ಬೇಡಿಕೆ ಈಡೇರಿಕೆಗಾಗಿ ಬ್ಯಾಂಕ್ ನೌಕರರ ಪ್ರತಿಭಟನೆ
ಹುಬ್ಬಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರ ಸಂಘಟನೆಗಳು ಕರೆ ನೀಡಿರುವ ಮುಷ್ಕರದಿಂದಾಗಿ ಅವಳಿ ನಗರದಲ್ಲಿ ಸೋಮವಾರ ಎಟಿಎಂಗಳ ಬಳಕೆ ಹೆಚ್ಚು ಕಂಡುಬಂದಿತು.
ಮುಷ್ಕರದ ಹಿನ್ನೆಲೆಯಲ್ಲಿ ಬ್ಯಾಂಕ್ಗಳು ಸೋಮವಾರ ಹಾಗೂ ಮಂಗಳವಾರ ಬಂದ್ ಇರುವುದರಿಂದ ಸಾರ್ವಜನಿಕರು ಅನಿವಾರ್ಯವಾಗಿ ಎಟಿಎಂಗಳನ್ನೇ ಅವಲಂಬಿಸಬೇಕಾಯಿತು. ಮುಂಜಾಗ್ರತಾ ಕ್ರಮವಾಗಿ ಎಟಿಎಂಗಳಲ್ಲಿ ಸಾಕಷ್ಟು ಹಣ ಇಡುವ ವ್ಯವಸ್ಥೆ ಮಾಡಲಾಗಿದೆಯೆಂದು ಬ್ಯಾಂಕ್ ಅಧಿಕಾರಿಗಳು ಈ ಮುಂಚೆಯೇ ತಿಳಿಸಿದ್ದರೂ, ಹಣದ ಕೊರತೆ ಉಂಟಾಗಬಹುದೆಂಬ ಆತಂಕದಿಂದ ಸಾರ್ವಜನಿಕರು ಎಟಿಎಂಗಳಿಂದ ಹೆಚ್ಚಿನ ಹಣ ಪಡೆಯುತ್ತಿರುವುದು ಕೆಲವೆಡೆ ಕಂಡುಬಂದಿತು. ಈ ಮಧ್ಯೆ ನಗರದ ಯೂನಿಯನ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದ ನಗರದ ವಿವಿಧ ಬ್ಯಾಂಕ್ಗಳ ನೌಕರರು, ಬೇಡಿಕೆ ಈಡೇರಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬ್ಯಾಂಕ್ ನೌಕರರ ವಿವಿಧ ಸಂಘಟನೆಗಳ ಮುಖಂಡರಾದ ಸ್ಟೀಫನ್ ಜಯಚಂದ್ರ, ಎ.ಎಂ. ಹೆಬಸೂರ, ನಂದಕಿಶೋರ, ಚೇತನ್ ಶೆಟ್ಟಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.