ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಿಮ್ಸ್‌ನಲ್ಲಿ ಅಪಹರಣಕ್ಕೆಒಳಗಾಗಿದ್ದ ಮಗು ಪತ್ತೆ

Vishwanath S
Updated On : 2 Feb 2014, 12:08 pm

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 1
ಕಿಮ್ಸ್ ಆವರಣದಲ್ಲಿ ಜ. 14ರಂದು ನಡೆದಿದ್ದ ಮಗು ಅಪಹರಣ ಪ್ರಕರಣವನ್ನು ಭೇದಿಸಿರುವ ವಿದ್ಯಾನಗರ ಪೊಲೀಸರು ಮಗುವನ್ನು ತಾಯಿಯ ಮಡಿಲು ಸೇರುವಲ್ಲಿ ಯಶಸ್ವಿಯಾಗಿದ್ದಾರೆ.
3 ತಿಂಗಳ ಹಸುಳೆ ದೀಪಾಳನ್ನು ಮೂವರು ಖದೀಮರು ಕಿಮ್ಸ್ ಆವರಣದಿಂದ ಅಪಹರಿಸಿ ಬೆಳಗಾವಿಯ ಪುಷ್ಪಾ ಎಂಬವರಿಗೆ ಮಾರಿದ್ದರು. ಇದೀಗ ಈ ಮೂವರಾದ ಬಾಣತಿಕಟ್ಟಾ ನಿವಾಸಿ ಲತೀಫ್ ಕಾಟೇವಾಡಿ, ಕೌಲಪೇಟೆಯ ಮೈನುದ್ದೀನ ಹಾಗೂ ಧಾರವಾಡದ ಆಸೀಫ್ ಅಹ್ಮದ ಮುಲ್ಲಾ ಪೊಲೀಸರ ಅತಿಥಿಯಾಗಿದ್ದಾರೆ.
ಪ್ರಕರಣದ ವಿವರ: ಮೂಲತಃ ಕುಷ್ಟಗಿ ತಾಲೂಕಿನ ತಾವರಗೇರೆ ಗ್ರಾಮದವರಾದ ದೀಪಾಳ ತಾಯಿ ಸರಸ್ವತಿ ಅನಾರೋಗ್ಯ ನಿಮಿತ್ತ ಕಿಮ್ಸ್‌ಗೆ ದಾಖಲಾಗಿದ್ದರು. ಈ ವೇಳೆ ಸರಸ್ವತಿಯ ಅತ್ತೆ ಮಲ್ಲಮ್ಮ ಮಗು ದೀಪಾ ಅಳುತ್ತಿದೆ ಎಂದು ನೀರು ಕುಡಿಸಲು ಕಿಮ್ಸ್ ಆವರಣದಲ್ಲಿರುವ ಹಣ್ಣಿನ ಅಂಗಡಿಯ ಬಳಿ ಕರೆದುಕೊಂಡು ಬಂದಿದ್ದರು.
ವೃದ್ಧೆ ಮಲ್ಲಮ್ಮನ ತೋಳಲ್ಲಿ ಇದ್ದ ಕೂಸು ನೋಡಿದಾಗ ಈ ಮೂವರು ಖದೀಮರ ಪೈಕಿ ಮೈನುದ್ದೀನ, ಮಲ್ಲಮ್ಮಳೊಂದಿಗೆ ನಯವಾಗಿ ಮಾತನಾಡಿ ದೀಪಾಳನ್ನು ಅಪರಿಸಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ವಿದ್ಯಾನಗರ ಪೊಲೀಸರು ತನಿಖೆ ಕೈಗೊಂಡಿದ್ದರು.
ರು. 75 ಸಾವಿರಕ್ಕೆ ಮಾರಾಟ
ದೀಪಾಳನ್ನು ಅಪಹರಿಸಿದ್ದ ಈ ಮೂವರೂ ಖದೀಮರು ಆಕೆಯನ್ನು ಬೆಳಗಾವಿಯ ಪುಷ್ಪಾ ಎಂಬುವವರಿಗೆ ರು. 75 ಸಾವಿರಕ್ಕೆ ಮಾರಾಟ ಮಾಡಿದ್ದರು. ಮಗುವಿಲ್ಲದ ಪುಷ್ಪಾ ಆಗಾಗ ಹುಬ್ಬಳ್ಳಿಯ ಬಾಲಕೇಂದ್ರಕ್ಕೆ ಬಂದು ಮಗುವನ್ನು ದತ್ತು ಪಡೆದುಕೊಳ್ಳಲು ಯತ್ನಿಸುತ್ತಿದ್ದಳು. ಒಂದೊಮ್ಮೆ ಆಟೋದಲ್ಲಿ ಹೊರಟಾಗ ಪುಷ್ಪಾ ಆಟೋ ಚಾಲಕ ಮೈನುದ್ದೀನ ಬಳಿ ಈ ಬಗ್ಗೆ ಪ್ರಸ್ತಾಪಿಸಿದ್ದರು. ಈ ಸಂದರ್ಭದಲ್ಲಿ ಮೈನುದ್ದೀನ, ಪುಷ್ಪಾ ಅವರ ಮೊಬೈಲ್ ಸಂಖ್ಯೆ ಪಡೆದಿದ್ದನ್ನಲ್ಲದೇ, ಯಾವುದಾದರೂ ಮಗು ಸಿಕ್ಕರೆ ಮಾಹಿತಿ ನೀಡುವುದಾಗಿ ತಿಳಿಸಿದ್ದ. ಹಣದ ಆಸೆಗಾಗಿ ಮೈನುದ್ದೀನ, ಆಸೀಫ್ ಹಾಗೂ ಲತೀಫ್ ಮಗು ಅಪಹರಿಸುವ ಪ್ಲಾನ್ ಹಾಕಿದ್ದಾರೆ. ಪ್ಲಾನ್ ಯಶಸ್ವಿಯಾಗಿ ದೀಪಾಳನ್ನು ಅಪಹರಿಸಿದ್ದಾರೆ. ಬಳಿಕ ದೀಪಾಳನ್ನು ಮಾರಾಟ ಮಾಡಿದ್ದಾರೆ. ಆದರೆ ದೀಪಾ ತನ್ನ ಸಂಬಂಧಿಕರ ಮಗಳು ಎಂದು ಪುಷ್ಪಾಗೆ ಸುಳ್ಳ ಮಾಹಿತಿ ನೀಡಿದ್ದಾರೆ. ಮಲ್ಲಮ್ಮ ನೀಡಿದ್ದ ಮಾಹಿತಿಯನ್ನಾಧರಿಸಿ ಅಪಹರಣಕಾರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶುಕ್ರವಾರ ಸಂಜೆ ಮಹಾನಗರ ಪೊಲೀಸ್ ಆಯುಕ್ತ ರವೀಂದ್ರ ಪ್ರಸಾದ, ದೀಪಾಳನ್ನು ಆಕೆಯ ಪಾಲಕರಿಗೆ ಹಸ್ತಾಂತರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement