ಸರ್ಕಾರದ್ದು ಹೇಡಿತನದ ವರ್ತನೆ
ಹುಬ್ಬಳ್ಳಿ: ದೇಶದಲ್ಲಿ ಭಯೋತ್ಪಾದಕ ಕೃತ್ಯ, ಭ್ರಷ್ಟಾಚಾರ, ಅತ್ಯಾಚಾರ, ಅನಾಚಾರ, ದೌರ್ಜನ್ಯ ತಾರಕಕ್ಕೇರಿದೆ. ಇದಕ್ಕೆ ತಕ್ಕ ಉತ್ತರ ನೀಡಬೇಕಾದ ಸರ್ಕಾರ ನಪುಂಸಕನಂತೆ ವರ್ತಿಸುತ್ತಿದೆ ಎಂದು ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀಹರಿ ಬೋರಿಕರ್ ಹೇಳಿದರು.
ಇಲ್ಲಿನ ಮೂರುಸಾವಿರ ಮಠದ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಯುತ್ತಿದ್ದರೂ ಸರ್ಕಾರ ಬಾಯಿ ಮುಚ್ಚಿಕೊಂಡು ಕುಳಿತಿರುವುದು ನಮ್ಮ ದೌರ್ಭಾಗ್ಯ. ಚಂದ್ರಶೇಖರ ಆಜಾದ್ರ ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ ಆಕೆ ಚಿಕಿತ್ಸೆ ಕೊಡಲು ಅವರ ಬಳಿ ಹಣವಿರಲಿಲ್ಲ. ಆಗ ಸಮಾಜ ಕಾರ್ಯಕ್ಕೆ ಸಂಗ್ರಹಿಸಿದ ಹಣದಿಂದ ತಾಯಿಗೆ ಚಿಕಿತ್ಸೆ ನೀಡುವಂತೆ ಸಹಪಾಠಿಗಳು ಸಲಹೆ ನೀಡಿದರೂ ತಾಯಿಯನ್ನು ಕಳೆದುಕೊಳ್ಳಲು ಸಿದ್ಧನಿದ್ದೇನೇ ಹೊರತು ಸಮಾಜದ ಹಣ ಸ್ವಂತಕ್ಕೆ ಬಳಸಲಾರೆ ಎಂದಿದ್ದರು. ಇಂಥ ಭೂಮಿ ಇದೀಗ ಭ್ರಷ್ಟಾಚಾರದ ಮೂಲಕ ಗುರುತಿಸಿಕೊಳ್ಳುವಂತಾಗಿರುವುದು ದುರಂತ. ಸರ್ಕಾರಕ್ಕೆ ದೇಶ ರಕ್ಷಣೆಗಿಂತ ಭ್ರಷ್ಟಾಚಾರವೇ ಮುಖ್ಯವಾಗಿದೆ. ಭ್ರಷ್ಟಾಚಾರ ಎಸಗಿ ಹಣ ಮುಕ್ಕುವ ಸ್ಪರ್ಧೆಯೇ ನಡೆದಿದೆ. ಆದರ್ಶ ಸೊಸೈಟಿಯಲ್ಲಿ ರು. 68 ಸಾವಿರ ಕೋಟಿಯ ಅವ್ಯವಹಾರ ನಡೆದರೆ, ಕಾಮನವೆಲ್ತ್ ಕ್ರೀಡಾಕೂಟದಲ್ಲಿ ರು. 78 ಸಾವಿರ ಕೋಟಿ, 2ಜಿ ತರಂಗಾಂತರ ಹಗರಣದಲ್ಲಿ ರು. 1.78 ಸಾವಿರ ಕೋಟಿ ಭ್ರಷ್ಟಾಚಾರ, ಕಲ್ಲಿದ್ದಲ್ಲು ಹಗರಣದಲ್ಲಿ ಮನಮೋಹನ್ ಸಿಂಗ್ ಆ್ಯಂಡ್ ಕಂಪನಿ 1.86 ಸಾವಿರ ಕೋಟಿ ಕಾಂಗ್ರೆಸ್ ನುಂಗಿದೆ. ಇದರ ವಿರುದ್ಧ ಧ್ವನಿ ಎತ್ತಿದ ದುರ್ಗಾಶಕ್ತಿ ನಾಗಪಾಲ್ ಅವರಂಥ ಅಧಿಕಾರಿಗಳನ್ನು ಹೊಸಕಿ ಹಾಕುವ ಯತ್ನ ಈ ಸರ್ಕಾರದಿಂದ ನಡೆಯುತ್ತಿದೆ. ಗಡಿ ಪ್ರದೇಶದಲ್ಲಿ ನೆರೆ ರಾಷ್ಟ್ರಗಳ ನುಸುಳುವಿಕೆ ಹೆಚ್ಚುತ್ತಿದೆ. ನಮ್ಮ ಸೈನಿಕರನ್ನು ಕೊಲ್ಲಲಾಗುತ್ತಿದೆ. ಇದಕ್ಕೆ ತಕ್ಕ ಉತ್ತರ ನೀಡಬೇಕಾದ ನಮ್ಮ ಸರ್ಕಾರ ಶತ್ರು ರಾಷ್ಟ್ರಗಳೊಂದಿಗೆ ಗೆಳೆತನ ಬೆಳೆಸುತ್ತಿದೆ. ಶತ್ರು ರಾಷ್ಟ್ರಗಳಿಗೆ ತಕ್ಕ ಉತ್ತರ ನೀಡುವ ತಾಕತ್ತು ಭಾರತಕ್ಕಿದ್ದರೂ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಮತಕ್ಕಾಗಿ ದೇಶ ಬಲಿ ನೀಡುತ್ತಿದೆ. ಈ ಆಡಳಿತ ಅವ್ಯವಸ್ಥೆ ಸರಿಪಡಿಸಲು ಪ್ರಖರ ರಾಷ್ಟ್ರವಾದಿಗಳ ಕೈಗೆ ಅಧಿಕಾರ ನೀಡಲು ಯುವಕರು ಮುಂದಾಗಬೇಕು ಎಂದರು.
ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ವಿನಯ ಬಿದರೆ, ನಮ್ಮನ್ನಾಳುವವರ ಅರಾಜಕತೆ, ಅನೀತಿಯಿಂದಾಗಿ ದೇಶದಲ್ಲಿ ಸಮಸ್ಯೆಗಳು ತಲೆದೂರಿವೆ. ಅಲ್ಪಸಂಖ್ಯಾತರ ತುಷ್ಟೀಕರಣಕ್ಕಿಳಿದಿರುವ ಸರ್ಕಾರ ದೇಶದ ಹಿತ ಮರೆತಿದೆ. ಕೇಂದ್ರ ಗೃಹ ಸಚಿವ ಸುಶೀಲಕುಮಾರ ಶಿಂದೆ, ಮುಸ್ಲಿಂ ಯುವಕರನ್ನು ಬಂಧಿಸಬಾರದು ಎನ್ನುತ್ತಿದ್ದಾರೆ. ಸ್ವಾಮೀಜಿಗಳನ್ನು ಕೇಸರಿ ಟೆರರಿಸ್ಟ್ಗಳೆಂದು ಹೀಗಳೆಯುತ್ತಿದ್ದಾರೆ. ಇದು ನೀಚತನದ ಪರಮಾವಧಿ. ಈ ತುಷ್ಟೀಕರಣ ನೀತಿ ಬಹಳ ದಿನ ಬಾಳದು. ಇಂಥ ಅವ್ಯವಸ್ಥೆಯ ಆಡಳಿತವನ್ನು ಸುಮ್ಮನೇ ನೋಡುತ್ತ ಕುಳಿತುಕೊಳ್ಳುವುದಿಲ್ಲ. ಎಬಿವಿಪಿ ಸಮವಸ್ತ್ರವಿಲ್ಲದ ಸೈನಿಕನಾಗಿ ಸಮಾಜ ಕಟ್ಟುವ, ಕಾಯುವ ಕೆಲಸ ಮಾಡಲಿದೆ ಎಂದರು.
ಎಬಿವಿಪಿ ಪ್ರಾಂತ ಕಾರ್ಯದರ್ಶಿ ಟಿ. ಎಸ್. ಸುನೀಲಕುಮಾರ, ದೇಶಕ್ಕೆ ಗಂಡಾಂತರ ಎದುರಾದಾಗ, ದೇಶದ ಗೌರವಕ್ಕೆ ಚ್ಯುತಿ ಬಂದಾಗ, ವಿದ್ಯಾರ್ಥಿಗಳ ಹಿತ ಕಡೆಗಣಿಸಿದಾಗ ಎಬಿವಿಪಿ ಹೋರಾಟ ಮಾಡಿದೆ. ರಾಜ್ಯ ಸರ್ಕಾರ 2006ರ ಸಿಇಟಿ ಕಾಯ್ದೆ ಜಾರಿಗೆ ತರಲು ಹೊರಟಾಗ ಅದರ ವಿರುದ್ಧ ಹೋರಾಟ ಮಾಡಿ ಯಶಸ್ವಿಯಾಗಿದೆ. ತನ್ಮೂಲಕ ವಿದ್ಯಾರ್ಥಿ ಸಮೂಹದಲ್ಲಿ ಮನೆ ಮಾಡಿದೆ ಎಂದರು.
ಜಾತಿ ವಿಷ ಬೀಜ ಬಿತ್ತಿ ಅಧಿಕಾರಕ್ಕೆ ಬಂದ ಕೇಂದ್ರ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ, ಭ್ರಷ್ಟಾಚಾರ, ಭಯೋತ್ಪಾದನೆಗೆ ಸಹಕಾರ ನೀಡುತ್ತಿದೆ. ಇದರ ವಿರುದ್ಧ ಎಬಿವಿಪಿ ಮುಂಬರುವ ದಿನಗಳಲ್ಲಿ ಬೃಹತ್ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದರು.
ಪ್ರಾಂತ ಅಧ್ಯಕ್ಷ ರಾಮಚಂದ್ರ ಶೆಟ್ಟಿ, ವೀರೇಶ ಬಾಳಿಕಾಯಿ, ವಿದ್ಯಾರ್ಥಿ ಮುಖಂಡರಾದ ನರೇಶ, ನಬಿ ನದಾಫ, ಅಶ್ವಿನಿ, ಭಾಗ್ಯ ಪಾಲ್ಗೊಂಡಿದ್ದರು. ಎಬಿವಿಪಿ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.