ ಮಾತ್ರ. ಆದರೆ ಒಂದು ತಿಂಗಳ ಅವಧಿಯ ಪಾಸ್ ನವೀಕರಣಕ್ಕಾಗಿ ಹದಿನೈದು ದಿನ ಅಲೆಯಬೇಕಾದ ದುಸ್ಥಿತಿ ಪದವಿ ವಿದ್ಯಾರ್ಥಿಗಳದ್ದು.
ಇತ್ತ ಪರೀಕ್ಷೆ ಸಿದ್ಧತೆ ಮಾಡಿಕೊಳ್ಳಬೇಕೊ ಅಥವಾ ಪಾಸ್ ನವೀಕರಣಕ್ಕೆ ಓಡಾಡಬೇಕೊ ಎನ್ನುವುದು ತಿಳಿಯದೇ ಗೊಂದಲದಲ್ಲಿರುವ ವಿದ್ಯಾರ್ಥಿಗಳು ಕನಿಷ್ಠ ಪರೀಕ್ಷೆಗೆ ಹಾಜರಾಗುವುದಕ್ಕಾದರೂ ಆಗಲಿ ಎಂದು ವಾಯವ್ಯ ಸಾರಿದೆ ಸಂಸ್ಥೆಯ ಹೊಸ ಬಸ್ ನಿಲ್ದಾಣದಲ್ಲಿ ರಿಯಾಯಿತಿ ಪಾಸ್ಗಾಗಿ ದಿನಗಟ್ಟಲೇ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.
ಸಮಸ್ಯೆ ಏನು?: ವಾಯವ್ಯ ಸಾರಿಗೆ ಸಂಸ್ಥೆ ವಿದ್ಯಾರ್ಥಿಗಳಿಗೆ ನೀಡುವ ರಿಯಾಯಿತಿ ಪಾಸ್ ಏಪ್ರಿಲ್ಗೆ ಮುಕ್ತಾಯಗೊಂಡಿದೆ. ಆದರೆ ಚುನಾವಣೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ವಾರ್ಷಿಕ ಪರೀಕ್ಷೆಗಳು ಮುಂದೂಡಿರುವುದರಿಂದ ಏಪ್ರಿಲ್ ನಂತರವೂ ವಿದ್ಯಾರ್ಥಿಗಳು ತರಗತಿ ಮತ್ತು ಪರೀಕ್ಷೆಗೆ ಮೇ ವರೆಗೆ ಕಾಲೇಜಿಗೆ ಹಾಜರಾಗಬೇಕಾಗುತ್ತದೆ. ಪಾಸ್ನ ಅವಧಿಗೆ ಮುಗಿದಿದ್ದು, ಇದರಿಂದಾಗಿ ಹೊಸ ಬಸ್ ನಿಲ್ದಾಣದಲ್ಲಿ ತೆರೆದಿರುವ ಕೇವಲ ಎರಡು ಕೌಂಟರ್ಗಳಲ್ಲಿ ವಿದ್ಯಾರ್ಥಿಗಳು ಪಾಸ್ ನವೀಕರಣ ಮಾಡಿಸಿಕೊಳ್ಳುವುದಕ್ಕೆ ದಿನಗಟ್ಟಲೇ ನಿಲ್ಲುತ್ತಿದ್ದಾರೆ.
ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆಯೇ ವಿದ್ಯಾರ್ಥಿಗಳಿಗೆ ಆಯಾ ಶಿಕ್ಷಣ ಸಂಸ್ಥೆಯ ಮುಖಾಂತರ ಒಂದು ವರ್ಷದ ರಿಯಾಯಿತಿ ಬಸ್ ಪಾಸ್ ನೀಡಲಾಗುತ್ತಿದೆ. ಇದೇ ವೇಳೆ ಪಾಸ್ ನವೀಕರಣ ವ್ಯವಸ್ಥೆಯೂ ಈ ಹಿಂದೆ ಕಾಲೇಜ್ ಮುಖಾಂತರವೇ ಆಗುತ್ತಿತ್ತು. ಆದರೆ ಎನ್ಡಬ್ಲ್ಯುಕೆಆರ್ಟಿಸಿ ಈ ಸಲ ಪದ್ಧತಿ ಬದಲಿಸಿದೆ. ಹುಬ್ಬಳ್ಳಿ ಮತ್ತು ಧಾರವಾಡ ನಗರ ವ್ಯಾಪ್ತಿಯ ಎಲ್ಲ ಪದವಿ ಕಾಲೇಜು ವಿದ್ಯಾರ್ಥಿಗಳು ಹುಬ್ಬಳ್ಳಿಯ ಬಸ್ ನಿಲ್ದಾಣದಲ್ಲಿ ತೆರೆಯಲಾಗಿರುವ ಕೌಂಟರ್ಗಳಲ್ಲಿ ಒಂದು ತಿಂಗಳ ಅವಧಿಗೆ ರು. 150 ಶುಲ್ಕ ಪಾವತಿಸಿ ನವೀಕರಣ ಮಾಡಿಸಿಕೊಳ್ಳುವು ನಿಯಮ ಅಳವಡಿಸಿದೆ. ಇದೇ ಪರಿಸ್ಥಿತಿಯನ್ನು ಅನುಭವಿಸಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಬಸ್ ಪಾಸುಗಳನ್ನು ಉಚಿತವಾಗಿ ನವೀಕರಣ ಮಾಡಿಕೊಟ್ಟಿದೆ.
