ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಕಸರತ್ತು
ಬಿಜೆಪಿ ಭದ್ರಕೋಟೆಯಾಗಿರುವ ಧಾರವಾಡ ಲೋಕಸಭೆ ಕ್ಷೇತ್ರವನ್ನು ಮರಳಿ 'ಕೈ'ವಶ ಪಡಿಸಿಕೊಳ್ಳಲು ಹರಸಾಹಸ ಮಾಡುತ್ತಿರುವ ಕಾಂಗ್ರೆಸ್ ಪಾಳಯದಲ್ಲಿ ಟಿಕೆಟ್ಗೆ ಪೈಪೋಟಿ ತೀವ್ರಗೊಂಡಿದೆ.
ಧಾರವಾಡ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ನ ಮೂವರು ಆಕಾಂಕ್ಷಿಗಳ ಹೆಸರು ಹೈಕಮಾಂಡ್ ಕೈಸೇರಿದ್ದು ಇವರಲ್ಲಿ ಒಬ್ಬರಿಗೆ ಟಿಕೆಟ್ ಒಲಿಯಲಿದೆ. ಮಾಜಿ ಸಂಸದ ಮಂಜುನಾಥ ಕುನ್ನೂರ, ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಹಾಗೂ ಮಾಜಿ ಸಂಸದ ದಿವಂಗತ ಡಿ. ಕೆ. ನಾಯ್ಕರ್ ಅವರ ಪುತ್ರ ಲೋಹಿತ್ ನಾಯ್ಕರ್ ಅವರ ಹೆಸರುಗಳ ಪಟ್ಟಿ ಹೈಕಮಾಂಡ್ ಕೈಸೇರಿದೆ.
ಈ ಮಧ್ಯೆ ಧಾರವಾಡ ಜಿಲ್ಲಾ ಕಾಂಗ್ರೆಸ್ನಲ್ಲಿ ಸಾಕಷ್ಟು ಹಿಡಿತ ಇರುವ ಧಾರವಾಡ ಶಾಸಕ ವಿನಯ ಕುಲಕರ್ಣಿ ಅವರಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯ ಇಲ್ಲಿಯ ಮುಖಂಡರಿಂದ ಕೇಳಿಬರುತ್ತಿರುವುದರಿಂದ ಹೈಕಮಾಂಡ್ ವಿನಯ ಕುಲಕರ್ಣಿ ಅವರಿಗೆ ಟಿಕೆಟ್ ನೀಡಿದರೂ ಅಚ್ಚರಿ ಪಡಬೇಕಿಲ್ಲ.
ಕಳೆದ ಮೂರು ಅವಧಿಯಲ್ಲಿ ಧಾರವಾಡ ಲೋಕಸಭೆ ಕ್ಷೇತ್ರದಿಂದ ಟಿಕೆಟ್ ಪಡೆದಿದ್ದ ಲಿಂಗಾಯತ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಲು ವಿಫಲಗೊಂಡಿರುವುದರಿಂದ ಅಲ್ಪ ಸಂಖ್ಯಾತರಿಗೆ ಈ ಬಾರಿ ಟಿಕೆಟ್ ನೀಡಬೇಕೆಂಬ ಕೂಗು ಕೇಳಿಬರುತ್ತಿದ್ದರೂ, ಯುವಕರಿಗೆ ಟಿಕೆಟ್ ನೀಡಬೇಕು ಎನ್ನುವ ಒಲವು ಹೈಕಮಾಂಡ್ನದ್ದು.
ಹೀಗಾಗಿ ಧಾರವಾಡ ಶಾಸಕ ವಿನಯ ಕುಲಕರ್ಣಿ ಅಥವಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ.ಎಂ. ಹಿಂಡಸಗೇರಿ ಅವರಲ್ಲೊಬ್ಬರಿಗೆ ಟಿಕೆಟ್ ದೊರೆಯುವ ಸಾಧ್ಯತೆ ದಟ್ಟವಾಗಿದೆ.
1999ರಲ್ಲಿ ಬಿಜೆಪಿಯ ವಿಜಯ ಸಂಕೇಶ್ವರ (3,45,197 ಮತ) ವಿರುದ್ಧ 41,602 ಮತಗಳ ಅಂತರದಿಂದ ಸೋಲು ಕಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ವೀರಣ್ಣ ಮತ್ತಿಕಟ್ಟಿ (3,03,595 ಮತ), 2004ರ ಚುನಾವಣೆಯಲ್ಲಿ ಬಿಜೆಪಿಯ ಪ್ರಹ್ಲಾದ ಜೋಶಿ (3,85,084 ಮತ) ವಿರುದ್ಧ 83,078 ಮತಗಳ ಅಂತರದಿಂದ ಪರಾಭವಗೊಂಡಿದ್ದ ಕಾಂಗ್ರೆಸ್ನ ಬಿ.ಎಸ್. ಪಾಟೀಲ (3,02,006 ಮತ) ಹಾಗೂ 2009ರಲ್ಲಿ ಬಿಜೆಪಿಯ ಪ್ರಹ್ಲಾದ ಜೋಶಿ (4,46,786 ಮತ) ವಿರುದ್ಧ 1,37,663 ಮತಗಳ ಅಂತರದಿಂದ ಸೋತಿದ್ದ ಕಾಂಗ್ರೆಸ್ನ ಮಂಜುನಾಥ ಕುನ್ನೂರ (3,09,123 ಮತ) ಅವರು ಲಿಂಗಾಯತರಾಗಿದ್ದರಿಂದ ಈ ಬಾರಿ ಲಿಂಗಾಯತರ ಬದಲು ಅನ್ಯರಿಗೆ ಟಿಕೆಟ್ ನೀಡಬೇಕೆಂಬ ಲೆಕ್ಕಾಚಾರದ ಮಾತುಗಳು ಕೇಳಿಬರುತ್ತಿವೆ.
ಈ ಮಧ್ಯೆ ಧಾರವಾಡ ವಿಧಾನಸಭೆ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಅವರಿಗೆ ಟಿಕೆಟ್ ನೀಡಿದಲ್ಲಿ ಧಾರವಾಡ ಲೋಕಸಭೆ ಕ್ಷೇತ್ರವನ್ನು ಮರಳಿ ಕಾಂಗ್ರೆಸ್ ಹಿಡಿತಕ್ಕೆ ತರಬಹುದೆಂಬ ಲೆಕ್ಕಾಚಾರವೂ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.
1977ರಿಂದ 1991ರವರೆಗೆ ಕಾಂಗ್ರೆಸ್ ಹಿಡಿತದಲ್ಲಿದ್ದ ಧಾರವಾಡ ಲೋಕಸಭೆ ಕ್ಷೇತ್ರ, 1996ರ ಚುನಾವಣೆಯಿಂದ ಇದುವರೆಗೆ ಬಿಜೆಪಿಯ ಭದ್ರಕೋಟೆಯಂತಾಗಿದೆ. ಕಾಂಗ್ರೆಸ್ನ ಸರೋಜಿನಿ ಮಹಿಷಿ 1977ರಲ್ಲಿ, ಡಿ.ಕೆ. ನಾಯ್ಕರ 1980, 1984 ಹಾಗೂ 1991ರಲ್ಲಿ ಜಯ ಸಾಧಿಸಿದ ನಂತರ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತೆ ಗೆಲುವು ಕಂಡಿಲ್ಲ.
1996, 1998 ಹಾಗೂ 1999ರಲ್ಲಿ ಬಿಜೆಪಿ ವಿಜಯ ಸಂಕೇಶ್ವರ ಹಾಗೂ 2004 ಮತ್ತು 2009ರಲ್ಲಿ ಬಿಜೆಪಿಯ ಪ್ರಹ್ಲಾದ ಜೋಶಿ ಧಾರವಾಡ ಕ್ಷೇತ್ರದಿಂದ ಗೆಲುವು ಸಾಧಿಸುವ ಮೂಲಕ ಧಾರವಾಡ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿ ಮಾರ್ಪಟ್ಟಿತು.
ಹೀಗಾಗಿ ಧಾರವಾಡ ಲೋಕಸಭೆ ಕ್ಷೇತ್ರವನ್ನು ಮರಳಿ ಕೈ ವಶಪಡಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಅಭ್ಯರ್ಥಿಗಳ ಆಯ್ಕೆಯಲ್ಲಿ ಸೂಕ್ಷ್ಮ ತಂತ್ರ ಅನುಸರಿಸುತ್ತಿದೆ. ಮಂಜುನಾಥ ಕುನ್ನೂರ ಕಳೆದ ಬಾರಿ ಸೋತಿದ್ದರಿಂದ ಹಾಗೂ ಲೋಹಿತ ನಾಯ್ಕರ್ ಅವರಿಗೆ ಹೇಳಿಕೊಳ್ಳುವಂತಹ ವರ್ಚಸ್ಸು ಇಲ್ಲದ ಕಾರಣ ಇವರಿಬ್ಬರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಕಡಿಮೆಯೆಂದೇ ಲೆಕ್ಕಾಚಾರ ಹಾಕಲಾಗುತ್ತಿದೆ.
ಒಂದು ಬಾರಿ ಸಚಿವರಾಗಿ, ಎರಡು ಬಾರಿ ಶಾಸಕರಾಗಿ ಹಾಗೂ ಮಹಾನಗರ ಜಿಲ್ಲಾಧ್ಯಕ್ಷರಾಗಿದ್ದ ಎ.ಎಂ. ಹಿಂಡಸಗೇರಿ ಅಥವಾ ಎರಡು ಬಾರಿ ಶಾಸಕರಾಗಿ ಜಿಲ್ಲೆಯ ಕಾಂಗ್ರೆಸ್ನಲ್ಲಿ ವರ್ಚಸ್ಸು ಬೆಳೆಸಿಕೊಂಡಿರುವ ಧಾರವಾಡ ಶಾಸಕ ವಿನಯ ಕುಲಕರ್ಣಿಗೆ ಟಿಕೆಟ್ ನೀಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.