ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಉತ್ತರದಾಯಿತ್ವ ನಿಭಾಯಿಸುವರೇ ಖರ್ಗೆ?

Mainashree
Updated On : 12 Feb 2014, 1:41 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 11
ಮತ್ತೊಮ್ಮೆ ಕೇಂದ್ರ ರೇಲ್ವೆ ಬಜೆಟ್ ಎದುರಾಗಿದೆ. ಉತ್ತರ ಕರ್ನಾಟಕದ ಜನ ಆಸೆ ಕಂಗಳಿಂದ ಕಾಯುತ್ತಿದ್ದಾರೆ. ಕಳೆದ ವರ್ಷದ ರೇಲ್ವೆ ಬಜೆಟ್ನಲ್ಲಿ ಈ ಭಾಗಕ್ಕೆ ಹಿಂದೆಂದಿಗಿಂತ ಹೆಚ್ಚಿನ ಅನುಕೂಲ ಸಿಂಧು ಘೋಷಣೆಗಳಿದ್ದವು. ಆದರೆ ಅವು ಕಾರ್ಯಗತವಾಗಿಲ್ಲ. ಹಳೆಯ ಘೋಷಣೆಗಳ ಬಾಕಿ ಜತೆಗೆ ಹೊಸ ಬೇಡಿಕೆಗಳೂ ಹುಟ್ಟಿಕೊಂಡಿವೆ.
ಈ ಬಾರಿ ಕರ್ನಾಟಕದವರೇ ಆದ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಬಜೆಟ್ ಮಂಡಿಸಲು ಸಿದ್ಧತೆ ನಡೆಸುತ್ತಿದ್ದು, ಸಹಜವಾಗಿ ನಮಗೆ ಸಿಂಹಪಾಲು ಸಿಕ್ಕೀತು ಎನ್ನುವ ಆಸೆ ಹುಟ್ಟಿದೆ. ಅದರಲ್ಲೂ ಹೈದ್ರಾಬಾದ್- ಕರ್ನಾಟಕದವರಾದ ಖರ್ಗೆ, ಉತ್ತರ ಕರ್ನಾಟಕದತ್ತ ಚಿತ್ತ ಹರಿಸುತ್ತಾರೆನ್ನುವ ನಿರೀಕ್ಷೆ ಗರಿಗೆದರಿದೆ.
ಘೋಷಣೆಯಾಗಿದ್ದೇ ಬಂತು: ಕಳೆದ ವರ್ಷದ ಬಜೆಟ್ನಲ್ಲಿ ಸಾಕಷ್ಟು ಹೊಸ ಯೋಜನೆಗಳು ಘೋಷಣೆಯಾಗಿದ್ದವು. ಮುನಿರಾಬಾದ್-ಮೆಹಬೂಬನಗರ, ಕುಡಚಿ-ಬಾಗಲಕೋಟೆ, ಬೀದರ-ಗುಲ್ಬರ್ಗಾ, ಹುಬ್ಬಳ್ಳಿ-ಅಂಕೋಲಾ,  ಹೊಸಪೇಟೆ-ಕೊಟ್ಟೂರ-ಹರಿಹರ ರೈಲು ಮಾರ್ಗ ಕಾಮಗಾರಿ 2014ರ ಬಜೆಟ್ ಒಳಗೆ ಪೂರ್ಣಗೊಳಿಸುವುದಾಗಿ ಘೋಷಿಸಲಾಗಿತ್ತು. ಆದರೆ ಅನುದಾನ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಮಾರ್ಗ ಪೂರ್ಣಗೊಳ್ಳುವುದಿರಲಿ, ಶೇ. 25ರಷ್ಟೂ ಕೆಲಸವಾಗಿಲ್ಲ. ಆಲಮಟ್ಟಿ, ಬಾಗಲಕೋಟೆ, ಬದಾಮಿ ರೈಲು ನಿಲ್ದಾಣಗಳನ್ನು 'ಆದರ್ಶ' ನಿಲ್ದಾಣವಾಗಿ ಅಭಿವೃದ್ಧಿ ಪಡಿಸಲಾಗುವುದು. ಅದಕ್ಕಾಗಿ ತಲಾ ರು. 12 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಲಾಗಿತ್ತು. ಆದರೆ ಯೋಜನೆ ಕಾರ್ಯರೂಪಕ್ಕೆ ಬಾರದಿರುವ ಪರಿಣಾಮ ಈ ನಿಲ್ದಾಣಗಳು ಇಂದಿಗೂ ಮೂಲಸೌಕರ್ಯ ಕೊರತೆಯಿಂದ ಸೊರಗಿವೆ.
ಬೆಂಗಳೂರು-ಹುಬ್ಬಳ್ಳಿ-ಮೀರಜ್ ನಡುವೆ ವಿದ್ಯುದೀಕರಣ ಸಹಿತವಾಗಿ ಜೋಡು ರೈಲು ಮಾರ್ಗ ಘೋಷಣೆಯಾಗಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಗದಗ-ಹುಟಗಿ ಜೋಡು ಮಾರ್ಗ ಕಾಮಗಾರಿ ಆರಂಭವಾಗಿಲ್ಲ. ಪ್ರಮುಖವಾಗಿ 1 ಸಾವಿರ ಕಿ.ಮೀ. ವ್ಯಾಪ್ತಿಯಲ್ಲಿ ಹಬ್ಬಿರುವ ನೈಋತ್ಯ ರೇಲ್ವೆ ಮಾರ್ಗದಲ್ಲಿರುವ ಎಲ್ಲ ನಿಲ್ದಾಣಗಳಿಗೆ ಮೂಲಸೌಕರ್ಯ ಒದಗಿಸುವುದಾಗಿ ಘೋಷಿಸಿದ್ದರೂ ಯಾವುದೇ ನಿಲ್ದಾಣ ಅಭಿವೃದ್ಧಿಯತ್ತ ಮುಖ ಮಾಡಿಲ್ಲ.
ಹೊಸ ಬೇಡಿಕೆಗಳು: ಹೀಗೆ ಹಳೆಯ ಘೋಷಣೆಗಳು ಹಾಗೆಯೇ ಇವೆ. ಆದರೂ ಹೊಸ ನಿರೀಕ್ಷೆಗಳೊಂದಿಗೆ ಈ ಭಾಗದ ಜನತೆ ಮತ್ತೆ ರೇಲ್ವೆ ಬಜೆಟ್ ಎದುರು ನೋಡುತ್ತಿದ್ದಾರೆ. ಕುಡಚಿ- ಬಾಗಲಕೋಟೆ ಮಾರ್ಗ ರಾಯಚೂರು ವರೆಗೆ ಮುಂದುವರಿಸಬೇಕು. ಆಲಮಟ್ಟಿ-ಯಾದಗಿರಿ ಹೊಸ ಮಾರ್ಗ, ಬಿಜಾಪುರ-ಶಾಬಾದ ಹೊಸ ಮಾರ್ಗ ನಿರ್ಮಾಣ. ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸಲು ಬಿಜಾಪುರ-ಅಥಣಿ- ಶೆಡಬಾಳ ಹೊಸ ಮಾರ್ಗ ನಿರ್ಮಾಣ. ಬಾಗಲಕೋಟೆ-ಬೆಳಗಾವಿ ಹೊಸ ಮಾರ್ಗ, ಗದಗ-ಯಾದಗಿರಿ ಮಾರ್ಗದ ಕಾರ್ಯಾರಂಭ ಆಗಬೇಕಿದೆ. 3 ವರ್ಷಗಳಿಂದ ಘೋಷಣೆಯಾಗುತ್ತಲೇ ಬಂದಿರುವ ಗದಗ-ಹಾವೇರಿ ಹೊಸ ಮಾರ್ಗ, ಕಿತ್ತೂರು  ಮಾರ್ಗವಾಗಿ ಹುಬ್ಬಳ್ಳಿ-ಬೆಳಗಾವಿ ಮಧ್ಯೆ ಹೊಸ ಮಾರ್ಗ ನಿರ್ಮಾಣ, ಬೆಳಗಾವಿ-ಸವದತ್ತಿ-ರಾಮದುರ್ಗ-ಬಾಗಲಕೋಟೆಗೆ ಸಂಪರ್ಕ ಕಲ್ಪಿಸುವ ಹೊಸ ಮಾರ್ಗ, ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಎಸ್ಕಲೇಟರ್ಸ್, ಲಿಫ್ಟ್, ಅಂಡರ್ಪಾಸ್ ವ್ಯವಸ್ಥೆ ಕಲ್ಪಿಸುವ ಬೇಡಿಕೆಗಳನ್ನು ಜನತೆ ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ. ಸಚಿವರು ಇವೆಲ್ಲವನ್ನೂ ಎಷ್ಟರಮಟ್ಟಿಗೆ ಈಡೇರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ನ್ಯಾಯ ಒದಗಿಸಲಿ
ರೇಲ್ವೆ ಬಜೆಟ್ನಲ್ಲಿ ಪ್ರತಿ ಸಲವೂ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ. ಈ ಭಾಗದ ಸಂಸದರು ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲಿ ವಿಫಲವಾಗಿರುವುದೇ ಇದಕ್ಕೆ ಕಾರಣ. ಈ ಭಾಗದ ಅರಿವಿರುವ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ರೇಲ್ವೆ ಸಚಿವರಾಗಿ ಬಜೆಟ್ ಮಂಡಿಸುತ್ತಿದ್ದು, ಈ ಭಾಗಕ್ಕೆ ನ್ಯಾಯ ಒದಗಿಸಬೇಕಿದೆ.
