ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಟ್ಟಡ ಉದ್ಘಾಟನೆ ಇಂದು

Lingaraj Badiger
Updated On : 13 Feb 2014, 11:02 am

ಹುಬ್ಬಳ್ಳಿ: ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯ ನೂತನ ಕಟ್ಟಡ ಹಾಗೂ ಚಾಲಕರ ತರಬೇತಿ ಕೇಂದ್ರದ ಉದ್ಘಾಟನೆ, ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಫೆ. 13ರಂದು ಮಧ್ಯಾಹ್ನ 3.30ಕ್ಕೆ ನಡೆಯಲಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್, ಸಂಸದ ಪ್ರಹ್ಲಾದ ಜೋಶಿ, ಶಾಸಕ ಸಿ. ಎಸ್. ಶಿವಳ್ಳಿ, ವಿನಯ ಕುಲಕರ್ಣಿ, ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಎನ್. ಎಚ್. ಕೋನರಡ್ಡಿ ಮತ್ತಿತರರು ಪಾಲ್ಗೊಳ್ಳುವರು.
ಖರೀದಿ ಕೇಂದ್ರ ಆರಂಭ
ಹುಬ್ಬಳ್ಳಿ: ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿಯಲ್ಲಿ ಕೈಗೊಂಡ ನಿರ್ಣಯದಂತೆ ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳ ಧಾರವಾಡ, ಹುಬ್ಬಳ್ಳಿ, ಕುಂದಗೋಳ, ಕಲಘಟಗಿ ಹಾಗೂ ಅಣ್ಣಿಗೇರಿ ಟಿಎಪಿಸಿಎಂಎಸ್ ಆವರಣದಲ್ಲಿ ಪ್ರತಿ ಕ್ವಿಂಟಲ್‌ಗೆ ರು. 3100 ಬೆಂಬಲ ದರದಲ್ಲಿ ಕಡಲೆಕಾಳು ಖರೀದಿ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ತಿಳಿಸಿದ್ದಾರೆ. ರೈತರು ಇದರ ಪ್ರಯೋಜನ ಪಡೆಯಬೇಕೆಂದು ಅವರು ಕೋರಿದ್ದಾರೆ.
ರು. 4 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ
ಹುಬ್ಬಳ್ಳಿ: ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ರು. 4 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾದ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜಿ. ಪರಿಮಳಾ ಎಂಬುವವರೇ ಚಿನ್ನಾಭರಣ ಕಳೆದುಕೊಂಡವರು. ಪತಿಯೊಂದಿಗೆ ಗೋವಾದಿಂದ ಧಾರವಾಡಕ್ಕೆ ಆಗಮಿಸಿದ ಅವರು, ಅಲ್ಲಿಂದ ಹುಬ್ಬಳ್ಳಿಯ ಹಳೆಬಸ್ ನಿಲ್ದಾಣಕ್ಕೆ ಬಂದಾಗ ಬ್ಯಾಗ್ ಪರಿಶೀಲಿಸಿದಾಗ ಚಿನ್ನಾಭರಣ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ.
ಚಿನ್ನದ ಸರ ಕಳ್ಳತನ
ಹುಬ್ಬಳ್ಳಿ: ಚಿನ್ನಾಭರಣ ಕೊಳ್ಳುವ ನೆಪದಲ್ಲಿ ಚಿನ್ನದಂಗಡಿಗೆ ನುಗ್ಗಿದ ಕಳ್ಳರು ರು. 1.10 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ದುರ್ಗದ ಬೈಲ್‌ನಲ್ಲಿರುವ ಶುಭಂ ಚಿನ್ನದಂಗಡಿಯಲ್ಲಿ ನಡೆದಿದೆ. ಚಿನ್ನಾಭರಣ ಖರೀದಿಯ ನೆಪ ಮಾಡಿಕೊಂಡ ಬಂದ ಇಬ್ಬರು ಮಹಿಳೆ ಹಾಗೂ ಮತ್ತೊಬ್ಬ ಯುವಕ, ಅಂಗಡಿ ಮಾಲೀಕನನ್ನು ಯಾಮಾರಿಸಿ ಚಿನ್ನದ ಸರ ಕದ್ದೊಯ್ದಿದ್ದಾರೆ. ಅಂಗಡಿಯ ಸಿಸಿ ಟಿವಿಯಲ್ಲಿ ಕಳ್ಳತನದ ದೃಶ್ಯ ಅಸ್ಪಷ್ಟವಾಗಿ ಸೆರೆಯಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಪಿಐ ಶ್ಯಾಮರಾವ್ ಸಜ್ಜನ ತನಿಖೆ ಕೈಗೊಂಡಿದ್ದಾರೆ.
ಜೂಜುಕೋರರ ಬಂಧನ
ಹುಬ್ಬಳ್ಳಿ: ಇಲ್ಲಿನ ಹಳ್ಯಾಳ ಗ್ರಾಮದ ಸರ್ಕಾರಿ ಕನ್ನಡ ಶಾಲೆಯ ಹಿಂಬಂದಿಯಲ್ಲಿ ಇಸ್ಪೀಟ್ ಆಡದಲ್ಲಿ ತೊಡಗಿದ್ದ ಆರು ಜನರನ್ನು ಬಂಧಿಸಿರುವ ಗ್ರಾಮೀಣ ಪೊಲೀಸರು ಬಂಧಿತರಿಂದ ರು. 6,430 ನಗದ ವಶ ಪಡಿಸಿಕೊಂಡಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ: ಮೂವರ ಬಂಧನ
ಹುಬ್ಬಳ್ಳಿ: ಬೊಲೇರೋ ವಾಹನದಲ್ಲಿ ಬಂದ ಐದಾರು ಯುವಕರು ವ್ಯಕ್ತಿಯೋರ್ವನನ್ನು ಮನ ಬಂದಂತೆ ಥಳಿಸಿ, ಆತನ ಕಣ್ಣಿಗೆ ಚಾವಿಯಿಂದ ಚುಚ್ಚಿ ಗಾಯಗೊಳಿಸಿದ ಘಟನೆ ಅಂಚಟಗೇರಿ ಬಳಿಯ ಹಿಂದೂಸ್ತಾನ ದಾಬಾ ಬಳಿ ನಡೆದಿದೆ. ಅಂಚಟಗೇರಿ ಗ್ರಾಮದ ಜಗದೀಶ ಬಿಡ್ನಾಳ (21) ಹಲ್ಲೆಗೊಳಗಾಗಿದ್ದು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಬಾದ ಬಳಿ ಯರ್ರಾಬಿರ್ರಿಯಾಗಿ ವಾಹನ ಓಡಿಸಿಕೊಂಡ ಬಂದ ಯುವಕರಿಗೆ ಬುದ್ಧಿವಾದ ಹೇಳಿದ್ದಕ್ಕೆ ಜದಗೀಶನನ್ನು ಥಳಿಸಲಾಗಿದೆ. ಹಲ್ಲೆ ನಡೆಸಿದ ಯುಸೂಫ್ ದರ್ಗಾ ಆತನ ಇಬ್ಬರು ಸ್ನೇಹಿತರನ್ನು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement