ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಏಕ ಕುಟುಂಬ ಆಧಿಪತ್ಯದ ಪ್ರಧಾನಿ ಭಾರತಕ್ಕೆ ಬೇಕಿಲ್ಲ

Rashmi Kasaragodu
Updated On : 11 Feb 2014, 11:26 am

ಧಾರವಾಡ: ಪ್ರಸ್ತುತ ದೇಶದ ಸಾರ್ವತ್ರಿಕ ಚುನಾವಣೆಗಳಲ್ಲಿ ಮತ ಚಲಾಯಿಸಲು ಬಳಸುತ್ತಿರುವ ವಿದ್ಯುನ್ಮಾನ ಮತ ಯಂತ್ರಗಳಲ್ಲಿ ದೋಷವಿದ್ದು, ಈ ಕುರಿತಾಗಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೇನೆ ಎಂದು ಖ್ಯಾತ ಚಿಂತಕ, ಕೇಂದ್ರದ ಮಾಜಿ ಸಚಿವ ಡಾ. ಸುಬ್ರಮಣಿಯನ್ ಸ್ವಾಮಿ ಹೇಳಿದರು.
ಈ ದೋಷದಿಂದ ಮತಗಳಲ್ಲಿ ಹೆಚ್ಚು-ಕಡಿಮೆಯಾಗುವ ಸಾಧ್ಯತೆ ಇದೆ. ಆದ್ದರಿಂದ ದೋಷಗಳನ್ನು ನಿವಾರಿಸಿ ನಂತರ ಆ ಯಂತ್ರಗಳನ್ನು ಚುನಾವಣೆಯಲ್ಲಿ ಬಳಸಬೇಕೆಂದೂ ಕೆಲ ಸಲಹೆಗಳನ್ನು ಸುಪ್ರೀಂ ಕೋರ್ಟ್ಗೆ ನೀಡಿದ್ದೇನೆ. ಈ ಕಾರಣದಿಂದಲೇ ಕಳೆದ ಬಾರಿ ಚುನಾವಣೆಯಲ್ಲಿ ನಾನೂ ಸ್ಪರ್ಧಿಸಲಿಲ್ಲ. ಈ ಯಂತ್ರ ಶೋಧನೆ ಮಾಡಿದ ದೇಶಗಳೂ ಮತಪತ್ರಗಳನ್ನು ಬಳಸುತ್ತಿವೆ. ಯಾವ ದೇಶಗಳಲ್ಲಿ ಬಲಿಷ್ಠ ಪ್ರಜಾಪ್ರಭುತ್ವ ಇಲ್ಲವೋ (ಭಾರತ, ಭೂತಾನ, ನೈಜಿರಿಯಾ) ಅಂತಹ ದೇಶಗಳು ಮತಯಂತ್ರಗಳನ್ನು ಬಳಸುತ್ತಿದ್ದು, ಬಲಿಷ್ಠ ಪ್ರಜಾಪ್ರಭುತ್ವ ಇರುವ ದೇಶಗಳು (ಜಪಾನ, ಇಂಗ್ಲೆಂಡ್, ಜರ್ಮನಿ, ಹಾಲೆಂಡ್ ಇತರೆ) ಮತಪತ್ರಗಳನ್ನೇ ಬಳುಸುತ್ತಿವೆ. ಈ ಹಿನ್ನೆಲೆಯಲ್ಲಿ ಕೆಲ ಸಲಹೆಗಳನ್ನು ನೀಡಿದ್ದೇನೆ ಎಂದು ಸ್ವಾಮಿ ಹೇಳಿದರು.
