ಆಮ್ ಆದ್ಮಿ ಪಾರ್ಟಿನಕ್ಸಲೈಟ್ ಗುಂಪಿದ್ದಂತೆ
ಹುಬ್ಬಳ್ಳಿ: ಆಮ್ ಆದ್ಮಿ ಪಾರ್ಟಿ ನಕ್ಸಲೈಟ್ ಗುಂಪಿದ್ದಂತೆ. ಆಮ್ ಆದ್ಮಿಯ ಹಲವಾರು ಮುಖಂಡರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ ಎಂದು ರಾಜ್ಯಸಭೆ ಸದಸ್ಯ ಡಾ. ಎಂ. ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಮ್ ಆದ್ಮಿ ಮಧ್ಯಮ ವರ್ಗದ ವಿಶ್ವಾಸ ಕಳೆದುಕೊಂಡಿದೆ. ದಿನದಿಂದ ದಿನಕ್ಕೆ ಆಮ್ ಆದ್ಮಿ ಸಚಿವರ ಹಗರಣಗಳು ಬಯಲಾಗುತ್ತಿವೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಗೆ ಪ್ರಧಾನಿ ಅಭ್ಯರ್ಥಿಯೆಂದು ಗುರುತಿಸಿಕೊಳ್ಳುವ ನೈತಿಕ ಹಕ್ಕಿಲ್ಲ. ರಾಹುಲ್ ಮೂಲತಃ ಭಾರತೀಯನೇ ಅಲ್ಲ. ಆತ ಇಟಾಲಿಯನ್. ಭಾರತ ಸಂಸ್ಕೃತಿ ಬಗ್ಗೆ ಅರಿವಿಲ್ಲದ ರಾಹುಲ್ಗೆ ಭಾರತೀಯನೆಂದು ಹೇಳಿಕೊಳ್ಳುವ ಹಕ್ಕಿಲ್ಲ. ದೇಶಕ್ಕೆ ತೃತೀಯ ರಂಗದ ಅಗತ್ಯವಿಲ್ಲ. ತೃತೀಯ ರಂಗದ ಪಕ್ಷಗಳು ಪ್ರಾದೇಶಿಕ ರಾಜಕಾರಣಕ್ಕೆ ಮೀಸಲು. ಇವುಗಳಿಂದ ಕೇಂದ್ರದಲ್ಲಿ ಸರ್ಕಾರ ರಚಿಸುವುದು ಅಸಾಧ್ಯ. ತೃತೀಯ ರಂಗಕ್ಕೆ ಭವಿಷ್ಯವಿಲ್ಲ. ತೃತೀಯ ರಂಗದಲ್ಲಿರುವ ತಮಿಳುನಾಡು ಸಿಎಂ ಜಯಲಲಿತಾ ಸೇರಿ ಪ್ರತಿಯೊಬ್ಬರೂ ಪ್ರಧಾನಿ ಅಭ್ಯರ್ಥಿಗಳು ಎಂದರು.
ಕೇಂದ್ರ ಸಚಿವ ಶಶಿ ತರೂರ ಪತ್ನಿ ಸುನಂದಾ ಪುಷ್ಕರ ಸಾವಿನ ತನಿಖೆಯನ್ನು ವಿಶೇಷ ತನಿಖಾ ದಳ (ಎಸ್ಐಟಿ)ಕ್ಕೆ ವಹಿಸಬೇಕು. ಸುನಂದಾ ಸಾವು ಸಹಜವಲ್ಲ. ಆಕೆ ದೇಹದಲ್ಲಿ ಹೊಡೆತದ ಕುರುಹುಗಳಿದ್ದವು, ಗಂಭೀರ ಗಾಯಗಳಾಗಿದ್ದವು. ಇದೇ ಕಾರಣಕ್ಕೆ ಅವಸರದಲ್ಲಿ ಸುನಂದಾ ಪುಷ್ಕರ ಅಂತ್ಯಕ್ರಿಯೆ ನಡೆಯಿತು. ಸುನಂದಾ ಸಾವಿನ ಹಿಂದೆ ಪಾಕಿಸ್ತಾನ, ದುಬೈ, ದಕ್ಷಿಣ ಆಫ್ರಿಕಾ ದೇಶಗಳ ಕೈವಾಡ ಇರುವ ಶಂಕೆ ಇದೆ. ಈ ಸಾವಿನ ತನಿಖೆಯನ್ನು ಮತ್ತೊಮ್ಮೆ ಪರಿಣಾಮಕಾರಿಯಾಗಿ ನಡೆಸಿ, ಪ್ರಥಮ ತನಿಖಾ ವರದಿ ಮರುದಾಖಲಿಸುವಂತೆ ಕೇಂದ್ರವನ್ನು ಒತ್ತಾಯಿಸಿದರು. ದೇಶದ ಆರ್ಥಿಕ ವ್ಯವಸ್ಥೆ ಕುಸಿಯಲು ಹಣಕಾಸು ಸಚಿವ ಪಿ. ಚಿದಂಬರಂ ಕಾರಣ. ಶೇರು ಮಾರುಕಟ್ಟೆ ದಿವಾಳಿಗೆ ಎದ್ದಿದೆ. ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿನ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಕೃಷಿ ಉತ್ಪಾದನೆ ಬೆಲೆ ಏರಿಕೆ ಆಗದೆ ಏರಿಳಿತ ಕಾಣುತ್ತಿದೆ. ಹೀಗಾಗಿ ಬೆಲೆಯಲ್ಲಿಯೂ ಏರಿಕೆಯಾಗುತ್ತಿದೆ ಎಂದರು.
ಪ್ರಹ್ಲಾದ ಜೋಶಿ, ವೀರಭದ್ರಪ್ಪ ಹಾಲಹರವಿ, ಮೋಹನ ಲಿಂಬಿಕಾಯಿ, ಲಿಂಗರಾಜ ಪಾಟೀಲ, ಎಂ.ಆರ್. ಪಾಟೀಲ ಮತ್ತಿತರರು ಇದ್ದರು.