ಏಪ್ರಿಲ್ 28ರಿಂದ ಪದವಿ ಪರೀಕ್ಷೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಇತ್ತ ವಿದ್ಯಾರ್ಥಿಗಳು ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಆಗದೇ ತೊಂದರೆ ಅನುಭವಿಸುತ್ತಿದ್ದಾರೆ. ಅವಳಿ ನಗರ ವ್ಯಾಪ್ತಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ರಿಯಾಯಿತಿ ಪಾಸ್ ನವೀಕರಣ ಮಾಡಿಸಿಕೊಳ್ಳಬೇಕಾಗಿದೆ. ಕೇವಲ ಎರಡು ಕೌಂಟರ್ಗಳನ್ನು ತೆರೆದಿರುವುದರಿಂದ ನಿತ್ಯ ಸರಾಸರಿ 150 ರಿಂದ 200 ಪಾಸ್ಗಳನ್ನು ಮಾತ್ರ ನವೀಕರಣ ಮಾಡಲಾಗುತ್ತಿದೆ. ಎನ್ಡಬ್ಲ್ಯೂಕೆಆರ್ಟಿಸಿ ಸಿಬ್ಬಂದಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿಯೂ ಒಂದು ಗಂಟೆ ಊಟದ ವಿರಾಮ ಎಂದು ಕಾಲ ಕಳೆಯುತ್ತಿದ್ದಾರೆ.
ಪೊಲೀಸ್ ದರ್ಬಾರ್: ಬಸ್ ಪಾಸ್ಗಳ ನವೀಕರಣಕ್ಕಾಗಿ ಕೌಂಟರ್ ಬಳಿ ಕಾದು ನಿಂತಿದ್ದ ನೂರಾರು ವಿದ್ಯಾರ್ಥಿಗಳು ಸಹನೆ ಕಳೆದುಕೊಂಡಿದ್ದರ ಪರಿಣಾಮ ಉಂಟಾದ ಗಲಾಟೆ ವೇಳೆ ಪೊಲೀಸರು ವಿದ್ಯಾರ್ಥಿಗಳತ್ತ ಲಾಠಿ ಬೀಸಿದ್ದಾರೆ. ವಿದ್ಯಾರ್ಥಿಗಳ ಗಲಾಟೆ ಆಗುತ್ತಿರುವ ಅನಾನೂಕೂಲದಿಂದ ಕೊನೆಗೂ ಎಚ್ಚೆತ್ತುಕೊಂಡಿರುವ ಎನ್ಡಬ್ಲ್ಯೂಕೆಆರ್ಟಿಸಿ ಗುರುವಾರದಿಂದ ಒಟ್ಟು ಆರು ಕೌಂಟರ್ಗಳನ್ನು ತೆಗೆದು ವಿದ್ಯಾರ್ಥಿಗಳ ಪಾಸ್ಗಳನ್ನು ನವೀಕರಣ ಪ್ರಕ್ರಿಯೆಗೆ ವೇಗ ನೀಡುವುದಕ್ಕೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದೆ.
ಎರಡೇ ಕೌಂಟರ್
ಈಗಾಗಲೇ ಪದವಿ ಪರೀಕ್ಷೆಗಳು ಆರಂಭವಾಗಿದ್ದು, ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಿಕ್ಕಾಗದೇ ಕೌಂಟರ್ ಎದುರು ವಿದ್ಯಾರ್ಥಿಗಳು ಸಾಲಿನಲ್ಲಿ ನಿಲ್ಲುವಂತಾಗಿದೆ. ಆದರೆ ಇಲ್ಲಿ ನೋಡಿದರೆ ನೂರಾರು ವಿದ್ಯಾರ್ಥಿಗಳಿಗೆ ಕೇವಲ ಎರಡು ಕೌಂಟರ್ ತೆರೆಯುವ ಮೂಲಕ ಸಮಸ್ಯೆ ಬಿಗಡಾಯಿಸಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವುದಕ್ಕೆ ಆರು ಕೌಂಟರ್ಗಳನ್ನು ತೆರೆಯುತ್ತೇವೆ ಎಂದು ಅಧಿಕಾರಿಗಳು ಇದೀಗ ಹೇಳಿದ್ದಾರೆ.
- ಮನೋಹರ ಜಮಾದಾರ
ಎಬಿವಿಪಿ ಕಾರ್ಯಕರ್ತ