ದೇಶದ ವರ್ತಮಾನ ಪರಿಸ್ಥಿತಿ ವಿಷಯ ಕುರಿತು ಇಲ್ಲಿಯ ಸೃಜನಾ ರಂಗಮಂದಿರದಲ್ಲಿ ಸೋಮವಾರ ನಡೆದ ಸಂವಾದ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದ ಪ್ರಹ್ಲಾದ ಜೋಶಿ ಅವರ 10 ವರ್ಷಗಳ ಅಭಿವೃದ್ಧಿ ಕುರಿತ ಪ್ರಗತಿ ದರ್ಶನ ಕಿರುಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಆದಾಯ ತೆರಿಗೆ ಇಲ್ಲದೇ ದೇಶವನ್ನು ಮುನ್ನಡೆಸಲು ಸಾಧ್ಯ. ಅದಕ್ಕಾಗಿ ಪಾರದರ್ಶಕ ಆಡಳಿತದ ಅಗತ್ಯವಿದೆ. ಪ್ರಧಾನಿ ಮನಮೋಹನ್ ಸಿಂಗ್ ಅವರಂತಹ ಸ್ವಯಂ ನಿರ್ಧಾರ ತೆಗೆದುಕೊಳ್ಳದವರು ದೇಶವನ್ನು ಹೇಗೆ ಮುನ್ನಡೆಸಲು ಸಾಧ್ಯ? ನಮ್ಮ ಯುವ ಜನತೆಯಲ್ಲಿ ಹೊಸ ಚೈತನ್ಯ ತುಂಬಬೇಕಾಗಿದೆ. ವಿದೇಶಿ ಬ್ಯಾಂಕುಗಳಲ್ಲಿ ನಮ್ಮ ರಾಜಕಾರಣಿಗಳಿಗೆ ಸೇರಿದ ರು. 120 ಲಕ್ಷ ಕೋಟಿ ಕೊಳೆಯುತ್ತಿದೆ. ಆ ಕಪ್ಪುಹಣವನ್ನು ವಾಪಸ್ ತರಿಸಿಕೊಂಡರೆ ಐದು ವರ್ಷ ಕಾಲ ಜನತೆಯ ಮೇಲೆ ಯಾವುದೇ ತೆರಿಗೆ ಹಾಕದೆ ದೇಶವನ್ನು ಅಭಿವೃದ್ಧಿಯಲ್ಲಿ ಮುನ್ನಡೆಸಬಹುದಾಗಿದೆ ಎಂದರು.
ಏಕ ಕುಟುಂಬ ಆಧಿಪತ್ಯ ಹೊಂದಿದ ಪ್ರಧಾನಿ ಭಾರತಕ್ಕೆ ಬೇಕಿಲ್ಲ. ಸಾಮಾನ್ಯ ಕುಟುಂಬ ವರ್ಗದಿಂದ ಶ್ರಮಪಟ್ಟು ಮೇಲೆ ಬಂದ ಕ್ರಿಯಾಶೀಲ ಹಾಗೂ ಧೈರ್ಯವಂತ ವ್ಯಕ್ತಿ ದೇಶದ ಪ್ರಧಾನಿಯಾಗಬೇಕಿದೆ. ಆದ್ದರಿಂದ ಭ್ರಷ್ಟರಿಗೆ ಮತ ಹಾಕಬೇಡಿ. ದೇಸಿ ಉತ್ಪನ್ನಗಳನ್ನೇ ಖರೀದಿಸಿ. ಕುಟುಂಬ ಪ್ರಗತಿಯನ್ನು ಲಕ್ಷ್ಯದಲ್ಲಿಟ್ಟುಕೊಂಡವರನ್ನು ತಿರಸ್ಕರಿಸಿ. ಸರ್ವರ ಕಲ್ಯಾಣವನ್ನೇ ಬಯಸುವವರನ್ನು ಅಂದರೆ ಮೋದಿ ಅವರನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿ. ಸಂವಾದದಲ್ಲಿ ಕೇಳಿ ಬಂದ ಪ್ರಶ್ನೆಗಳಿಗೆ ಉತ್ತರಿಸಿದ ಡಾ. ಸುಬ್ರಮಣಿಯನ್, ತಾವು ಮೂಲತಃ ಜನಸಂಘದಿಂದ ಬಂದವರು. ಅದಕ್ಕಾಗಿ ಮೋದಿ ಪರ ಒಲವು. ಮೋದಿಯವರನ್ನು