ಗೃಹ ನಿರ್ಮಾಣ ಸಹಕಾರಿ ಸಂಘದ ಅವ್ಯವಹಾರ ತನಿಖೆಗೆ ಆಗ್ರಹ
ಧಾರವಾಡ: ತಾಲೂಕಿನ ಹೆಬ್ಬಳ್ಳಿಯ ಹಿಂದುಳಿದ ವರ್ಗದ ಗೃಹ ನಿರ್ಮಾಣ ಸಹಕಾರಿ ಸಂಘದಲ್ಲಿ ನಡೆದಿರುವ ಅವ್ಯವಹಾರದ ತನಿಖೆ ನಡೆಸಬೇಕು ಎಂದು ಸಂಘದ ಸದಸ್ಯರು ಆಗ್ರಹಿಸಿದ್ದಾರೆ.
ಹಿಂದುಳಿದ ವರ್ಗಕ್ಕೆ ಸೇರಿದ ಹುಲಸ್ವಾರ ಸಮಾಜದವರಿಗೆ ಮನೆಗಳನ್ನು ಒದಗಿಸಿ ಕೊಡುವ ಉದ್ದೇಶದಿಂದ 1955ರಲ್ಲಿ ಹಿಂದುಳಿದ ವರ್ಗದ ಗೃಹ ನಿರ್ಮಾಣ ಸಹಕಾರಿ ಸಂಘ ಸ್ಥಾಪಿಸಲಾಗಿತ್ತು. ಸದಸ್ಯರಿಗೆ ನಿವೇಶನಗಳನ್ನು ಒದಗಿಸಲು ಜಮೀನು ನೀಡುವಂತೆ ಸಂಘದ ಆಗಿನ ಅಧ್ಯಕ್ಷ ಫಕ್ಕೀರಪ್ಪ ಭಜಂತ್ರಿ ಅವರ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.
ಸಂಘದ ಬೇಡಿಕೆಯನ್ನು ಮನ್ನಿಸಿ ಸರ್ಕಾರ ಗ್ರಾಮದಲ್ಲಿ ಸ.ನಂ.544 ರಲ್ಲಿ 2.30 ಗುಂಟೆ ಜಮೀನನ್ನು ಮಂಜೂರು ಮಾಡಿತ್ತು. ನಂತರ ಸಂಘದ 31 ಸದಸ್ಯರು ತಾತ್ಕಾಲಿಕ ಮನೆ ಕಟ್ಟಿಕೊಂಡಿದ್ದರು. ಕೆಲವು ಸದಸ್ಯರು ತಮ್ಮ ನಿವೇಶನದಲ್ಲಿ ಇಲ್ಲದ ಸಂದರ್ಭದಲ್ಲಿ ಸಂಘದ ಅಂದಿನ ಅಧ್ಯಕ್ಷ ನರಸಪ್ಪ ಕೊಟಬಾಗಿ, ಸದಸ್ಯ ಮಸಣಪ್ಪ ಹಳಿಯಾಳ ಮತ್ತು ಕಾರ್ಯದರ್ಶಿ ಹೂವಪ್ಪ ಮಾಳಗಿಮನಿ ಸೇರಿ ಖಾಲಿ ನಿವೇಶನಗಳನ್ನು ಇತರ ಸಮಾಜದವರಿಗೆ ಮಾರಾಟ ಮಾಡಿ ಹಣ ಪಡೆದು ವಂಚಿಸಿದ್ದಾರೆ. ಆದ್ದರಿಂದ ನಿಯಮ ಉಲ್ಲಂಘಿಸಿ ನಿವೇಶನ ಮಾರಾಟ ಮಾಡಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಈ ಮೂಲಕ ವಂಚನೆಗೊಳಗಾದ ಸದಸ್ಯರಿಗೆ ಸಿಗಬೇಕಿರುವ ನಿವೇಶನಗಳನ್ನು ಒದಗಿಸಬೇಕು ಎಂದು ಸಹಕಾರ ಸಂಘಗಳ ಉಪನಿಬಂಧಕ ಎಂ.ಪಿ. ಶೆಲ್ಲಿಕೇರಿ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿಸಲಾಗಿದೆ.
ಮಂಜುನಾಥ ವಾಸಂಬಿ, ಭೀಮಸಿ ಕೊಟಬಾಗಿ, ಶಂಭು ಕೊಟಬಾಗಿ, ಉಳವಪ್ಪ ಕೊಟಬಾಗಿ, ಪುಂಡಲೀಕ ವಾಸಂಬಿ, ಗಂಗಾರಾಮ ನರಗುಂದ, ಯಲ್ಲವ್ವ ಬ್ಯಾಹಟ್ಟಿ, ಮಸ್ಕಪ್ಪ ಬ್ಯಾಹಟ್ಟಿ, ನಿಂಬೋಜಿ ವಾಸಂಬಿ, ನಿಂಗಪ್ಪ ನರಗುಂದ, ಮಾರುತಿ ಕೊಟಬಾಗಿ, ತಾರವ್ವ ಕೊಟಬಾಗಿ, ಗೋವಿಂದಪ್ಪ ಮಾಳಗಿಮನಿ, ನಿರ್ಮಲಾ ಕೊಟಬಾಗಿ ಇದ್ದರು.