ಭಾರತಕ್ಕೆ ಬೇಕು ಸಮರ್ಥ ನಾಯಕತ್ವ
ಹುಬ್ಬಳ್ಳಿ: ಅದ್ಭುತ ಬುದ್ಧಿಮತ್ತೆಯ ಮಾನವ ಸಂಪನ್ಮೂಲ, ನೈಸರ್ಗಿಕ ಸಂಪನ್ಮೂಲವಿರುವ ಭಾರತಕ್ಕೆ ಇಂದು ಬೇಕಾಗಿರುವುದು ಸಮರ್ಥ ನಾಯಕತ್ವ. ಅಂತಹ ಗುಣಗಳನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತಮ್ಮ ಆಡಳಿತದಿಂದ ಸಾಬೀತು ಪಡಿಸಿದ್ದಾರೆ ಎಂದು ಅರ್ಥಶಾಸ್ತ್ರಜ್ಞ ಸುಬ್ರಮಣಿಯನ್ ಸ್ವಾಮಿ ಹೇಳಿದರು.
ಸೋಮವಾರ ಸಮರ್ಪಣ್ ಸೇವಾ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ಭಾರತದ ಭವಿಷ್ಯ ಮತ್ತು 2014ರ ಲೋಕಸಭೆ ಚುನಾವಣೆ ಕುರಿತ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಗುಜರಾತ್ನಲ್ಲಿ ಇಂದು ಕೃಷಿ ಕ್ಷೇತ್ರದ ವಾರ್ಷಿಕ ಬೆಳವಣಿಗೆ ಶೇ. 11ರಷ್ಟಿದೆ, ವಿದ್ಯುತ್, ನೀರು ಎಲ್ಲವೂ ರೈತರಿಗೆ ಸುಲಭವಾಗಿ ಲಭಿಸುತ್ತಿದೆ. ಭಾರತದಲ್ಲಿ ಮಾತ್ರ ವರ್ಷದ ಹನ್ನೆರಡು ತಿಂಗಳು ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯ. ಪ್ರಕೃತಿಯ ಲಾಭವಿದ್ದರೂ ಕೂಡ ಭಾರತ ಆಹಾರೋತ್ಪಾದನೆಯಲ್ಲಿ ಕೆಳಗಿನ ಸ್ಥಾನದಲ್ಲಿದೆ. ಕೃಷಿ ಕ್ಷೇತ್ರಕ್ಕೆ ಮೂಲಸೌಕರ್ಯ ಕಲ್ಪಿಸುವಲ್ಲಿನ ರಾಜಕೀಯವೇ ಇದಕ್ಕೆ ಕಾರಣ ಎಂದರು.
ಶೇ. 60ಕ್ಕಿಂತಲೂ ಹೆಚ್ಚು ಯುವ ಜನಸಂಖ್ಯೆ ಹೊಂದಿರುವ ಭಾರತ, ಮಾನವ ಸಂಪನ್ಮೂಲದ ಅಗ್ರಸ್ಥಾನ ಪಡೆದಿದೆ. ಬುದ್ಧಿಮತ್ತೆಗೆ ಹೆಸರಾಗಿರುವ ಭಾರತೀಯರು ಇರಾಕ್ನಲ್ಲಿ ಸರ್ವಶ್ರೇಷ್ಠ ರಸ್ತೆಗಳನ್ನು ನಿರ್ಮಿಸುತ್ತಾರೆ. ಆದರೆ ಭಾರತದಲ್ಲಿ ಮಾತ್ರ ಇಂತಹ ಮೂಲಸೌಲಭ್ಯ ಇಲ್ಲ. ಚೀನಾ ಇಂದಿನ ಪ್ರಬಲ ಅರ್ಥ ವ್ಯವಸ್ಥೆಯ ರಹಸ್ಯ ಇರುವುದು ಅದರ ಮಾನವ ಸಂಪನ್ಮೂಲದ ಸದ್ಬಳಕೆಯಲ್ಲಿ. ತುರ್ತು ಪರಿಸ್ಥಿತಿ ನಂತರ 1977ರಲ್ಲಿ ನಡೆದ ಚುನಾವಣೆಯಲ್ಲಿ ಬಹುಪಾಲು ಅನಕ್ಷರಸ್ಥರನ್ನು ಹೊಂದಿರುವ ಉತ್ತರ ಭಾರತದ ರಾಜ್ಯಗಳಲ್ಲಿ ಶೇ. 100ರಷ್ಟು ಮತದಾನವಾಗಿದೆ ಎಂದು ತುರ್ತು ಪರಿಸ್ಥಿತಿಯ ಕಾಲವನ್ನು ಸ್ಮರಿಸಿಕೊಂಡರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಕೌಸ್ತುಭ ಸಂಶಿಕರ್, ಸುಭಾಷಸಿಂಗ್ ಜಮಾದಾರ್ ಮತ್ತಿತರರಿದ್ದರು.
ಮತದಾನ ಪ್ರಕ್ರಿಯೆಗಟ್ಟಿಗೊಳ್ಳಲಿ: ಜೋಶಿ
ರಾಜಕೀಯ ಚಿಂತಕ, ಅರ್ಥಶಾಸ್ತ್ರಜ್ಞ ಡಾ. ಸುಬ್ರಮಣಿಯನ್ ಸ್ವಾಮಿ ಅವರೊಂದಿಗೆ ಭಾರತದ ಭವಿಷ್ಯ ಮತ್ತು 2014ರ ಲೋಕಸಭೆ ಚುನಾವಣೆ ಕುರಿತ ಸಂವಾದಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಸಂಸದ ಪ್ರಹ್ಲಾದ ಜೋಶಿ ಈ ವೇದಿಕೆ ರಾಜಕೀಯಕ್ಕಲ್ಲ. ಆದರೆ ದೇಶದಲ್ಲಿ ಮತದಾನ ಪ್ರಕ್ರಿಯೆ ಗಟ್ಟಿಯಾಗಬೇಕಿದೆ ಎಂದು ಹೇಳಿದರು. ಕಳೆದ 60 ವರ್ಷಗಳಿಂದ ಅದರಲ್ಲೂ ವಿಶೇಷವಾಗಿ ಕಳೆದ ಹತ್ತು ವರ್ಷಗಳಿಂದ ಭಾರತದ ಸ್ಥಿತಿ ಗಂಭೀರವಾಗಿದೆ. ಇಲ್ಲಿಯವರೆಗೆ 1.44 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದರ್ಭದಲ್ಲಿ ರೈತರ ಆತ್ಮಹತ್ಯೆ ಶೃಂಖಲೆಗೆ ಸಂಬಂಧಿಸಿದಂತೆ ಟಾಟಾ ಇನ್ಸ್ಟಿಟ್ಯೂಟ್ ಫಾರ್ ಸೋಷಿಯಲ್ ರೀಸರ್ಚ್ ಮಾಡಿದ ಅಧ್ಯಯನದಲ್ಲಿ ರೈತರಿಗೆ ಪರ್ಯಾಯ ಆಯ್ಕೆ ಒದಗಿಸದೇ ಇದ್ದಲ್ಲಿ ಕೃಷಿ ಕ್ಷೇತ್ರ ಗಂಡಾಂತರ ಎದುರಿಸಲಿದೆ ಎಂದು ವರದಿ ನೀಡಿತ್ತು ಎಂದು ಹೇಳಿದರು. ರಾಜ್ಯದಲ್ಲಿ 21 ಸಾವಿರ ಗ್ರಾಮಗಳ ಜನರು ಫ್ಲೊರೈಡ್ಯುಕ್ತ ನೀರು ಸೇವಿಸುತ್ತಿದ್ದಾರೆ. ಪೋರ್ಬ್ಸ್ ಪ್ರಕಟಿಸುವ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಕನಿಷ್ಠ ನಾಲ್ಕೈದು ಭಾರತೀಯ ಉದ್ಯಮಿಗಳ ಹೆಸರುಗಳು ಇರುತ್ತವೆ. ಆದೇ ಸಂಯುಕ್ತ ರಾಷ್ಟ್ರ ಸಂಘದ ಮಾನವಾಭಿವೃದ್ಧಿ ಸೂಚ್ಯಂಕದಲ್ಲಿ ದೇಶದ ಸ್ಥಾನ 155ಕ್ಕೆ ಇದೆ. ಕಳೆದ ಲೋಕಸಗೆ ಆಯ್ಕೆಯಾದ 150 ಸಂಸದರು ಕೇವಲ ಶೇ. 20ರಷ್ಟು ಮತಗಳ ಅಂತರದಿಂದ ಗೆಲವು ಸಾಧಿಸಿರುವುದನ್ನು ನೋಡಿದರೆ, ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿ ಮತದಾನ ಪ್ರಕ್ರಿಯೆ ಇನ್ನೂ ಗಟ್ಟಿಯಾಗಬೇಕಿದೆ ಎಂದು ಹೇಳಿದರು.