ಪ್ರಧಾನಿ ಹುದ್ದೆಗೆ ಅಭ್ಯರ್ಥಿ ಎಂದು ಆಯ್ಕೆ ಮಾಡಿದೆ. ಅದಕ್ಕಾಗಿ ಮೋದಿ ಪರ ಧೋರಣೆ ವ್ಯಕ್ತ ಮಾಡುತ್ತಿರುವುದರ ಬಗ್ಗೆಯೂ ಸಮರ್ಥನೆ ಇದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸದ ಪ್ರಹ್ಲಾದ ಜೋಶಿ, ಓರ್ವ ಸಂಸದನಾಗಿ ಕಳೆದ ಹತ್ತು ವರ್ಷಗಳಲ್ಲಿ ಲೋಕಸಭೆಯಲ್ಲಿ ರಾಷ್ಟ್ರ, ರಾಜ್ಯ, ಜಿಲ್ಲೆ ಹಾಗೂ ಕ್ಷೇತ್ರದ ಸಮಸ್ಯೆಗಳ ಕುರಿತು ಸಮರ್ಥವಾಗಿ ವಾದ ಮಂಡಿಸಿದ್ದೇನೆಂಬ ಹೆಮ್ಮೆ ನನಗಿದೆ. ನನ್ನ ಅಧಿಕಾರದ ಅವಧಿಯಲ್ಲಿ 60 ಚರ್ಚೆಗಳಲ್ಲಿ ಭಾಗವಹಿಸಿ ಸಮರ್ಥವಾಗಿ ವಾದ ಮಂಡಿಸಿದ್ದೇನೆ. ಗಮನ ಸೆಳೆಯುವ ಸೂಚನೆ ಮಂಡಿಸಿದ್ದೇನೆ. ಅಲ್ಲದೇ, ಸ್ಥಳೀಯವಾಗಿ ಪ್ರಮುಖ ರಸ್ತೆ, ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೇಲ್ವೆ ನಿಲ್ದಾಣದ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆಗಳಿಗೆ ಅನುದಾನ ಒದಗಿಸಿದ್ದೇನೆ. ಇದೀಗ ಧಾರವಾಡ ರೇಲ್ವೆ ನಿಲ್ದಾಣವನ್ನು ಸೆಟ್ಲೈಟ್ ಸ್ಟೇಶನ್ ಮಾಡುವ ಗುರಿಯೂ ನನ್ನದು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ವೃಷಭೇಂದ್ರ ಸ್ವಾಮಿ, ಸಮಾಜ ದರೋಡೆಗೆ ಒಳಗಾಗಿದೆ. ಕುದಿಯುವ ಗಡಿಗೆಯಂತಾದ ದೇಶದ ಇಂದಿನ ಸ್ಥಿತಿಯಲ್ಲಿ ಪ್ರಹ್ಲಾದ ಜೋಶಿಯಂಥ ಶುದ್ಧ ಹಸ್ತರನ್ನು ಮತ್ತೊಮ್ಮೆ ಲೋಕಸಭೆಗೆ ಆರಿಸಿ ಕಳಿಸುವ ಅವಶ್ಯಕತೆ ಇದೆ ಎಂದರು. ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ಅರವಿಂದ ಬೆಲ್ಲದ, ಡಾ. ಎಸ್.ಆರ್. ರಾಮನಗೌಡರ, ಜಿ.ಜಿ. ದೊಡವಾಡ, ಎನ್.ಎಫ್. ಶಿರಗುಪ್ಪಿ, ಡಾ. ವಿ.ಡಿ.ನೀಲಣ್ಣವರ, ಡಾ. ಕೆ.ಆರ್.ಪಾಟೀಲ, ಎಲ್ಲಪ್ಪ ಗೌಡರು. ಪಂ. ವೆಂಕಟೇಶ ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement