ಮನೋಜ್ ಜ್ಯುವೆಲ್ಲರಿ ಮಾಲೀಕ ನಿಗೂಢ ಸಾವು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 3
ನಗರದ ಪ್ರತಿಷ್ಠಿತ ಜ್ಯುವೇಲರಿ ಮಾಲೀಕರೊಬ್ಬರು ನಿಗೂಢ ರೀತಿಯಲ್ಲಿ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ಉಣಕಲ್ ಹತ್ತಿರದ ರೇಲ್ವೆ ಹಳಿ ಪಕ್ಕದಲ್ಲಿ ಸಂಭವಿಸಿದೆ.
ಕೊಪ್ಪಿಕರ ರಸ್ತೆಯ ಮನೋಜ್ ಜ್ಯುವೇಲರಿ ಮಾಲೀಕ, ಅರಿಹಂತನಗರ ನಿವಾಸಿ ಜಯಂತಿಲಾಲ್ ತೆಲೀಸರಾ (51) ಎಂಬುವರೇ ಮೃತಪಟ್ಟ ದುರ್ದೈವಿ.
ಬೆಳಗ್ಗೆ ದೇವಸ್ಥಾನಕ್ಕೆ ತೆರಳುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ ಮನೋಜ್, 9:30ರ ಸುಮಾರಿಗೆ ಹೆಣವಾಗಿ ಪತ್ತೆಯಾಗಿದ್ದಾರೆ. ಮೃತನ ತಲೆಗೆ ಗಂಭೀರ ಗಾಯವಾಗಿದೆ ಮತ್ತು ಎಡಗೈ ದೇಹದಿಂದ ಬೇರ್ಪಟ್ಟು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅನುಮಾನದ ಹುತ್ತ...: ಸ್ವಿಫ್ಟ್ ಡಿಸೈರ್ (ಕೆಎ-25, ಝಡ್ 2777) ಕಾರಿನಲ್ಲಿ ದೇವಸ್ಥಾನಕ್ಕೆ ತೆರಳಿದ್ದ ಜಯಂತಿಲಾಲ್, ಉಣಕಲ್ ರೇಲ್ವೆ ಹಳಿಯ ಹತ್ತಿರ ವಾಹನ ನಿಲ್ಲಿಸಿ ಕೆಳಗೆ ಇಳಿದಿದ್ದು ಯಾವ ಕಾರಣಕ್ಕೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಪೊಲೀಸರನ್ನು ಕಾಡತೊಡಗಿದೆ.
ಅಲ್ಲದೇ, ಆ ಸಂದರ್ಭದಲ್ಲಿ ಹಳಿಯ ಮೇಲೆ ಯಾವುದೇ ರೈಲು ಸಂಚರಿಸುತ್ತಿದ್ದರೂ ಪ್ರಾಣ ರಕ್ಷಿಸಿಕೊಳ್ಳಲು ಆಗದಂತಹ ಸನ್ನಿವೇಶ ಏನಿತ್ತು ಎಂಬಿತ್ಯಾದಿ ಪ್ರಶ್ನೆಗಳು ಜಯಂತಿಲಾಲ್ನ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಅನುಮಾನ ಸೃಷ್ಟಿಸಿವೆ.
ಬ್ಯಾಡ್ಮಿಂಟನ್ ಕಿಟ್: ಮೃತರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಷಟಲ್ ಬ್ಯಾಡ್ಮಿಂಟನ್ ಕಿಟ್ ಮಾತ್ರ ಪತ್ತೆಯಾಗಿದೆ. ಮೊಬೈಲ್ ಫೋನ್ ಮನೆಯಲ್ಲೇ ಬಿಟ್ಟು ದೇವಸ್ಥಾನಕ್ಕೆ ಜಯಂತಿಲಾಲ್ ತೆರಳಿದ್ದರು ಎಂದು ಮೃತನ ಕುಟುಂಬದ ಮೂಲಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಂಬಂಧವಿಲ್ಲ!: ಹಣದಾಸೆಗಾಗಿ ಇತ್ತೀಚೆಗಷ್ಟೇ ನಗರದ ಪ್ರತಿಷ್ಠಿತ ವ್ಯಾಪಾರಿಗಳಿಬ್ಬರ ಮಕ್ಕಳನ್ನು ವಿಕ್ಕಿ ಪೂಜಾರಿ ಗ್ಯಾಂಗ್ ಅಪಹರಿಸಿದ್ದ ಪ್ರಕರಣವನ್ನು ಮಹಾನಗರ ಪೊಲೀಸರು ಭೇದಿಸಿದ್ದು ನಾಲ್ವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಅಪಹರಣಕ್ಕೊಳಗಾದ ಇಬ್ಬರು ಯುವಕರ ಪೈಕಿ ರೀಶಬ್ ತೆಲೀಸರಾ ಸಹಾ ಒಬ್ಬನಾಗಿದ್ದ ಎಂಬುದನ್ನು ಇಲ್ಲಿ ಸ್ಮರಿಸಬಹುದು. ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ಜಯಂತಿಲಾಲ್ ತೆಲೀಸರಾ ಕುಟುಂಬಕ್ಕೂ ಹಾಗೂ ಅಪಹರಣಕ್ಕೊಳಗಾದ ರೀಶಬ್ನ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಪ್ರಾಥಮಿಕ ತನಿಖೆಯಿಂದ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ಎರಡು ರೈಲುಗಳು: ಬೆಳಗ್ಗೆ 8:30ರಿಂದ 9:30ರ ಮಧ್ಯೆ ಎರಡು ರೈಲುಗಳು ಸಂಚರಿಸಿದ್ದು, ಈ ಪೈಕಿ ಯಾವ ರೈಲಿಗೆ ಜಯಂತಿಲಾಲ್ ಆಕಸ್ಮಿಕವಾಗಿ ಸಿಲುಕಿ ಸಾವನ್ನಪ್ಪಿದ್ದಾರೋ, ಯಾರಾದರೂ ಬಲವಂತವಾಗಿ ಅವರನ್ನು ರೈಲಿಗೆ ತಲೆವೊಡ್ಡುವಂತೆ ಮಾಡಿದ್ದರೋ ಎಂಬ ಎಲ್ಲ ಪ್ರಶ್ನೆಗಳಿಗೆ ಪೊಲೀಸ್ ವಿಚಾರಣೆಯ ನಂತರವಷ್ಟೇ ಸತ್ಯಾಂಶ ಹೊರಬೀಳಲಿದೆ.
ಜಯಂತಿಲಾಲ್ ತೆಲೀಸಾರ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯಾಗಿರಲಿಲ್ಲ ಎಂದು ಆತನ ಸಂಬಂಧಿಕರು ಹೇಳಿಕೆ ನೀಡಿದ್ದರಿಂದ ಇದು ಕೊಲೆ ಆಗಿರಬಹುದೇ ಎಂಬ ಅನುಮಾನಕ್ಕೆ ಮತ್ತಷ್ಟು ಇಂಬು ನೀಡಿದಂತಿದೆ. ಸುದ್ದಿ ತಿಳಿಯುತ್ತಿದಂತೆಯೇ ಘಟನಾ ಸ್ಥಳಕ್ಕೆ ತೆರಳಿದ್ದ ಅನೇಕ ಗಣ್ಯರು ಸಹ ಇದೊಂದು ಕೊಲೆ ಆಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದರು.
ರೇಲ್ವೆ ಪೊಲೀಸರ ಭೇಟಿ: ಸುದ್ದಿ ತಿಳಿಯುತ್ತಿದಂತೆ ರೇಲ್ವೆ ಠಾಣೆ ಇನ್ಸ್ಪೆಕ್ಟರ್ ಪುಟ್ಟಸ್ವಾಮಿ ಸಿಬ್ಬಂದಿಯೊಂದಿಗೆ ತೆರಳಿ ಪರಿಶೀಲನೆ ನಡೆಸಿದರಲ್ಲದೆ, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಿಮ್ಸ್ ಶವಾಗಾರಕ್ಕೆ ಸಾಗಿಸಿದ್ದಾರೆ.
ಮೇಲ್ನೋಟಕ್ಕೆ ಇದೊಂದು ಕೊಲೆಯೇ ಆಗಿರಬಹುದೆಂಬ ಸಂಶಯ ಪೊಲೀಸರು ಬಲವಾಗಿ ಕಾಡುತ್ತಿದೆಯಾದರೂ, ಜಯಂತಿಲಾಲ್ ಮನೆಯಿಂದ ಹೊರಗೆ ಬಂದ ನಂತರ ಅವರ ಮೊಬೈಲ್ಗೆ ಬಂದ ಕರೆಗಳು ಯಾವವು ಎಂಬುದೂ ಸೇರಿದಂತೆ ಎಲ್ಲ ಮಾಹಿತಿಗಳನ್ನು ಕಲೆ ಹಾಕಿದ ನಂತರವಷ್ಟೇ ಸತ್ಯಾಂಶ ಹೊರ ಬೀಳಲಿದೆ. ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.