ಚುನಾವಣೆಯಲ್ಲಿ ಗೆದ್ದು ತಕ್ಕ ಉತ್ತರ ನೀಡುವೆ: ಮುನವಳ್ಳಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 11
ನಗರದ ಗುರುಸಿದ್ದೇಶ್ವರ ಸಹಕಾರಿ ಬ್ಯಾಂಕ್ ಚುನಾವಣೆ ಫೆ. 16ರಂದು ನಡೆಯಲಿದ್ದು, ಕಳೆದ ಚುನಾವಣೆಯಂತೆ ಈ ಬಾರಿಯೂ ತಮ್ಮ ನೇತೃತ್ವದ ನಿರ್ದೇಶಕರ ತಂಡ ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿರುವ ಬ್ಯಾಂಕ್ ಚೇರ್ಮನ್ ಶಂಕರಣ್ಣ ಮುನವಳ್ಳಿ, ಚುನಾವಣೆಯಲ್ಲಿ ಗೆಲ್ಲುವ ಮೂಲಕ ತಮ್ಮ ವಿರುದ್ಧ ಆರೋಪ ಮಾಡಿರುವವರಿಗೆ ತಕ್ಕ ಉತ್ತರ ನೀಡುತ್ತೇನೆಂದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ನಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪ ನಿರಾಧಾರ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಈಗಾಗಲೇ ಮಾಧ್ಯಮದ ಮುಂದೆ ಬಿಡುಗಡೆ ಮಾಡಲಾಗಿದೆ. ತಾವು ಯಾವುದೇ ತಪ್ಪು ಮಾಡಿಲ್ಲ. ಹೀಗಿದ್ದಾಗ ಚುನಾವಣೆಯಲ್ಲಿ ಗೆಲುವಿನ ದಡ ಸೇರುವುದರಲ್ಲಿ ಸಂದೇಹವೇ ಇಲ್ಲ ಎಂದರು.
2004, 2009ರ ಚುನಾವಣೆಯಲ್ಲಿಯೂ ತಮ್ಮ ನೇತೃತ್ವದ ನಿರ್ದೇಶಕರ ತಂಡಕ್ಕೆ ಜಯ ಲಭಿಸಿತ್ತು, ಈ ಬಾರಿ ಚುನಾವಣೆಯಲ್ಲಿಯೂ ತಮ್ಮ ಬಳಗದ 11 ಸದಸ್ಯರೂ ಆಯ್ಕೆಯಾಗಲಿದ್ದಾರೆ. ಇದರ ಹೊರತಾಗಿ ಈಗಾಗಲೇ ತಿಪ್ಪಣ್ಣ ಮಜ್ಜಗಿ, ಮಾರುತಿ ಜಾಧವ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದರು. ರು. 1 ಸಾವಿರಕ್ಕಿಂತ ಹೆಚ್ಚು ಶೇರು ಹೊಂದಿರುವ 5400 ಗ್ರಾಹಕರು ಮತದಾನದ ಹಕ್ಕು ಪಡೆದಿದ್ದಾರೆ. ತಮ್ಮ ನೇತೃತ್ವದ ತಂಡದಲ್ಲಿ ತಾವು ಸೇರಿದಂತೆ ವೀರಣ್ಣ ಕಲ್ಲೂರ, ಮಹೇಶ ಟೆಂಗಿನಕಾಯಿ, ಫಕ್ಕೀರಪ್ಪ ಭೂಸದ, ವಿಜಯಾನಂದ ಹೊಸಕೋಟಿ, ಲಕ್ಷ್ಮಿಕಾಂತ ಪಾಟೀಲ, ಅರವಿಂದ ಲಿಂಬಿಕಾಯಿ, ಬಸವರಾಜ ಕುರಡಗಿಮಠ, ನಿಂಗಪ್ಪ ಮಹಾಜನಶೆಟ್ಟರ್, ಪ್ರೇಮಾ ಆರಟ್ಟಿ, ಗೀತಾ ಮುಳ್ಳಳ್ಳಿ ಸ್ಪರ್ಧಾಕಣದಲ್ಲಿದ್ದಾರೆ. 2004ಕ್ಕೂ ಮುಂಚೆ ಬ್ಯಾಂಕ್ ಮುಚ್ಚುವ ಸ್ಥಿತಿಯಲ್ಲಿತ್ತು. ತಾವು ಅಧ್ಯಕ್ಷರಾದ ಬಳಿಕ ಕಟ್ಟುನಿಟ್ಟಾಗಿ ಸಾಲ ವಸೂಲಾತಿ ಮಾಡಿದ ಪರಿಣಾಮ ಬ್ಯಾಂಕ್ ಚೇತರಿಸಿಕೊಂಡಿತು. ಇದೀಗ ಬ್ಯಾಂಕ್ ಲಾಭದತ್ತ ಮುಖ ಮಾಡಿದೆ. ಇದನ್ನು ಸಹಿಸದ ಕೆಲವರು ಬ್ಯಾಂಕ್ ಆಡಳಿತ ಮಂಡಳಿ ವಿರುದ್ಧ ಪಿತೂರಿ ಮಾಡಲೆತ್ನಿಸಿದರು. ಅವರ ದುರಾಸೆ ಕೈಗೂಡುವುದಿಲ್ಲ, ಚುನಾವಣೆಯಲ್ಲಿ ಗೆಲ್ಲುವ ಮೂಲಕ ಉತ್ತರಿಸುತ್ತೇವೆ ಎಂದರು.
ವೀರಣ್ಣ ಕಲ್ಲೂರ, ಮಹೇಶ ಟೆಂಗಿನಕಾಯಿ, ಫಕ್ಕೀರಪ್ಪ ಭೂಸದ, ಬಸವರಾಜ ಕುರಡಗಿಮಠ ಇತರರಿದ್ದರು.