ಶಾಲೆ ಪ್ರಗತಿಗೆ ನಾಯಕತ್ವ ಗುಣ ಅಗತ್ಯ
ಧಾರವಾಡ: ವಿವಿಧ ಕ್ಷೇತ್ರಗಳ ಯಶಸ್ವಿಗೆ ನಾಯಕತ್ವದ ಅಗತ್ಯವಿದ್ದಂತೆ ಮುಖ್ಯಾಧ್ಯಾಪಕರಲ್ಲಿಯೂ ನಾಯಕತ್ವ ಗುಣವಿದ್ದರೆ ಮಾತ್ರ ಶಾಲೆಗಳ ಸಮಗ್ರ ಪ್ರಗತಿ ಸಾಧ್ಯ ಎಂದು ಡಯಟ್ ಪ್ರಾಚಾರ್ಯ ಗಂಗಪ್ಪ ಹೇಳಿದರು.
ರಾಜ್ಯ ಶಾಲಾ ಹೊಣೆಗಾರಿಕೆ, ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ಸಂಸ್ಥೆ (ಸಿಸ್ಲೆಪ್-ಕರ್ನಾಟಕ) ಹಾಗೂ ಮೈಸೂರು ವಿಭಾಗಗಳ ಸರ್ಕಾರಿ ಪ್ರೌಢಶಾಲೆಗಳ 40 ಪ್ರೊಬೇಷನರಿ ಮುಖ್ಯಾಧ್ಯಾಪಕರಿಗೆ ಹಮ್ಮಿಕೊಂಡಿರುವ ಆಡಳಿತ ನಾಯಕತ್ವ ಹಾಗೂ ಸಾಮಾನ್ಯ ಬುನಾದಿ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯಾಧ್ಯಾಪಕರು ತಮ್ಮ ಹುದ್ದೆಯ ವೃತ್ತಿ ಗೌರವ ಹಾಗೂ ಶಾಲೆಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರಬೇಕಾಗುತ್ತದೆ. ಜತೆಗೆ ತಮ್ಮ ಉದ್ಯೋಗದ ಕುರಿತು ಅರಿವು ಇದ್ದಲ್ಲಿ ಸಂಕೀರ್ಣ ಸಮಸ್ಯೆಯನ್ನೂ ಸುಲಭವಾಗಿ ಪರಿಹರಿಸಬಹುದು ಎಂದರು. ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ, ಶೈಕ್ಷಣಿಕ ಮನೋವಿಜ್ಞಾನದ ಮೂಲಕ ಮಕ್ಕಳ ಮನಸ್ಥಿತಿಯನ್ನು ಅಧ್ಯಯನ ಮಾಡುವಂತೆ, ಮುಖ್ಯಾಧ್ಯಾಪಕರು ತಮ್ಮ ಸಹೋದ್ಯೋಗಿಗಳ, ಪಾಲಕ-ಪೋಷಕರ, ಮೇಲಾಧಿಕಾರಿಗಳ ಹಾಗೂ ಸಮಾಜದ ಭಾವನೆಗಳನ್ನು ಅರಿತು ಸ್ಪಂದಿಸಿದರೆ ವೃತ್ತಿಯಲ್ಲಿ ಯಶಸ್ಸು ಸಾಧ್ಯ ಎಂದರು. ನಾಗವೇಣಿ ಉಡುಪ ಪ್ರಾರ್ಥಿಸಿದರು. ಸಿಸ್ಲೆಪ್ ಹಿರಿಯ ಸಹಾಯಕ ನಿರ್ದೇಶಕ ಆರ್.ಎಸ್. ಮುಳ್ಳೂರ ಸ್ವಾಗತಿಸಿದರು. ಸಿಸ್ಲೆಪ್ ಉಪನ್ಯಾಸಕಿ ಪಾರ್ವತಿ ವಸ್ತ್ರದ ನಿರೂಪಿಸಿದರು. ಅಶ್ವಿನ್ ಆರಾಧ್ಯ ವಂದಿಸಿದರು.