   
ಅಧ್ಯಕ್ಷ, ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಪ್ರೊ. ಎಚ್.ಆರ್. ಲದ್ವಾ ವಿಧಿವಶ
ಧಾರವಾಡ: ಕರ್ನಾಟಕ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ.ಎಚ್.ಆರ್. ಲದ್ವಾ (93) ಮಂಗಳವಾರ ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವಿದೆ. ಫೆ. 12ರ ಸಂಜೆ 4.30ಕ್ಕೆ ಮೃತರ ಅಂತ್ಯಕ್ರಿಯೆ ಹೊಸಯಲ್ಲಾಪುರದ ರುದ್ರಭೂಮಿಯಲ್ಲಿ ನಡೆಯಲಿದೆ. ಖ್ಯಾತ ಸಸ್ಯಶಾಸ್ತ್ರಜ್ಞರಾಗಿದ್ದ ಪ್ರೊ. ಎಚ್.ಆರ್. ಲದ್ವಾ ಮುಂಬೈ ವಿಶ್ವವಿದ್ಯಾಲಯದ ಬಿಎಸ್ಸಿ ಪದವಿ ಪಡೆದು 1943ರಲ್ಲಿ ಕರ್ನಾಟಕ ವಿಜ್ಞಾನ ಕಾಲೇಜಿನಲ್ಲಿ ಸೇವೆಗೆ ಸೇರಿದರು. ವಿವಿಧ ಬೋಧಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಂತರ 1976ರಲ್ಲಿ ಕಾಲೇಜಿನ ಪ್ರಾಚಾರ್ಯರಾಗಿ 1981ರ ವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು. ಶಿಸ್ತು ಮತ್ತು ಪರಿಶ್ರಮಕ್ಕೆ ಹೆಸರಾಗಿದ್ದ ಅವರು, 25 ವರ್ಷ ಎನ್ಸಿಸಿ ಅಧಿಕಾರಿಯಾಗಿ ಮೇಜರ್ ಹುದ್ದೆಗೆ ಪದೋನ್ನತಿ ಪಡೆದಿದ್ದರು. ಕರ್ನಾಟಕ ವಿವಿಯ ಅಕಾಡೆಮಿಕ್ ಕೌನ್ಸಿಲ್, ಸೆನೆಟ್ ಹಾಗೂ ವಿವಿಧ ಸಮಿತಿಗಳ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರೊ. ಲದ್ವಾ ನಿಧನಕ್ಕೆ ಕರ್ನಾಟಕ ವಿವಿಯ ಕುಲಪತಿ ಡಾ.ಎಚ್.ಬಿ. ವಾಲೀಕಾರ, ಕರ್ನಾಟಕ ಕಾಲೇಜು ಪ್ರಾಚಾರ್ಯ ಡಾ. ವಿ.ಎಚ್. ಅರಳಿ, ಡಾ.ಎಸ್.ಎಸ್. ಕಟ್ಟಿಮನಿ ಹಾಗೂ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.
ವೆಂಕಟರಾವ್ ಕುಲಕರ್ಣಿ
ಧಾರವಾಡ: ಭಾರತಿ ನಗರದ ನಿವಾಸಿ ವೆಂಕಟರಾವ್ ಅನಂತರಾವ್ ಕುಲಕರ್ಣಿ (73) ಇತ್ತೀಚೆಗೆ ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರಿಯರು, ನಾಲ್ವರು ಸಹೋದರರು, ಓರ್ವ ಸಹೋದರಿ ಇದ್ದಾರೆ.
ಭಕ್ತರಿಗೆ ಉಚಿತ ಸೇವೆ
ಕಲಘಟಗಿ: ಉಳವಿ ಜಾತ್ರೆಗೆ ತೆರಳುವ ಭಕ್ತಾದಿಗಳಿಗೆ ಊಟೋಪಹಾರ, ವಿಶ್ರಾಂತಿ ಸೇವೆಯನ್ನು ದಾನಿಗಳ ಸಹಾಯದಿಂದ ಕಲ್ಪಿಸಿಕೊಡಲು ತಿಪ್ಪಣ್ಣ ಕುರುಗುಂದ ದಂಪತಿ ಮುಂದಾಗಿದ್ದಾರೆ. ಪಟ್ಟಣದಲ್ಲಿ ತಾವು ಕರ್ತವ್ಯ ನಿರ್ವಹಿಸುತ್ತಿರುವ ಪದ್ಮಾವತಿ ಅಟೋ ಸೆಂಟರ್ನವರು ಈ ಕಾರ್ಯಕ್ಕೆ ಸ್ಥಳಾವಕಾಶದ ನೆರವು ನೀಡಿದ್ದು, ದಾನಿಗಳ ಸಹಕಾರದಿಂದ ತಾವು ಕಳೆದ ವರ್ಷದಂತೆ ಈ ವರ್ಷವೂ ಭಕ್ತರಿಗೆ ಅನುಕೂಲ ಮಾಡಿಕೊಡಲು ಮುಂದಾಗಿರುವುದಾಗಿ ಕುರುಗುಂದ ತಿಳಿಸಿದ್ದಾರೆ.

ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement