ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕನ್ನಡ ಚಿತ್ರರಂಗಕ್ಕೆ ದಂಡನಾಯಕನ ಕೊರತೆ

Rashmi Kasaragodu
Updated On : 11 Feb 2014, 11:24 am

ಕನ್ನಡಪ್ರಭ ವಾರ್ತೆ, ಧಾರವಾಡ, ಫೆ. 10
ಕನ್ನಡ ಚಿತ್ರರಂಗಕ್ಕೆ ದಂಡ ನಾಯಕನ ದೊಡ್ಡ ಕೊರತೆ ಎದ್ದು ಕಾಣುತ್ತಿದೆ ಎಂದು ಖ್ಯಾತ ಸಿನಿಮಾ ಗೀತ ರಚನೆಕಾರ ಹಂಸಲೇಖ ವಿಷಾದ ವ್ಯಕ್ತಪಡಿಸಿದ್ದಾರೆ.
ಇಲ್ಲಿಯ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು ಸಿನಿಮಾ ನಟರಾದ, ನಂತರದಲ್ಲಿ ರಾಜಕಾರಣಿಗಳಾದ ಅಂಬರೀಷ, ಉಮಾಶ್ರೀ ಸರಿಯಾಗಿ ಸಿನಿಮಾ ತಾರೆಗಳಾಗಿಯೂ ಅಥವಾ ರಾಜಕಾರಣಿಗಳಾಗಿಯೂ ವರ್ತಿಸುತ್ತಿಲ್ಲ. ಹೀಗಾಗಿ ಕನ್ನಡ ಸಿನಿಮಾ ರಂಗಕ್ಕೆ ನಾಯಕತ್ವದ ಕೊರತೆ ಕಾಡುತ್ತಿದೆ. ಅಂಬರೀಷ, ಉಮಾಶ್ರೀ ಅವರಲ್ಲಿ ನಾಯಕತ್ವ ಗುಣ ಇದೆ. ಆದರೆ, ಅದನ್ನು ಸರಿಯಾಗಿ ಬಳಸುತ್ತಿಲ್ಲ. ನಮ್ಮಲ್ಲಿ ಸಾಮೂಹಿಕ ಒಗ್ಗಟ್ಟಿನ ಕೊರತೆಯಿಂದ ಕನ್ನಡ ಸಿನಿಮಾ ರಂಗವು ಡಬ್ಬಿಂಗ್ ಹಾಗೂ ರಿಮೇಕ್ನ ಆಗರವಾಗಿದೆ. ಸ್ವಂತಿಕೆ ಹಾಗೂ ಭಾಷೆ, ಕಲೆಯ ಮೇಲೆ ಪ್ರಭುತ್ವ ಇಲ್ಲದಿರುವುದರಿಂದ ಡಬ್ಬಿಂಗ್ನಂತಹ ಪ್ರಕ್ರಿಯೆ ಕನ್ನಡದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂದು ವಿಷಾದಿಸಿದರು.
ಸಿನಿಮಾ ರಂಗದ ಇಂತಹ ಮಾರುವೇಷದಿಂದಾಗಿ ಕನ್ನಡ ಭಾಷೆಯ ಮೇಲೂ ತೀವ್ರ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರರಂಗದ ಮುಖಂಡರು ಎನಿಸಿಕೊಂಡವರು ತುಸು ಚಿಂತನೆ ನಡೆಸಬೇಕಿದೆ. ಕನ್ನಡ ಚಿತ್ರರಂಗ ಶತಮಾನದ ಸಂಭ್ರಮದಲ್ಲಿದೆ. ಈ ವರ್ಷಗಳಲ್ಲಾದರೂ ಕನ್ನಡ ಸಿನಿಮಾ ರಂಗ ಸ್ವಂತಿಕೆಯಿಂದ 100 ಚಲನ ಚಿತ್ರಗಳನ್ನು ರಚಿಸಿ ಕನ್ನಡಕ್ಕೆ ಉಡುಗೊರೆಯಾಗಿ ನೀಡಬೇಕು ಎಂದು ಹಂಸಲೇಖ ಆಶಿಸಿದರು.
ದೇಸಿ ಕಾಲೇಜು ಆರಂಭ: ಪ್ರಾಚೀನ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಇಲ್ಲಿಯವರೆಗೂ ಉಳಿಸಿದ್ದು ನಾಟಕ, ಜನಪದ ಹಾಗೂ ಸಾಹಿತ್ಯದಂತಹ ಕಲೆಗಳು. ಅದಕ್ಕಾಗಿ ಕಲೆಯನ್ನು ಪ್ರೀತಿಸುವ ಗುಣವನ್ನು ಯುವ ಪೀಳಿಗೆಗೂ ಕಲಿಸುವ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಾಟಕಕ್ಕೆ ಸರ್ಕಾರ ಹೆಚ್ಚಿನ ಸಹಾಯ ಸಹಕಾರ ನೀಡಬೇಕು. ಚಲನಚಿತ್ರಕ್ಕಿಂತ ನಾಟಕವು ಭಾಷೆಯನ್ನು ಉಳಿಸುವ ಬಹುದೊಡ್ಡ ಮಾಧ್ಯಮ ಎಂದ ಹಂಸಲೇಖ, ಕಲೆಯಿಂದ ಕನ್ನಡ ಭಾಷೆ ಉಳಿಸಲು ನಾನು ದೇಸಿ ಕಾಲೇಜೊಂದನ್ನು ಆರಂಭಿಸಿ ಈ ಮೂಲಕ ಯುವ ಪೀಳಿಗೆಯಲ್ಲಿ ಕನ್ನಡದ ಕಲೆಯನ್ನು ಉಳಿಸುವ ತರಬೇತಿ ನೀಡುತ್ತಿದ್ದೇನೆ. ಈಗಾಗಲೇ 200 ಜನ ಈ ತರಬೇತಿ ಪಡೆಯುತ್ತಿದ್ದಾರೆ. ಪಿಯುಸಿ ನಂತರದಲ್ಲಿ (ಫೇಲಾದ ವಿದ್ಯಾರ್ಥಿಗಳು, ಆಸಕ್ತ ಕನ್ನಡಾಭಿಮಾನಿಗಳು) ಈ ಕೋರ್ಸ್ ಮಾಡಬಹುದಾಗಿದ್ದು, ಮೊದಲ ಮೂರು ವರ್ಷ ಬ್ಯಾಚುಲರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಮತ್ತು ನಂತರದ ಎರಡು ವರ್ಷ ಮಾಸ್ಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಇದೆ. ಒಂದು ವರ್ಷದ ನಂತರ ಅಭ್ಯರ್ಥಿಗಳಿಗೆ ಕಲಿಯುವ ಹಂತದಲ್ಲಿಯೇ ಸಂಬಳ ನೀಡಲಾಗುತ್ತಿದೆ ಎಂದು ಹೇಳಿದರು.
1ನೇ ವರ್ಷ ಮಾಸಿಕ ರು. 5 ಸಾವಿರ, 2ನೇ ವರ್ಷ ರು. 9 ಸಾವಿರ ಹಾಗೂ 3ನೇ ವರ್ಷ ರು. 12 ಸಾವಿರ ಸಂಬಳ ನೀಡಲಾಗುವುದು. ಅಲ್ಲದೇ, ಪದವಿ ಮುಗಿದ ನಂತರ ಉದ್ಯೋಗವನ್ನು ದೊರಕಿಸಿ ಕೊಡುತ್ತೇವೆ ಎಂದು ಹಂಸಲೇಖ ಹೇಳಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement